ಪೌರತ್ವ ಕಾಯ್ದೆಯಿಂದ ನೆರೆಹೊರೆಯ ದೇಶಗಳ ಮೇಲೂ ಪರಿಣಾಮ: ಬಾಂಗ್ಲಾ ಆತಂಕ

Update: 2019-12-22 17:51 GMT
ಫೊಟೋ ಕೃಪೆ: facebook

ಢಾಕಾ,ಡಿ.21: ಸಿಎಎ ಹಾಗೂ ಎನ್‌ಆರ್‌ಸಿಯು ಭಾರತದ ಆಂತರಿಕ ವಿಷಯಗಳೆಂದು ಬಾಂಗ್ಲಾದೇಶ ರವಿವಾರ ಸ್ಪಷ್ಟಪಡಿಸಿದೆ.

ಆದರೆ ಆ ದೇಶದಲ್ಲಿ ನಡೆಯುವ ಯಾವುದೇ ಅನಿಶ್ಚಿತತೆಯ ವಾತಾವರಣವು ನೆರೆಹೊರೆಯ ರಾಷ್ಟ್ರಗಳನ್ನು ಕೂಡಾ ಬಾಧಿಸುವ ಸಾಧ್ಯತೆಯಿದೆ ಎಂದು ಬಾಂಗ್ಲಾದ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್ ಮೊಮೆನ್ ಕಳವಳ ವ್ಯಕ್ತಪಡಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೇಶಾದ್ಯಂತ ಭಾರತದಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.

‘‘ಪೌರತ್ವ ತಿದ್ದುಪಡಿ ಕಾಯ್ದೆ (ಸಿಸಿಎ) ಹಾಗೂ ರಾಷ್ಟ್ರೀಯ ಪೌರರ ನೋಂದಣಿ (ಎನ್‌ಆರ್‌ಸಿ)ಯು ಭಾರತದ ಆಂತರಿಕ ವಿಷಯಗಳಾಗಿವೆ. ಎನ್‌ಆರ್‌ಸಿ, ಸಿಎಎ ವಿವಾದಗಳು ಭಾರತದ ಆಂತರಿಕ ಸಂಗತಿಳೆಂದು ಭಾರತ ಸರಕಾರವು ನಮಗೆ ಪದೇ ಪದೇ ಭರವಸೆ ನೀಡಿದೆ. ಕಾನೂನು ಮತ್ತಿತರ ಕಾರಣಗಳಿಗಾಗಿ ಅವರು ಈ ಕಾನೂನುಗಳನ್ನು ಜಾರಿಗೊಳಿಸಹೊರಟಿದ್ದಾರೆ’’ ಎಂದು ಬಾಂಗ್ಲಾದ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್ ಮೊಮೆನ್ ತಿಳಿಸಿದ್ದಾರೆ.

ಭಾರತದ ಹಲವೆಡೆ ಅದರಲ್ಲೂ ವಿಶೇಷವಾಗಿ ಈಶಾನ್ಯ ಭಾರತದ ರಾಜ್ಯ್ಯಗಳಲ್ಲಿ ಸಿಎಎ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಮೊಮೆನ್ ಅವರನ್ನು ಢಾಕಾದಲ್ಲಿ ಸುದ್ದಿಗಾರರು ಪ್ರಶ್ನಿಸಿದಾಗ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.

 ಆದರೆ ಯಾವುದೇ ಸಂದರ್ಭದಲ್ಲಿಯೂ ಸಿಸಿಎ ಅಥವಾ ಎನ್‌ಆರ್‌ಸಿಯು, ಬಾಂಗ್ಲಾದೇಶದ ಮೇಲೆ ಪರಿಣಾಮವನ್ನು ಬೀರುವುದಿಲ್ಲವೆಂದು ಪ್ರಧಾನಿ ನರೇಂದ್ರ ಮೋದಿಯವರು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರಿಗೆ ಭರವಸೆ ನೀಡಿದ್ದಾರೆಂದು ಮೊಮೆನ್ ಹೇಳಿದ್ದಾರೆ.

 ಆದರೆ ಭಾರತದಲ್ಲಿ ಪ್ರಸಕ್ತ ಸನ್ನಿವೇಶ ಶಮನಗೊಳ್ಳಲಿದೆ ಹಾಗೂ ಆ ದೇಶವು ಈ ಬಿಕ್ಕಟ್ಟಿನಿಂದ ಹೊರಬರಲಿದೆ ಎಂದು ಮೊಮೆನ್ ಆಶಾವಾದ ವ್ಯಕ್ತಪಡಿಸಿದರು.

  ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರು ಧಾರ್ಮಿಕ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆಂಬ ಕೇಂದ್ರ ಗೃಹ ಸಚಿವರ ಅಮಿತ್ ಶಾ ಹೇಳಿಕೆ ನೀಡಿದ ಒಂದು ದಿನದ ಬಳಿಕ ಮೊಮೆನ್ ಅವರು ತನ್ನ ನಿಯೋಜಿತ ಭಾರತ ಪ್ರವಾಸವನ್ನು ರದ್ದುಪಡಿಸಿದ್ದರು ಹಾಗೂ ಶಾ ಅವರ ಹೇಳಿಕೆಯಲ್ಲಿ ಹುರುಳಿಲ್ಲವೆಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News