​ಜಾರ್ಖಂಡ್ ಸಿಎಂ ವಿರುದ್ಧ ಸೇಡು ತೀರಿಸಿಕೊಂಡ ಸಂಪುಟ ಸಹೋದ್ಯೋಗಿ !

Update: 2019-12-24 03:34 GMT
ಸರಯೂ ರಾಯ್

ರಾಂಚಿ: ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನ ವಿರುದ್ಧ ಸೋತು ಬಿಜೆಪಿ ಅಧಿಕಾರ ಕಳೆದುಕೊಂಡ ಬಗ್ಗೆ ರಾಜ್ಯದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿರುವ ನಡುವೆಯೇ ರಾಜ್ಯಾದ್ಯಂತ ಮತ್ತೊಂದು ವಿಚಾರ ಪ್ರಮುಖವಾಗಿ ಚರ್ಚೆಯಾಗುತ್ತಿದೆ.

ತಮಗೆ ಪಕ್ಷದ ಟಿಕೆಟ್ ತಪ್ಪಿಸಿದ್ದು ಮುಖ್ಯಮಂತ್ರಿ ರಘುವರ ದಾಸ್ ಎಂದು ಅವರ ವಿರುದ್ಧ ಬಂಡೆದ್ದಿದ್ದ ಸಂಪುಟ ಸಹೋದ್ಯೋಗಿ ಸರಯೂ ರಾಯ್, ಸಿಎಂ ತವರು ಕ್ಷೇತ್ರದಲ್ಲೇ ಅವರಿಗೆ 15 ಸಾವಿರಕ್ಕೂ ಅಧಿಕ ಮತಗಳ ಅಗಾಧ ಅಂತರದ ಸೋಲುಣಿಸುವ ಮೂಲಕ ಸೇಡು ತೀರಿಸಿಕೊಂಡಿರುವುದು ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

ಜೆಮ್‌ಶೆಡ್‌ಪುರ ಕ್ಷೇತ್ರವನ್ನು 1995ರಿಂದೀಚೆಗೆ ಸತತವಾಗಿ ಐದು ಬಾರಿ ಪ್ರತಿನಿಧಿಸಿದ್ದ ರಘುವರ ದಾಸ್ ಚಲಾವಣೆಯಾದ ಮತಗಳ ಪೈಕಿ 33.45 ಶೇಕಡ ಮತಗಳನ್ನಷ್ಟೇ ಗಳಿಸಲು ಸಾಧ್ಯವಾಗಿದೆ. ವಿಜೇತ ಅಭ್ಯರ್ಥಿ ಒಟ್ಟು 73332 ಮತ ಗಳಿಸಿದರು. ಮೂರನೇ ಸ್ಥಾನ ಗಳಿಸಿದ ಕಾಂಗ್ರೆಸ್ ಅಭ್ಯರ್ಥಿ ಗೌರವ್ ವಲ್ಲಭ್ 18868 ಮತ ಪಡೆದರು.

ಪಕ್ಕದ ಜೆಮ್‌ಶೆಡ್‌ಪುರ ಪಶ್ಚಿಮ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿದ್ದ ರಾಯ್ ಅವರ ಹೆಸರು ಪಕ್ಷದ ಅಧಿಕೃತ ಅಭ್ಯರ್ಥಿಗಳ ಪಟ್ಟಿಯಲ್ಲಿ ಇರಲಿಲ್ಲ. ಕೊನೆಕ್ಷಣದಲ್ಲಿ ಆ ಕ್ಷೇತ್ರಕ್ಕೆ ದೇವೇಂದ್ರ ಸಿಂಗ್ ಹೆಸರನ್ನು ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಲಾಗಿತ್ತು. ಪಕ್ಷದ ವರಿಷ್ಠರ ಬಳಿಗೆ ವಿಚಾರ ತಿಳಿಸಿದಾಗ, ಪದತ್ಯಾಗಕ್ಕೆ ಸೂಚನೆ ಬಂತು. ತಮಗೆ ಆದ ಅವಮಾನದ ವಿರುದ್ಧ ಸೇಡು ತೀರಿಸಿಕೊಳ್ಳುವ ಛಲದಿಂದ ರಾಯ್, ಸಿಎಂ ತವರು ಕ್ಷೇತ್ರದಲ್ಲಿ ಅವರ ವಿರುದ್ಧವೇ ಕಣಕ್ಕೆ ಇಳಿಯುವ ನಿರ್ಧಾರ ಕೈಗೊಂಡರು.

ರಾಜ್ಯ ಸರ್ಕಾರದ ಜನವಿರೋಧಿ ಧೋರಣೆಗಳ ಬಗ್ಗೆ ಬಹಿರಂಗವಾಗಿಯೇ ಟೀಕಿಸುತ್ತಿದ್ದ ಕಾರಣಕ್ಕಾಗಿ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಜೆಮ್‌ಶೆಡ್‌ಪುರ ಪೂರ್ವ ಕ್ಷೇತ್ರದಲ್ಲಿ ಪಕ್ಷೇತರರಾಗಿ ಕಣಕ್ಕಿಳಿದ ರಾಯ್ "ರಘುವರದಾಸ್ ಮೊದಲ ಬಾರಿ ಆಯ್ಕೆಯಾದಾಗಿನಿಂದಲೂ ಕ್ಷೇತ್ರದ ಜನತೆಯಲ್ಲಿ ಭೀತಿ ಹುಟ್ಟಿಸಿದ್ದಾರೆ. ದಾಸ್ ಹಾಗೂ ಕುಟುಂಬದ ಸದಸ್ಯರು ಜನಸಾಮಾನ್ಯರ ಜತೆ ಗೂಂಡಾಗಳಂತೆ ವರ್ತಿಸುತ್ತಿದ್ದಾರೆ. ಮತದಾರರು ಭ್ರಮನಿರಸನಗೊಂಡಿದ್ದಾರೆ" ಎಂದು ಪ್ರಚಾರ ಮಾಡಿದ್ದರು. ವಿಧಾನಸಭೆಯಲ್ಲಿ ಎನ್‌ಡಿಎ ಅಥವಾ ಯುಪಿಎ ಬಣಕ್ಕೆ ಸೇರದೇ ತಟಸ್ಥವಾಗಿಯೇ ಉಳಿಯುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News