ಕಾಶ್ಮೀರದಲ್ಲಿ ಮತ್ತೆ ಉಗ್ರವಾದವನ್ನು ಅಪ್ಪಿಕೊಳ್ಳುವ ಮನಃಸ್ಥಿತಿ

Update: 2019-12-22 17:15 GMT

 ಹೊಸದಿಲ್ಲಿ,ಡಿ.22: ಪ್ರತಿಭಟನೆಗಳು ಮತ್ತು ಕಾನೂನು ಅಸಹಕಾರ ಭಾರತ ಸರಕಾರದ ಮೇಲೆ ಯಾವುದೇ ಪರಿಣಾಮವನ್ನುಂಟು ಮಾಡುವುದಿಲ್ಲ ಎಂದು ಕಾಶ್ಮೀರದಲ್ಲಿನ ಜನರು ಈಗ ಭಾವಿಸುತ್ತಿದ್ದಾರೆ. ಹೀಗಾಗಿ ಸರಕಾರದ ನಿಲುವಿನಲ್ಲಿ ಬದಲಾವಣೆ ತರಲು ಏನು ಮಾಡಬೇಕು ಎಂದು ಅವರು ಪ್ರಶ್ನಿಸುತ್ತಿದ್ದಾರೆ. ಇಂತಹ ಪ್ರಶ್ನೆಗಳು ತಲೆಎತ್ತುತ್ತಿರುವುದು ವಾಸ್ತವದಲ್ಲಿ ಉಗ್ರವಾದದ ಹೊಸ ಹಂತಕ್ಕೆ ಬುನಾದಿಯನ್ನು ಸಿದ್ಧಗೊಳಿಸುತ್ತಿರಬಹುದು ಎಂದು 370ನೇ ವಿಧಿಯ ರದ್ದತಿಯ ಬಳಿಕ ಕಾಶ್ಮೀರಕ್ಕೆ ಎರಡು ಬಾರಿ ಭೇಟಿ ನೀಡಿದ್ದ ಮಾಜಿ ಕೇಂದ್ರಸಚಿವ ಯಶವಂತ ಸಿನ್ಹಾ ನೇತೃತ್ವದ ಕನ್ಸರ್ನ್ಡ್ ಸಿಟಿಝನ್ಸ್ ಗ್ರೂಪ್ (ಸಿಸಿಜಿ) ತನ್ನ ವರದಿಯಲ್ಲಿ ಹೇಳಿದೆ.

ಸಿನ್ಹಾ,ನಿವೃತ್ತ ಏರ್ ವೈಸ್ ಮಾರ್ಷಲ್ ಕಪಿಲ ಕಾಕ್,ಸುಶೋಭಾ ಬರ್ವೆ ಮತ್ತು ಭರತ ಭೂಷಣ್ ಅವರನ್ನೊಳಗೊಂಡ ನಾಲ್ವರು ಸಿಸಿಜಿ ಸದಸ್ಯರ ತಂಡವು ಕಾಶ್ಮೀರ ಕಣಿವೆಯಲ್ಲಿನ ಜನರ ಮನಃಸ್ಥಿತಿಯನ್ನು ಅರಿಯಲು ಸೆ.17ರಂದು ಮೊದಲ ಬಾರಿಗೆ ಶ್ರೀನಗರಕ್ಕೆ ತೆರಳಿತ್ತು. ಗುಂಪಿನ ಐದನೇ ಸದಸ್ಯ ವಜಾಹತ್ ಹಬೀಬುಲ್ಲಾ ಅವರು ಅದಾಗಲೇ ಶ್ರೀನಗರದಲ್ಲಿದ್ದರು. ಆದರೆ ಭದ್ರತಾ ಪಡೆಗಳು ಅವರನ್ನು ವಿಮಾನ ನಿಲ್ದಾಣದಿಂದ ಹೊರಗೆ ಹೋಗಲು ಅವಕಾಶ ನೀಡಿರಲಿಲ್ಲ ಮತ್ತು ಅದೇ ದಿನ ದಿಲ್ಲಿಗೆ ವಾಪಸ್ ಕಳುಹಿಸಿದ್ದವು. ಗುಂಪು ನ.22ರಿಂದ 26ರವರೆಗೆ ಶ್ರೀನಗರಕ್ಕೆ ಎರಡನೇ ಭೇಟಿ ನೀಡಿತ್ತು.

ಭಾರತ ಸರಕಾರವು ಸೈದ್ಧಾಂತಿಕ ಉನ್ನತಿಯಲ್ಲಿದೆ,ಹೀಗಾಗಿ ತನ್ನ ಕ್ರಮಗಳು ಮತ್ತು ಪ್ರಕಟಣೆಗಳು ಜಮ್ಮು-ಕಾಶ್ಮೀರ ದಲ್ಲಿಯ ಉಗ್ರಗಾಮಿ ಶಕ್ತಿಗಳನ್ನೂ ಉತ್ತೇಜಿಸುತ್ತಿರುವುದು ಮತ್ತು ಪ್ರಚೋದಿಸುತ್ತಿರುವುದು ಅದಕ್ಕೆ ಕಂಡು ಬರುತ್ತಿಲ್ಲ. ಇದರಿಂದ ಉತ್ತೇಜಿತಗೊಂಡಿರುವ ಅವರು ತಮ್ಮ ನಿಲುವು ಸರಿಯಾಗಿತ್ತು ಎನ್ನುವುದು ಸಾಬೀತಾಗಿದೆ ಎಂದು ಹೇಳುತ್ತಿದ್ದಾರೆ. ಯಾವುದೇ ಕುತಂತ್ರವಿಲ್ಲದೆ ಸಂಘರ್ಷದ ದಾರಿಯನ್ನು ಗುರುತಿಸಿರುವ ನರೇಂದ್ರ ಮೋದಿ ತಮ್ಮ ಮಿತ್ರರಾಗಿದ್ದಾರೆ ಎಂದು ಉಗ್ರರು ಮತ್ತು ಮಾಜಿ ಉಗ್ರರ ಒಂದು ವರ್ಗವು ಹೇಳುತ್ತಿದೆ ಎಂದು ಹೇಳಿರುವ ವರದಿಯು ಹಣಕಾಸು ಕ್ರಿಯಾ ಕಾರ್ಯ ಪಡೆ (ಎಫ್‌ಎಟಿಎಫ್)ಯಿಂದ ನಿರ್ಬಂಧಕ್ಕೊಳಗಾಗುವ ಭೀತಿಯಿಂದ ಪಾಕಿಸ್ತಾನವು ಭಯೋತ್ಪಾದನೆಗೆ ಆರ್ಥಿಕ ನೆರವು ಮತ್ತು ಶಸ್ತ್ರಾಸ್ತ್ರ ಪೂರೈಕೆಯನ್ನು ನಿಲ್ಲಿಸಿರುವ ಈ ಸಂದರ್ಭದಲ್ಲಿ ಕಾಶ್ಮೀರದಲ್ಲಿ ಉಗ್ರವಾದವನ್ನು ಒಪ್ಪಿಕೊಳ್ಳುವ ಮನಃಸ್ಥಿತಿ ಹೆಚ್ಚುತ್ತಿದೆ ಎಂದಿದೆ.

ಆತ್ಮಹತ್ಯಾ ಜಾಕೆಟ್‌ಗಳನ್ನು ಧರಿಸಬೇಕು ಎನ್ನುವದು ಕಾಶ್ಮೀರಿಗರ ಈಗಿನ ಮನಃಸ್ಥಿತಿಯಾಗಿದೆ. ಉನ್ನತ ವರ್ಗಗಳ ಕುಟುಂಬಗಳ ಸದಸ್ಯರೂ ಉಗ್ರವಾದಿಗಳಾಗಲು ಬಯಸುತ್ತಿದ್ದಾರೆ. ಭಾರತವು ತಮಗೇನೂ ನೀಡಲು ಸಾಧ್ಯವಿಲ್ಲ, ಹೀಗಾಗಿ ಭಾರತದಿಂದ ತಾವೇನನ್ನೂ ನಿರೀಕ್ಷಿಸುತ್ತಿಲ್ಲ ಎಂದು ಅವರು ಈಗ ಹೇಳುತ್ತಿದ್ದಾರೆ ಎಂದು ವರದಿಯು ಕಾಶ್ಮೀರಿ ಮಧ್ಯವರ್ತಿಗಳನ್ನು ಉಲ್ಲೇಖಿಸಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News