ನಗರಾಭಿವೃದ್ಧಿಗೆ ಎಲ್ಲ ಇಲಾಖೆಗಳ ಸಮನ್ವಯತೆ ಅಗತ್ಯ: ವಿವಿಧ ಇಲಾಖೆಗಳ ಅಧಿಕಾರಿಗಳು

Update: 2019-12-25 16:23 GMT

ಬೆಂಗಳೂರು, ಡಿ.25: ನಗರಾಭಿವೃದ್ಧಿಗೆ ಎಲ್ಲ ಇಲಾಖೆಗಳ ಸಮನ್ವಯತೆಯನ್ನು ಕಾಯ್ದುಕೊಳ್ಳಬೇಕಾದ ಅಗತ್ಯವಿದೆ ಎಂದು ವಿವಿಧ ಇಲಾಖೆಗಳ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ನಗರದ ಯವನಿಕಾದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸುಶಾಸನ ದಿನದಲ್ಲಿ ಪಾಲ್ಗೊಂಡು ವಿಷಯ ಮಂಡನೆ ಮಾಡಿದ ಎಲ್ಲ ಇಲಾಖೆಗಳ ಅಧಿಕಾರಿಗಳು, ಪ್ರತಿಯೊಂದು ಇಲಾಖೆಯನ್ನು ಒಳಗೊಳ್ಳುವ ಮೂಲಕ ಬೆಂಗಳೂರು ನಗರವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ವಿಷಯ ಮಂಡನೆ ಮಾಡಿ, ಬೆಂಗಳೂರು ನಗರವನ್ನು ಮಾದರಿಯನ್ನಾಗಿಸುವ ನಿಟ್ಟಿನಲ್ಲಿ ಬಿಬಿಎಂಪಿ ಈಗಾಗಲೇ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಬೆಸ್ಕಾಂ, ಬಿಡಬ್ಲೂಎಸ್‌ಎಸ್‌ಬಿ, ಬಿಎಂಟಿಸಿ, ಮೆಟ್ರೋ, ಕೆಪಿಟಿಸಿಎಲ್ ಸೇರಿದಂತೆ ಹಲವು ಇಲಾಖೆಗಳ ಜತೆಗೂಡಿ, ಜಂಟಿ ಕ್ರಿಯಾ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.

ಬಿಬಿಎಂಪಿಯು ಸ್ಥಳೀಯ ಮಟ್ಟದಲ್ಲಿ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಅನುಮತಿಯನ್ನು ಆನ್‌ಲೈನ್ ಮೂಲಕ ಪಡೆಯುವುದು ಸೇರಿದಂತೆ ಹಲವಾರು ಸೌಲಭ್ಯಗಳನ್ನು ಆನ್‌ಲೈನ್ ಮೂಲಕ ನೀಡಲಾಗುತ್ತಿದೆ. ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ಗಣನೀಯವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಣ ಮತ್ತು ಹಸಿ ತ್ಯಾಜ್ಯಗಳ ವಿಂಗಡಣೆಗಾಗಿ ಪ್ರತ್ಯೇಕ ಪ್ಲಾಂಟ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

ಬೆಂಗಳೂರು ನಗರವನ್ನು 3 ಡಿ ನಗರವನ್ನಾಗಿಸಲು ಪಾಲಿಕೆ ಸಾಕಷ್ಟು ಶ್ರಮ ವಹಿಸುತ್ತಿದೆ. ನಗರದಲ್ಲಿ ಕೆರೆಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದು, ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಉಳಿದಂತೆ ನಗರದಾದ್ಯಂತ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಶ್ರಮಿಸುತ್ತಿದೆ ಎಂದು ಅವರು ತಿಳಿಸಿದರು.

ನಗರ ಸಂಚಾರ ವಿಭಾಗದ ಉಪ ಆಯುಕ್ತ ರವಿಕಾಂತೇಗೌಡ ಮಾತನಾಡಿ, ನಗರದಲ್ಲಿ ಸಂಚಾರ ನಿಯಮಗಳು ಕಡ್ಡಾಯವಾಗಿ ಪಾಲನೆ ಮಾಡಬೇಕು. ನಿಯಮಗಳೇ ಇಲ್ಲದಿದ್ದರೆ, ಎಲ್ಲೆಂದರಲ್ಲಿ ಟ್ರಾಫಿಕ್ ಆಗಿ, ಸಾರ್ವಜನಿಕರು ಪರದಾಡಬೇಕಾಗಿತ್ತು. ಈ ನಿಟ್ಟಿನಲ್ಲಿ 4620 ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಗರದಲ್ಲಿ ಸಂಚಾರ ನಿಯಂತ್ರಣಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ನಗರಾಭಿವೃದ್ಧಿ ಸಂಬಂಧ ಬೇರೆ ಬೇರೆ ಇಲಾಖೆಗಳು ರೂಪಿಸುವ ಯೋಜನೆಗಳು, ಸಿಗಬೇಕಾದವರಿಗೆ ಸಿಗದೇ ಬೇರೆಯವರು ಪಡೆಯುತ್ತಿದ್ದಾರೆ. ಈ ಯೋಜನೆಗಳ ವೈಫಲ್ಯಗಳ ಫಲಿತಾಂಶವನ್ನು ಟ್ರಾಫಿಕ್ ಪೊಲೀಸರು ಅನುಭವಿಸುತ್ತಿದ್ದಾರೆ. ಹೀಗಾಗಿ, ಎಲ್ಲ ಇಲಾಖೆಗಳು ಯೋಜನೆ ರೂಪಿಸುವ ಮುನ್ನ ಎಲ್ಲ ಇಲಾಖೆಗಳನ್ನು ಒಳಗೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು.

ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆಯ ದಂಡ ಹೆಚ್ಚಳದ ಬಳಿಕ, ನಿಯಮ ಉಲ್ಲಂಘನೆ ಪ್ರಮಾಣ ಇಳಿಕೆಯಾಗಿದೆ ಎಂದ ಅವರು, ರಾಜಧಾನಿಯಲ್ಲಿ ಯಾವುದೇ ಪಾರ್ಕಿಂಗ್ ನಿಯಮವಿಲ್ಲ. ಹೀಗಾಗಿ, ಎಲ್ಲೆಂದರಲ್ಲಿ ವಾಹನ ನಿಲ್ಲುಸುತ್ತಾರೆ. ಅಲ್ಲದೆ, ನಗರಾಭಿವೃದ್ಧಿ ಯೋಜನೆಯಲ್ಲಿ ಪ್ರತಿಭಟನೆ ನಡೆಸುವವರಿಗೆ ಸೂಕ್ತ ಸ್ಥಳವನ್ನು ಗುರುತಿಸಬೇಕಿದೆ. ಅದರ ಜತೆಗೆ ಅನಾವಶ್ಯಕ ವಾಹನಗಳ ತಡೆಗೆ ಕ್ರಮ ಕೈಗೊಳ್ಳಬೇಕಿದೆ ಎಂದರು.

ಬಿಎಂಟಿಸಿಯ ಅನುಪಮ್ ಅಗರವಾಲ್ ಮಾತನಾಡಿ, ನಗರದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಅಧಿಕವಾಗುತ್ತಿದೆ. 2030 ರ ವೇಳೆಗೆ ಬೆಂಗಳೂರಿನ ಜನಸಂಖ್ಯೆ 250 ಕೋಟಿ ದಾಟುವ ನಿರೀಕ್ಷೆಯಿದೆ. ಈಗಾಲೇ ಬಿಎಂಟಿಸಿ ಬಸ್‌ಗಳಲ್ಲಿ 40 ಲಕ್ಷ ಜನ ಸಂಚಾರ ಮಾಡುತ್ತಿದ್ದು, 2030 ವೇಳೆಗೆ 70 ಲಕ್ಷ ದಾಟುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ನಗರದಲ್ಲಿ ಶೇ.46 ರಷ್ಟು ಪ್ರತಿ ಗಂಟೆಗೆ 4 ಬಸ್‌ಗಳು ಸಂಚಾರ ಮಾಡುತ್ತಿದ್ದರೆ, ಶೇ.32 ರಷ್ಟು ಪ್ರತಿ ಗಂಟೆಗೆ 2 ಬಸ್‌ಗಳು ಸಂಚಾರ ಮಾಡುತ್ತಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವೇಗ ಪಡೆಯಲು ಕ್ರಮ ಕೈಗೊಳ್ಳಲಾಗುತ್ತಿದ್ದು, 300 ಎಲೆಕ್ಟ್ರಿಕಲ್ ಬಸ್‌ಗಳ ಖರೀದಿಗೂ ಕೇಂದ್ರ ಸರಕಾರ ಅನುಮೋದಿಸಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಬಿಡಿಎ, ಬಿಡಬ್ಲೂಎಸ್‌ಎಸ್‌ಬಿ, ಮೆಟ್ರೋ, ಡಿಯುಎಲ್‌ಟಿ, ಬೆಸ್ಕಾಂ, ಬಿಎಂಆರ್‌ಡಿಎ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡು ನಗರಾಭಿವೃದ್ಧಿಗೆ ಸಂಬಂಧಿಸಿದಂತೆ ಮಹತ್ವದ ಚರ್ಚೆ ನಡೆಸಿದರು.

ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಬಿಎಂಆರ್‌ಸಿಎಲ್‌ನ ಅಜಯ್ ಸೇಠ್, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಎಷ್ಟು ಹಣ ಖರ್ಚು ಮಾಡಲಾಗುತ್ತದೆ ಎಂಬುದು ಮುಖ್ಯವಲ್ಲ. ಜಾರಿಗೆ ತಂದ ಯೋಜನೆಗಳು ಎಲ್ಲರಿಗೂ ತಲುಪುತ್ತವೆಯಾ ಎಂಬುದು ಮುಖ್ಯ. ಎಲ್ಲ ಇಲಾಖೆಗಳ ಅಧಿಕಾರಿಗಳು ಒಟ್ಟಿಗೆ ಸೇರಿ, ತಮ್ಮ ತಮ್ಮಲ್ಲಿರುವ ಸಮಸ್ಯೆಗಳನ್ನು ಹಂಚಿಕೊಂಡು, ಪರಿಹಾರದ ಕಡೆಗೆ ಚಿಂತಿಸಿದ್ದಾರೆ. ಜನರಿಗೆ ನಿಜವಾದ ಸಮಸ್ಯೆ ಏನಿದೆ, ಎಷ್ಟು ದೂರು ಬಂದಿದೆ, ಎಷ್ಟು ಪರಿಹಾರವಾಗಿದೆ ಎಂಬ ಸ್ಪಷ್ಟ ವರದಿ ಮುಂದಿಡಬೇಕು. ನಗರಾಭಿವೃದ್ಧಿಗೆ ಎಲ್ಲರನ್ನೂ ಒಗ್ಗೂಡಿಸಿಕೊಂಡು, ಪಾರದರ್ಶಕವಾಗಿ ಕೆಲಸ ಮಾಡಬೇಕು. ಸರಕಾರಿ ಹಾಗೂ ಖಾಸಗಿ ಸಹಭಾಗಿತ್ವವೂ ಬೇಕಾಗಿದೆ.

-ಡಾ.ಸಿ.ಎನ್.ಅಶ್ವಥ್ ನಾರಾಯಣ್, ಉಪ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News