ಸಚಿವ ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬ

Update: 2019-12-22 14:09 GMT

ಬೆಂಗಳೂರು, ಡಿ. 22: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರಕಾರದ ಸಚಿವ ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬ ಆಗಲಿದ್ದು, ಹೊಸ ವರ್ಷಕ್ಕೆ ಹೊಸ ಸಂಪುಟ ಅಸ್ತಿತ್ವಕ್ಕೆ ಬರುವ ಸಾಧ್ಯತೆಗಳಿವೆ.

ಜಾರ್ಖಂಡ್ ಚುನಾವಣೆ ಫಲಿತಾಂಶದ ಬಳಿಕ ಯಡಿಯೂರಪ್ಪ ಹೊಸದಿಲ್ಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಗೆ ಸಮಯವೂ(ಡಿ.24) ನಿಗದಿಯಾಗಿತ್ತು. ಆದರೆ ಅವರು ಪೌರತ್ವ ತಿದ್ದುಪಡಿ ಕಾಯ್ದೆ ವಿವಾದದಲ್ಲಿ ಮುಳುಗಿದ್ದಾರೆ. ಹೀಗಾಗಿ ಸಚಿವ ಸಂಪುಟ ವಿಸ್ತರಣೆಗೆ ಸಮಯ ನೀಡಲು ಬಿಜೆಪಿ ವರಿಷ್ಠರಿಗೆ ಸಾಧ್ಯವಾಗುತ್ತಿಲ್ಲ. ಅಲ್ಲದೆ, ಉಪ ಚುನಾವಣೆಯಲ್ಲಿ ಆಯ್ಕೆಯಾಗಿರುವ ನೂತನ ಶಾಸಕರ ಪೈಕಿ ಕೆಲವರು ‘ಧನುರ್ಮಾಸ’ದ ಕಾರಣ ಸಂಪುಟ ಸೇರ್ಪಡೆಗೆ ಸಿದ್ದರಿಲ್ಲದ ಕಾರಣ ಸದ್ಯಕ್ಕೆ ಬಿಎಸ್‌ವೈ ನಿರಾಳರಾಗಿದ್ದಾರೆ.

ಸಂಪುಟ ಸೇರ್ಪಡೆಗೆ ತುದಿಗಾಲ ಮೇಲೆ ನಿಂತಿದ್ದ ‘ಅರ್ಹ’ ಶಾಸಕರ ಒತ್ತಡವಿಲ್ಲದ ಕಾರಣ ಸಿಎಂ ಯಡಿಯೂರಪ್ಪ ಸರಣಿ ಪ್ರವಾಸ ಕಾರ್ಯಕ್ರಮ ಹಾಕಿಕೊಂಡಿದ್ದಾರೆ. ಡಿ.23ರಿಂದ 29ರ ವರೆಗೆ ರೈತ ಸಮಾವೇಶ, ದೇವಸ್ಥಾನಗಳ ಭೇಟಿ ಸೇರಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಜ.2ಕ್ಕೆ ಪ್ರಧಾನಿ ಆಗಮನ: ಪ್ರಧಾನಿ ಮೋದಿ 2020ರ ಜ.2ರಂದು ಖಾಸಗಿ ಕಾರ್ಯಕ್ರಮ ನಿಮಿತ್ತ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ವೇಳೆ ರಾಜ್ಯದ ವಿದ್ಯಮಾನಗಳ ಬಗ್ಗೆ ಯಡಿಯೂರಪ್ಪ ಚರ್ಚೆ ನಡೆಸುವ ಸಾಧ್ಯತೆಗಳಿವೆ. ಆ ಬಳಿಕ ದಿಲ್ಲಿಗೆ ತೆರಳಿ ಸಂಪುಟ ವಿಸ್ತರಣೆ ಬಗ್ಗೆ ಶಾ ಜತೆ ಚರ್ಚಿಸಲಿದ್ದಾರೆಂದು ಹೇಳಲಾಗಿದೆ.

ಡಿಸಿಎಂ ಗೊಂದಲ: ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಶ್ರೀರಾಮುಲು, ‘ಅರ್ಹ’ ಶಾಸಕ ರಮೇಶ್ ಜಾರಕಿಹೊಳಿ ನಡುವೆ ತೀವ್ರ ಪೈಪೋಟಿ ಸೃಷ್ಟಿಸಿದೆ. ಹೀಗಾಗಿ ಡಿಸಿಎಂ ಹುದ್ದೆ ಬಿಜೆಪಿ ಸರಕಾರಕ್ಕೆ ತಲೆನೋವು ತಂದಿದೆ. ಆ ಹಿನ್ನೆಲೆಯಲ್ಲಿ ಬಿಎಸ್‌ವೈ ಗುಂಪುಗಾರಿಕೆ ಸೃಷ್ಟಿಸುವ ಡಿಸಿಎಂ ಹುದ್ದೆ ಬೇಡ ಎಂದು ವರಿಷ್ಠರಿಗೆ ಕೋರಿದ್ದಾರೆಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News