ಬೆಂಗಳೂರು: ಸಿಎಎ, ಎನ್‌ಆರ್‌ಸಿ ವಿರುದ್ಧ ಬೀದಿಗಿಳಿದ ವಿದ್ಯಾರ್ಥಿಗಳು, ಕಲಾವಿದರು, ಸಾಹಿತಿಗಳು

Update: 2019-12-22 15:14 GMT

ಬೆಂಗಳೂರು, ಡಿ.22: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‌ಆರ್‌ಸಿಯನ್ನು ವಿರೋಧಿಸಿ ವಿದ್ಯಾರ್ಥಿಗಳು, ಕಲಾವಿದರು ಹಾಗೂ ಸಾಹಿತಿಗಳು ನಗರದ ಪುರಭವನದ ಮುಂಭಾಗ ಕವನ, ವ್ಯಂಗ್ಯಚಿತ್ರ, ಪೋಸ್ಟರ್‌ಗಳನ್ನು ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಿದರು.

ರವಿವಾರ ಬಹುತ್ವ ಭಾರತ, ಬಲಿಷ್ಟ ಭಾರತಕ್ಕಾಗಿ ಸಿಎಎ, ಎನ್‌ಆರ್‌ಸಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಸಾವಿರಾರು ವಿದ್ಯಾರ್ಥಿಗಳು, ನಾವು ಭಾರತೀಯರು, ಹಿಂದೂ, ಮುಸ್ಲಿಮ್ ಸಹೋದರರಾಗಿ ಬದುಕುತ್ತಿದ್ದೇವೆ. ನಮ್ಮನ್ನು ಧರ್ಮಾಧಾರಿತವಾಗಿ ವಿಭಜಿಸುವಂತಹ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿ ಮಾಡಲು ಬಿಡುವುದಿಲ್ಲವೆಂದು ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಹಿರಿಯ ಸಾಹಿತಿ ಮರುಳಸಿದ್ದಪ್ಪ ಮಾತನಾಡಿ, ಧರ್ಮ ಹಾಗೂ ಜಾತಿಯ ಆಧಾರದ ಮೇಲೆ ವಿಭಜಿಸುವಂತಹ ಸಿಎಎ, ಎನ್‌ಆರ್‌ಸಿ ಕಾಯ್ದೆಯು ಭಾರತದ ಬಹುಸಂಸ್ಕೃತಿ ಹಾಗೂ ಸಂವಿಧಾನದ ಮೂಲಕ ಆಶಯಗಳಿಗೆ ಧಕ್ಕೆ ತರುವಂತಹದ್ದಾಗಿದೆ. ಇದನ್ನು ಈ ದೇಶದ ಪ್ರಜೆಯಾಗಿ ಯಾರೊಬ್ಬರು ಒಪ್ಪಿಕೊಳ್ಳಲು ಸಾಧ್ಯವಿಲ್ಲವೆಂದು ತಿಳಿಸಿದರು.

ಸಿಎಎ ಕಾಯ್ದೆಯನ್ನು ಮನಮೋಹನ್‌ ಸಿಂಗ್ ಪ್ರಧಾನಿಯಾಗಿದ್ದಾಗ ಜಾರಿಗೆ ತಂದರೆಂದು ಬಿಜೆಪಿ ನಾಯಕರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಮುಸ್ಲಿಮರನ್ನು ಪ್ರತ್ಯೇಕಿಸಿ ಧರ್ಮಾಧಾರಿತವಾಗಿ ಪೌರತ್ವ ತಿದ್ದುಪಡಿ ಕಾಯ್ದೆ ರೂಪಿಸಿಯೆಂದು ಮನಮೋಹನ್ ಸಿಂಗ್ ಹೇಳಿಲ್ಲ. ಪ್ರಧಾನಿ ನರೇಂದ್ರ ಮೋದಿ ಜನತೆಯ ಅಭಿಪ್ರಾಯಕ್ಕೆ ತಲೆತೂಗಿ ಜನವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಅವರು ಒತ್ತಾಯಿಸಿದರು.

ಹಿರಿಯ ಸಾಹಿತಿ ಬೊಳುವಾರು ಮುಹಮ್ಮದ್ ಕುಂಞ ಮಾತನಾಡಿ, ಸಿಎಎ ಹಾಗೂ ಎನ್‌ಆರ್‌ಸಿ ಕಾಯ್ದೆಯಿಂದ ಕೇವಲ ಮುಸ್ಲಿಮರಿಗೆ ಮಾತ್ರ ಸಮಸ್ಯೆಯಾಗುವುದಿಲ್ಲ. ಈ ದೇಶದ ಆದಿವಾಸಿಗಳು, ಅಲೆಮಾರಿಗಳು, ದಲಿತರು ಸೇರಿದಂತೆ ಬಡವರ ಬದುಕನ್ನು ಸರ್ವನಾಶ ಮಾಡುವಂತಹದ್ದಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಸರಕಾರ ಸಿಎಎ, ಎನ್‌ಆರ್‌ಸಿ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡುತ್ತಿಲ್ಲ. 1970ಕ್ಕೂ ಹಿಂದಿನ ವರ್ಷದ ದಾಖಲೆಗಳನ್ನು ಸಲ್ಲಿಸಬೇಕೆಂದು ಹೇಳಲಾಗುತ್ತಿದೆ. ಈ ದಾಖಲೆಗಳು ಬಡವರು, ಅನಕ್ಷರಸ್ಥರ ಬಳಿ ಇರಲು ಸಾಧ್ಯವೇ. ಹೀಗಾಗಿ ಇಂತಹ ಜನವಿರೋಧಿ ಕಾಯ್ದೆಯ ವಿರುದ್ಧ ಹೋರಾಟ ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.

ಪ್ರತಿಭಟನೆಯಲ್ಲಿ ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ರಂಗಕರ್ಮಿ ಪ್ರಸನ್ನ, ಹಿರಿಯ ಪತ್ರಕರ್ತೆ ವಿಜಯಮ್ಮ, ಸಿಪಿಎಂ ನಾಯಕ ಜಿ.ಎನ್.ನಾಗರಾಜ್, ಸಿಐಟಿಯುನ ಕೆ.ಎನ್.ಉಮೇಶ್, ಜನವಾದಿಯ ವಿಮಲಾ, ಲೇಖಕ ಯೋಗೇಶ್ ಮಾಸ್ಟರ್ ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಆವರಣಕ್ಕೆ ಪೊಲೀಸರು ಅನುಮತಿಯಿಲ್ಲದೆ ಪ್ರವೇಶಿಸಿ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿರುವುದು ದೇಶದ ಇತಿಹಾಸದಲ್ಲೇ ಹಿಂದೆಂದೂ ಕಂಡಿರಲಿಲ್ಲ. ವಿದ್ಯಾರ್ಥಿಗಳನ್ನು ಭಯೋತ್ಪಾದಕರಂತೆ ನೋಡಿ, ಅವರ ಮೇಲೆ ಲಾಠಿಚಾರ್ಜ್, ಗುಂಡು ಹಾರಿಸಿರುವುದು ಖಂಡನೀಯ.

-ಹರ್ಷ ಮಂದಾರ್, ಮಾನವ ಹಕ್ಕು ಹೋರಾಟಗಾರ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News