ಖಶೋಗಿ ಹತ್ಯೆ ಆರೋಪಿಗಳಿಗೆ ಮರಣದಂಡನೆ ನೀಡಿದರೆ ಸತ್ಯ ಹೊರಬರದು: ಗೆಳತಿ ಹಾತಿಸ್

Update: 2019-12-25 16:25 GMT

ಅಂಕಾರ (ಟರ್ಕಿ), ಡಿ. 25: ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಗೆ ಸಂಬಂಧಿಸಿ ಸೌದಿ ಅರೇಬಿಯದ ನ್ಯಾಯಾಲಯವೊಂದು ಐವರಿಗೆ ಮರಣ ದಂಡನೆ ವಿಧಿಸಿರುವುದು ಅನ್ಯಾಯ ಮತ್ತು ಸರಿಯಲ್ಲ ಎಂದು ಖಶೋಗಿಯ ಗೆಳತಿ ಹಾತಿಸ್ ಸೆಂಗಿಝ್ ಹೇಳಿದ್ದಾರೆ. ಅವರನ್ನು ಕೊಂದರೆ ಸತ್ಯವನ್ನು ಮತ್ತಷ್ಟು ಅಡಗಿಸಿಟ್ಟಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹಾತಿಸ್ ಸೆಂಗಿಝ್‌ ರನ್ನು ಮದುವೆಯಾಗುವುದಕ್ಕಾಗಿ ತನ್ನ ದಾಖಲೆಪತ್ರಗಳನ್ನು ತರಲು ಖಶೋಗಿ 2018 ಅಕ್ಟೋಬರ್ 2ರಂದು ಟರ್ಕಿ ದೇಶದ ಇಸ್ತಾಂಬುಲ್‌ನಲ್ಲಿರುವ ಕೌನ್ಸುಲೇಟ್ ಕಚೇರಿಗೆ ಹೋಗಿದ್ದರು. ಆದರೆ, ಅವರು ಕಚೇರಿಯಿಂದ ಹೊರಬರಲಿಲ್ಲ. ಅವರು ಕೊಲೆಯಾಗಿದ್ದಾರೆ ಎನ್ನುವುದನ್ನು ಸೌದಿ ಅರೇಬಿಯ ಆರಂಭದಲ್ಲಿ ಒಪ್ಪಿರಲಿಲ್ಲ. ಆದರೆ, ಟರ್ಕಿಯು ಹಲವಾರು ದಾಖಲೆಗಳನ್ನು ಬಹಿರಂಗಪಡಿಸಿದ ಬಳಿಕ ಅನಿವಾರ್ಯವಾಗಿ ಸೌದಿ ಅರೇಬಿಯವು ಖಶೋಗಿ ಕೊಲೆಯಾಗಿರುವುದನ್ನು ಒಪ್ಪಿಕೊಂಡಿತು.

ಅವರ ದೇಹವನ್ನು ಚೂರು ಚೂರಾಗಿ ಕತ್ತರಿಸಿ ಕೌನ್ಸುಲೇಟ್ ಕಚೇರಿಯಿಂದ ಹೊರಗೆ ಸಾಗಿಸಲಾಗಿದೆ ಎನ್ನಲಾಗಿದೆ. ಅವರ ಮೃತದೇಹ ಪತ್ತೆಯಾಗಲೇ ಇಲ್ಲ.

ಕೊಲೆಗೆ ಸಂಬಂಧಿಸಿ ಸೌದಿಯ ನ್ಯಾಯಾಲಯವೊಂದು ಸೋಮವಾರ ಐವರಿಗೆ ಮರಣ ದಂಡನೆ ಮತ್ತು ಮೂವರಿಗೆ ಸೆರೆಮನೆವಾಸ ಶಿಕ್ಷೆ ವಿಧಿಸಿದೆ. ಮೂವರನ್ನು ದೋಷಮುಕ್ತಗೊಳಿಸಿದೆ.

ಹತ್ಯೆಗೆ ಆದೇಶ ನೀಡಿರಬಹುದಾದ ಹಿರಿಯ ಅಧಿಕಾರಿಗಳನ್ನು ದೋಷಮುಕ್ತಗೊಳಿಸಿರುವುದು ‘ನ್ಯಾಯದ ಅಣಕ’ ಎಂಬುದಾಗಿ ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಯಾಕೆ ಕೊಂದರು ಎಂದು ನ್ಯಾಯಾಲಯ ಹೇಳಿಲ್ಲ

ಶಿಕ್ಷೆಗೆ ಗುರಿಯಾದವರು ಖಶೋಗಿಯನ್ನು ಯಾಕೆ ಕೊಂದರು ಎನ್ನುವುದನ್ನು ನ್ಯಾಯಾಲಯ ತಿಳಿಸಿಲ್ಲ ಎಂದು ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದ ಹಾತಿಸ್, ವಿಚಾರಣೆಯನ್ನು ರಹಸ್ಯವಾಗಿ ನಡೆಸಲಾಗಿತ್ತು ಎಂದರು.

‘‘ಏನೂ ಮಾತನಾಡಲು ಅವಕಾಶ ನೀಡದೆ ಅವರನ್ನು ಗಲ್ಲಿಗೇರಿಸಿದರೆ, ಈ ಕೊಲೆಯ ಹಿಂದಿನ ಸತ್ಯವನ್ನು ನಾವು ಯಾವತ್ತೂ ತಿಳಿಯುವುದಿಲ್ಲ’’ ಎಂದು ಅವರು ಹೇಳಿದರು.

‘‘ಈ ರೀತಿಯ ನ್ಯಾಯಾಂಗ ಕಲಾಪವನ್ನು ಖಂಡಿಸುವಂತೆ ನಾನು ಜಗತ್ತಿನ ಪ್ರತಿಯೊಂದು ಪ್ರಾಧಿಕಾರವನ್ನು ಒತ್ತಾಯಿಸುತ್ತೇನೆ ಹಾಗೂ ಯಾವುದೇ ಮರಣ ದಂಡನೆಯನ್ನು ತಡೆಯಲು ತಕ್ಷಣ ಮಧ್ಯ ಪ್ರವೇಶಿಸುವಂತೆ ಕೋರುತ್ತೇನೆ. ಯಾಕೆಂದರೆ, ಇದು ಸತ್ಯವನ್ನು ಮುಚ್ಚಿ ಹಾಕುವ ನಿಟ್ಟಿನಲ್ಲಿ ಇಡಲಾಗುತ್ತಿರುವ ಇನ್ನೊಂದು ಹೆಜ್ಜೆಯಾಗಿದೆ’’ ಎಂದರು.

ವಿಚಾರಣೆಯೇ ಪ್ರಹಸನ: ಟರ್ಕಿ

ಸೌದಿ ಪತ್ರಕರ್ತ ಜಮಾಲ್ ಖಶೋಗಿ ಕೊಲೆ ಪ್ರಕರಣದ ವಿಚಾರಣೆಯ ಫಲಿತಾಂಶವು ಅಂಗೀಕೃತ ಮಟ್ಟದಿಂದ ತುಂಬಾ ಕೆಳಗಿದೆ ಎಂದು ಟರ್ಕಿ ಸೋಮವಾರ ಹೇಳಿದೆ.

ಸೌದಿ ಅರೇಬಿಯ ನ್ಯಾಯಾಲಯದ ಈ ತೀರ್ಪು ಸ್ವಸ್ಥ ಮನಸ್ಸಿನ ಯಾವುದೇ ವೀಕ್ಷಕನ ಬುದ್ಧಿಮತ್ತೆಗೆ ಮಾಡಿದ ಅವಮಾನವಾಗಿದೆ ಎಂದು ಟರ್ಕಿಯ ಸಂಪರ್ಕ ನಿರ್ದೇಶಕ ಫಹ್ರೆತ್ತೀನ್ ಅಲ್ತೂನ್ ಮಂಗಳವಾರ ಹೇಳಿದ್ದಾರೆ.

‘‘ಖಶೋಗಿ ಪ್ರಕರಣದಲ್ಲಿ ನಿಜವಾದ ಉತ್ತರದಾಯಿತ್ವ ನಿಗದಿಯಾಗುವವರೆಗೆ, ಅಂತರ್‌ರಾಷ್ಟ್ರೀಯ ಮಾಧ್ಯಮಗಳು ಪ್ರಕರಣದ ಬೆನ್ನು ಬೀಳಬೇಕು. ಹತ್ಯೆಗೆ ಕಾರಣರಾದವರು ಈಗಲ್ಲದಿದ್ದರೆ ಮುಂದೆಯಾದರೂ ನ್ಯಾಯವನ್ನು ಎದುರಿಸಲೇ ಬೇಕು’’ ಎಂದು ಅಲ್ತೂನ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

‘‘ಪ್ರಕರಣದ ವಿಚಾರಣೆಯು ಪ್ರಹಸನವಾಗಿತ್ತು’’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News