ಸಿದ್ದರಾಮಯ್ಯ, ದಿನೇಶ್, ಖಾದರ್ ಅವರ ಪ್ರಚೋದನೆಯಿಂದಲೇ ಗಲಭೆ: ಎನ್.ರವಿಕುಮಾರ್

Update: 2019-12-25 12:05 GMT

ಬೆಂಗಳೂರು, ಡಿ. 25: ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾರೊಬ್ಬರಿಗೂ ತೊಂದರೆಯಾಗದಿರುವ ಹಿನ್ನೆಲೆಯಲ್ಲಿ ಇದರ ಬಗ್ಗೆ ಚರ್ಚೆಗಳು ಅನಗತ್ಯ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದ್ದಾರೆ.

ಬುಧವಾರ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬಾಂಗ್ಲಾ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ದೇಶಗಳಲ್ಲಿ ಹಿಂಸೆ, ದೌರ್ಜನ್ಯ ಎದುರಿಸಿ ಭಾರತಕ್ಕೆ ವಲಸೆ ಬಂದಿರುವ ಅಲ್ಲಿನ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲಷ್ಟೇ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದರು.

ದೇಶದಲ್ಲಿರುವ ಯಾವುದೇ ನಾಗರಿಕನ ಪೌರತ್ವವನ್ನು ಕಸಿದುಕೊಳ್ಳುವ ಅಂಶ ಕಾಯ್ದೆಯಲ್ಲಿ ಇಲ್ಲದೆ ಇರುವುದರಿಂದ ಇದರ ಬಗ್ಗೆ ಚರ್ಚೆ ಅವಶ್ಯಕತೆ ಇಲ್ಲ. ಇದರ ಬಗ್ಗೆ ಚರ್ಚೆ ಮಾಡುವಂತಿಲ್ಲ. ಹೀಗಾಗಿ ಇದನ್ನು ದೇಶದ ಎಲ್ಲ ರಾಜ್ಯಗಳು ಕಾಯ್ದೆ ಜಾರಿಗೆ ತರಬೇಕೆಂದು ಅಮಿತ್ ಶಾ ಹೇಳಿದ್ದು, ನಾನು ಅವರ ಹೇಳಿಕೆ ಸ್ವಾಗತಿಸುತ್ತೇನೆ ಎಂದರು.

ಮಂಗಳೂರು ಗಲಭೆಗಳು ಪೂರ್ವನಿಯೋಜಿತ ಎಂದು ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾದ ಸಿಸಿಟಿವಿ ದೃಶ್ಯಗಳು ಎತ್ತಿ ತೋರಿಸಿವೆ. ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಯು.ಟಿ.ಖಾದರ್ ಅವರ ಪ್ರಚೋದನೆಯಿಂದಲೇ ಗಲಭೆಗಳು ನಡೆದಿವೆ.

ಗಲಭೆಯಿಂದ ಗುಂಡೇಟಿಗೆ ಬಲಿಯಾದ ಇಬ್ಬರಿಗೆ ತನಿಖೆ ಬಳಿಕವೇ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿರುವುದು ಸ್ವಾಗತಾರ್ಹ ಎಂದು ರವಿಕುಮಾರ್ ಇದೇ ಸಂದರ್ಭದಲ್ಲಿ ತಿಳಿಸಿದರು.

‘ರಾಜಕೀಯ ಮುತ್ಸದ್ದಿ ಅಟಲ್ ಬಿಹಾರಿ ವಾಜಪೇಯಿ ಅವರು ಎಲ್ಲ ಪಕ್ಷಗಳಿಗೆ ಆದರ್ಶವಾಗಿದ್ದರು. ಬಿಜೆಪಿ ಬೆಳೆಯುವುದಕ್ಕೆ ಅಡಿಗಲ್ಲು ವಾಜಪೇಯಿ ಅವರಾಗಿದ್ದಾರೆ. ಬಿಜೆಪಿ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಅವರ ಕೊಡುಗೆ ಅಪಾರ’
-ಎನ್.ರವಿಕುಮಾರ್, ಪರಿಷತ್ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News