ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಜಟಾಪಟಿ: ಡಿ.29ರಂದು ನಗರದ ಬಿಜೆಪಿ ಶಾಸಕರ ಸಭೆ

Update: 2019-12-25 14:57 GMT

ಬೆಂಗಳೂರು, ಡಿ.25: ಬಿಬಿಎಂಪಿಯ 12 ಸ್ಥಾಯಿ ಸಮಿತಿ ಸದಸ್ಯ ಸ್ಥಾನಕ್ಕೆ ಡಿ.30ರಂದು ಚುನಾವಣೆ ನಿಗದಿಯಾಗಿದ್ದು, ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್-ಜೆಡಿಎಸ್ ತೊರೆದು ಬಿಜೆಪಿಯಿಂದ ಮರು ಆಯ್ಕೆಗೊಂಡಿರುವ ಪಾಲಿಕೆ ವ್ಯಾಪ್ತಿಯ ಶಾಸಕರು ಹಾಗೂ ಮೂಲ ಬಿಜೆಪಿ ಶಾಸಕರ ನಡುವೆ ಜಟಾಪಟಿ ಶುರುವಾಗಿದೆ.

ಪಾಲಿಕೆ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಾದ ಮಹಾಲಕ್ಷ್ಮೀ ಲೇಔಟ್, ಕೆ.ಆರ್.ಪುರಂ ಹಾಗೂ ಯಶವಂತಪುರದ ಬಿಜೆಪಿಯ ನೂತನ ಶಾಸಕರಾದ ಬೈರತಿ ಬಸವರಾಜ್, ಎಸ್.ಟಿ. ಸೋಮಶೇಖರ್ ಹಾಗೂ ಗೋಪಾಲಯ್ಯ ಅವರು ತಮ್ಮ ಬೆಂಬಲಿಗರಿಗೆ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನವನ್ನು ನೀಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇನ್ನೊಂದೆಡೆ ಮೂಲ ಬಿಜೆಪಿ ಸದಸ್ಯರಿಗೆ ಅಧ್ಯಕ್ಷ ಸ್ಥಾನವನ್ನು ನೀಡಬೇಕು ಎಂದು ಮೂಲ ಬಿಜೆಪಿ ಶಾಸಕರು ಒತ್ತಡ ಹಾಕುತ್ತಿದ್ದಾರೆ. ಈ ಕುರಿತು ಡಿ.29ರಂದು ನಡೆಯಲಿರುವ ನಗರದ ಬಿಜೆಪಿ ಶಾಸಕರ ಸಭೆಯಲ್ಲಿ ಅಂತಿಮವಾಗಲಿದೆ ಎನ್ನಲಾಗುತ್ತಿದೆ.

ಈ ಹಿಂದೆ ಎರಡು ಬಾರಿ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದ ಜೆಡಿಎಸ್‌ನ ಲಗ್ಗೆರೆ ವಾರ್ಡ್‌ನ ಮಂಜುಳಾ ನಾರಾಯಣಸ್ವಾಮಿ, ಬಿಟಿಎಂ ಬಡಾವಣೆ ವಾರ್ಡ್‌ನ ಕೆ.ದೇವದಾಸ್ ಹಾಗೂ ಮಾರತ್‌ಹಳ್ಳಿ ವಾರ್ಡ್‌ನ ಎನ್. ರಮೇಶ್ ಅವರಿಗೆ ಮಾತ್ರ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಬಿಜೆಪಿ ಪಕ್ಷದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ, ಕೆ.ಆರ್.ಪುರ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಾಲಿಕೆ ಸದಸ್ಯರಿಗೆ ಈ ಬಾರಿ ಯಾವುದೇ ಅಧ್ಯಕ್ಷ ಸ್ಥಾನ ನೀಡಬಾರದು, ಈ ಸದಸ್ಯರನ್ನು ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಉಚ್ಛಾಟನೆ ಮಾಡಲಾಗಿದೆ. ಆದರೆ, ಪಕ್ಷದ ಸದಸ್ಯತ್ವಕ್ಕೆ ಅವರು ಈವರೆಗೆ ರಾಜೀನಾಮೆ ನೀಡಿಲ್ಲ. ತಾಂತ್ರಿಕ ಸಮಸ್ಯೆ ಉಂಟಾಗುವ ಹಿನ್ನೆಲೆಯಲ್ಲಿ ಬಿಜೆಪಿ ಈ ತೀರ್ಮಾನ ತೆಗೆದುಕೊಂಡಿದೆ ಎನ್ನಲಾಗಿದೆ.

ಯಾರ್ಯಾರಿಗೆ ಅಧ್ಯಕ್ಷ ಸ್ಥಾನ: ಪಾಲಿಕೆಯ 12 ಸ್ಥಾಯಿ ಸಮಿತಿಯ ಪೈಕಿ ಮೂರು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಮಂಜುಳಾ ನಾರಾಯಣಸ್ವಾಮಿ, ಎನ್.ರಮೇಶ್ ಹಾಗೂ ದೇವದಾಸ್ ಅವರ ಪಾಲಾಗುವ ಸಾಧ್ಯತೆ ಹೆಚ್ಚಿದೆ. ಉಳಿದ ಒಂಬತ್ತು ಸ್ಥಾಯಿ ಸಮಿತಿಗಳಲ್ಲಿ ತಲಾ ಎರಡು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥ್ ನಾರಾಯಣ್ ಹಾಗೂ ವಸತಿ ಸಚಿವ ವಿ.ಸೋಮಣ್ಣ ಅವರ ವಿಧಾನಸಭಾ ಕ್ಷೇತ್ರಕ್ಕೆ ನೀಡುವ ಸಾಧ್ಯತೆಯಿದೆ. ಉಳಿದಂತೆ ಲಕ್ಕಸಂದ್ರ ವಾರ್ಡ್‌ನ ಸರಳಾ ಮಹೇಶ್, ರಾಯಪುರ ವಾರ್ಡ್‌ನ ಶಶಿಕಲಾ, ಕತ್ರಿಗುಪ್ಪೆಯ ಸಂಗಾತಿ ವೆಂಕಟೇಶ್, ಜೆ.ಪಿ ಉದ್ಯಾನವನ ವಾರ್ಡ್ ಮಮತಾ ವಾಸುದೇವ್ ಅವರುಗಳಿಗೆ ನೀಡುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ.

ಮತ್ತೆ ಚುನಾವಣೆ ಮುಂದೂಡುವ ಸಾಧ್ಯತೆ: ಸ್ಥಾಯಿ ಸಮಿತಿ ಅಧ್ಯಕ್ಷರ ಸ್ಥಾನಕ್ಕೆ ಬಿಜೆಪಿಯಲ್ಲಿ ಪೈಪೋಟಿ ತೀವ್ರಗೊಂಡಿದ್ದು, ಮೂಲ ಬಿಜೆಪಿ ಮತ್ತು ನೂತನ ಶಾಸಕರ ಬೆಂಬಲಿಗರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುವ ಕುರಿತಂತೆ ಬಿಜೆಪಿಯಲ್ಲಿ ಭಿನ್ನಮತ ಕಾಣಿಸಿಕೊಂಡಿರುವುದರಿಂದ ಯಾರೊಬ್ಬರೂ ಚುನಾವಣೆಯಲ್ಲಿ ಪಾಲ್ಗೊಳ್ಳದೆ ಹಿಂದೆ ಸರಿದರೆ ಮತ್ತೆ ಸ್ಥಾಯಿ ಸಮಿತಿ ಚುನಾವಣೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ.

ಒಟ್ಟು 260 ಮತದಾರರು

ಬಿಜೆಪಿ ಒಟ್ಟು 129: ಬಿಬಿಎಂಪಿ ಸದಸ್ಯರು- 101, ಲೋಕಸಭಾ ಸದಸ್ಯರು- 04, ರಾಜ್ಯಸಭಾ ಸದಸ್ಯರು- 03, ಶಾಸಕರು- 14, ವಿಧಾನಸಭಾ ಸದಸ್ಯರು-07.

ಕಾಂಗ್ರೆಸ್ ಒಟ್ಟು 103: ಬಿಬಿಎಂಪಿ ಸದಸ್ಯರು 76, ಲೋಕಸಭಾ ಸದಸ್ಯರು 01, ರಾಜ್ಯಸಭಾ ಸದಸ್ಯರು- 05, ಶಾಸಕರು- 12, ವಿಧಾನ ಪರಿಷತ್ ಶಾಸಕರು-09.

ಜೆಡಿಎಸ್ ಒಟ್ಟು 21: ಬಿಬಿಎಂಪಿ ಸದಸ್ಯರು 14, ರಾಜ್ಯಸಭಾ ಸದಸ್ಯರು-01, ಶಾಸಕರು-01, ವಿಧಾನಪರಿಷತ್ ಸದಸ್ಯರು- 05, ಬಿಬಿಎಂಪಿ ಪಕ್ಷೇತರರು: 07.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News