ಪೌರತ್ವ ಕಾಯ್ದೆ ತಡೆಯಲು 2 ಮಾರ್ಗಗಳನ್ನು ಸೂಚಿಸಿದ ಪ್ರಶಾಂತ್ ಕಿಶೋರ್

Update: 2019-12-22 17:03 GMT
ಫೋಟೊ ಕೃಪೆ : IANS

ಹೊಸದಿಲ್ಲಿ, ಡಿ.22: ಪೌರತ್ವ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ತೀವ್ರಗೊಳ್ಳುತ್ತಿರುವಂತೆಯೇ, ಕಾಯ್ದೆ ಜಾರಿಯಾಗದಂತೆ ತಡೆಯುವ ಎರಡು ಪರಿಣಾಮಕಾರಿ ಮಾರ್ಗಗಳಿವೆ ಎಂದು ಜೆಡಿಯು ಮುಖಂಡ ಪ್ರಶಾಂತ್ ಕಿಶೋರ್ ಮಾಡಿರುವ ಟ್ವೀಟ್ ಗಮನ ಸೆಳೆದಿದೆ.

ಪೌರತ್ವ ಕಾಯ್ದೆ ಮತ್ತು ಎನ್‌ಆರ್‌ಸಿ ಕುರಿತು ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಶಾಂತ್ ಕಿಶೋರ್ , ಇದನ್ನು ಜಾರಿಯಾಗದಂತೆ ತಡೆಯಲು ಎರಡು ಪರಿಣಾಮಕಾರಿ ಮಾರ್ಗಗಳಿವೆ ಎಂದು ಹೇಳಿದ್ದಾರೆ. ಒಂದನೆಯದು- ಎಲ್ಲಾ ವೇದಿಕೆಗಳಲ್ಲೂ ಧ್ವನಿ ಎತ್ತುವ ಮೂಲಕ ಶಾಂತರೀತಿಯಲ್ಲಿ ಪ್ರತಿಭಟನೆ ಮುಂದುವರಿಸುವುದು, ಎರಡನೆಯದು , ಬಿಜೆಪಿಯೇತರ ಸರಕಾರವಿರುವ 16 ರಾಜ್ಯಗಳಲ್ಲಿ ಹೆಚ್ಚಿನ ರಾಜ್ಯಗಳ ಮುಖ್ಯಮಂತ್ರಿಗಳು ಈ ಕಾಯ್ದೆಯನ್ನು ಜಾರಿಗೊಳಿಸಲು ನಿರಾಕರಿಸುವುದು. ಉಳಿದ ವಿಧಾನಗಳೂ ಕೂಡಾ ಮಹತ್ವದ್ದು ಎಂದು ಪ್ರಶಾಂತ್ ಕಿಶೋರ್ ಟ್ವೀಟ್ ಮಾಡಿದ್ದಾರೆ.

ಚುನಾವಣಾ ತಂತ್ರಗಾರಿಕೆ ಪ್ರವೀಣ ಎಂದು ಹೆಸರಾಗಿರುವ ಪ್ರಶಾಂತ್ ಕಿಶೋರ್ ‘ಇಂಡಿಯನ್ ಪೊಲಿಟಿಕಲ್ ಆ್ಯಕ್ಷನ್ ಕಮಿಟಿ’ ಎಂಬ ಸಲಹಾ ಸಂಸ್ಥೆಯನ್ನು ಸ್ಥಾಪಿಸಿದ್ದು 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಚುನಾವಣಾ ತಂತ್ರಗಾರಿಕೆ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಳಿಕ ಅವರು ಜೆಡಿಯು ಪಕ್ಷಕ್ಕೆ ಸೇರಿದ್ದರು. ಜೆಡಿಯು ಪಕ್ಷವು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಮೈತ್ರಿಕೂಟದ ಪಕ್ಷವಾಗಿದೆ.

ಬಿಹಾರದಲ್ಲಿ ಎನ್‌ಆರ್‌ಸಿಯ ಅಗತ್ಯವಿಲ್ಲವೆಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಭರವಸೆ ನೀಡಿರುವುದಾಗಿ ಕಿಶೋರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News