ಕಾವ್ಯವೆಂದರೆ ದುಃಖದ ಅಭಿವ್ಯಕ್ತಿಯಲ್ಲ: ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್

Update: 2019-12-22 17:44 GMT

ಬೆಂಗಳೂರು, ಡಿ.22: ಕಾವ್ಯವೆಂದರೆ ದುಃಖದ ಅಭಿವ್ಯಕ್ತಿಯಲ್ಲ. ಅದರಲ್ಲಿ ರಚನಕಾರರ ಖುಷಿ, ಭಕ್ತಿ, ಪ್ರೀತಿ ಎಲ್ಲವೂ ಒಳಗೊಂಡಿರುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ಚಾಮರಾಜಪೇಟೆಯ ಕಸಾಪ ಸಭಾಂಗಣದಲ್ಲಿ ಸಿರಿವರ ಪ್ರಕಾಶನ, ರಂಗಮಂಡಲ ಜಂಟಿ ಆಶ್ರಯದಲಲಿಏರ್ಪಡಿಸಿದ್ದ ಡಿ.ಟಿ ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಅವರ ‘ಆಲಿಕಲ್ಲು’ ಕವಿತಾ ಸಂಕಲನ ಲೋಕಾರ್ಪಣೆ ಮಾತನಾಡಿದ ಅವರು, ಸಾಹಿತಿಗಳಿಗೆ ಒತ್ತಡಗಳು ಇದ್ದೇ ಇರುತ್ತವೆ. ಆ ಒತ್ತಡಗಳನ್ನು ಬದಿಗಿಟ್ಟು ರಚನೆಗಾರ ಕಾವ್ಯ ರಚಿಸಿದರೆ ಅವನಲ್ಲಿರುವ ನೋವು, ಸಂಕಟ, ಸಿಟ್ಟು, ಸಂಕೋಚ ಆಚೆ ಬರಲು ಸಾಧ್ಯ. ಕಾವ್ಯ ಮನಸ್ಸಿನಲ್ಲಿ ಮೂಡಿದಾಗ ಅದನ್ನು ಅದುಮಿಡಲು ಸಾಧ್ಯವಿಲ್ಲ. ಸಾಹಿತ್ಯಕ್ಕೆ ಮಾನವನ ವಿಕಸನ ಶಕ್ತಿ ಇದೆ ಎಂದರು.

ಸಾಹಿತಿ ಡಾ.ಬೈರಮಂಗಲ ರಾಮೇಗೌಡ ಮಾತನಾಡಿ, ಮನಸ್ಸಿನ ಭಾವನೆ, ತಲ್ಲಣ, ತುಡಿತ-ಮಿಡಿತಗಳು ಸ್ಪೋಟಗೊಂಡು ಕಾವ್ಯದ ರೂಪ ಪಡೆಯುತ್ತವೆ. ಕನ್ನಡ ಸಾಹಿತ್ಯವು ಮೊದಲಿನಿಂದಲೂ ತನ್ನದೇ ಆದ ಕಾವ್ಯಮೀಮಾಂಸೆಯನ್ನು ಮಾಡಿ, ಅದರಲ್ಲಿ ಯಶಸ್ವಿಯಾಗಿದೆ. ಈ ಪ್ರಯತ್ನದಲ್ಲಿ ಅದು ಸಂಸ್ಕೃತ ಮತ್ತು ಇಂಗ್ಲಿಷ್ ಸಾಹಿತ್ಯಗಳ ಸಂದರ್ಭದಲ್ಲಿ ಮೂಡಿಬಂದ ಸಾಹಿತ್ಯ ಸಿದ್ಧಾಂತಗಳಿಂದ ಪ್ರಬಲ ಸವಾಲನ್ನು ಎದುರಿಸಿತು ಎಂದರು.

ವಿಧಾನ ಪರಿಷತ್ತಿನ ಮಾಜಿ ಸದಸ್ಯ ಡಿ.ಎಸ್.ವೀರಯ್ಯ ಮಾತನಾಡಿ, ಮಹಾಮನೆ ಅವರು ಬಡವರು, ದಲಿತರ ಪರವಾಗಿ ಸಾಕಷ್ಟು ಕೃತಿಗಳನ್ನು ಬರೆದಿದ್ದಾರೆ. ಸಹಕಾರಿ ಮನೋಭಾವನೆ ಹೊಂದಿರುವ ಮಹಾಮನೆ, ಬದುಕಿನಲ್ಲಿ ಸಾಕಷ್ಟು ಸುಖ, ದುಃಖಗಳನ್ನು ಹೊಂದಿದ್ದರೂ ಇತರರಿಗೆ ಸಹಕಾರ ಮಾಡುವ ಮನೋಭಾವನೆ ಹೊಂದಿದ್ದಾರೆ.

ಅವರು ಯಾವುದೇ ಪ್ರಶಸ್ತಿ ಪದವಿಯ ಹಿಂದೆ ಹೋಗಿಲ್ಲ. ಹಾಗಾಗಿ, ಮಹಾಮನೆ ಅವರಿಗೆ ಪ್ರಶಸ್ತಿಗಳು ಬಂದಿಲ್ಲ. ಶ್ರಮಕ್ಕೆ ಪ್ರತಿಫಲ ಬಯಸುವುದಿಲ್ಲ. ಉತ್ತಮವಾದ ಅಂಶಗಳು, ಭಾವನಗಳನ್ನು ಕವಿತಾ ಸಂಕಲನದಲ್ಲಿ ಪ್ರಕಟಿಸಿದ್ದಾರೆಂದು ಹೇಳಿದರು. ವಿಮರ್ಶಕ ಡಾ.ಎಚ್.ದಂಡಪ್ಪ, ಪ್ರಕಾಶಕ ರವೀಂದ್ರನಾಥ ಸಿರಿವರ, ರಂಗಕಲಾವಿದ ಶಿವಲಿಂಗಪ್ರಸಾದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News