​ಐತಿಹಾಸಿಕ ದೇಗುಲ: ಯಾತ್ರಿಗಳಿಗೆ ಮುಕ್ತಗೊಳಿಸಲು ಮುಂದಾದ ಪಾಕ್

Update: 2019-12-27 03:51 GMT

ಅಮೃತಸರ: ಮೂರು ಪ್ರಮುಖ ಧಾರ್ಮಿಕ ಸ್ಥಗಳನ್ನು ಭಾರತೀಯ ಯಾತ್ರಿಗಳಿಗೆ ಮುಕ್ತಗೊಳಿಸಿದ ಬೆನ್ನಲ್ಲೇ, ವಿಭಜನೆಯ ಬಳಿಕ ಮುಚ್ಚಿದ್ದ ಪ್ರಮುಖ ಹಿಂದೂ ದೇವಾಲಯಕ್ಕೆ ಮುಕ್ತ ಪ್ರವೇಶಾವಕಾಶ ಕಲ್ಪಿಸಲು ಪಾಕಿಸ್ತಾನ ಸರ್ಕಾರ ಮುಂದಾಗಿದೆ.

ಪಾಂಡವರು ತಮ್ಮ ಅಜ್ಞಾತವಾಸದ ವೇಳೆ ತಂಗಿದ್ದರು ಎನ್ನಲಾದ ಪಂಜತೀರ್ಥ ದೇವಾಲಯವನ್ನು ಮುಂದಿನ ತಿಂಗಳು ಪ್ರವೇಶಕ್ಕೆ ಮುಕ್ತಗೊಳಿಸಲು ಸಿದ್ಧತೆ ನಡೆದಿದೆ. ಖೈಬರ್ ಪಖುಂಟ್ವಾ ಪ್ರಾಂತ್ಯ ಈಗಾಗಲೇ ಈ ದೇವಾಲಯವನ್ನು ರಾಷ್ಟ್ರೀಯ ಪರಂಪರೆ ತಾಣ ಎಂದು ಘೋಷಿಸಿದೆ.

ಪಾಕಿಸ್ತಾನದ ಅವೆಕ್ಯೂ ಟ್ರಸ್ಟ್ ಪಾಪರ್ಟಿ ಬೋರ್ಡ್ ಅಧ್ಯಕ್ಷ ಅಮೀರ್ ಅಹ್ಮದ್ ಈ ಸಂಬಂಧ ಹೇಳಿಕೆ ನೀಡಿ, ದೇವಾಲಯದ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳಲಾಗಿದೆ. ಜನವರಿಯಲ್ಲಿ ದೇವಾಲಯ ಉದ್ಘಾಟಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಇದು ಪಾಕಿಸ್ತಾನ ಸರ್ಕಾರ ಭಾರತೀಯ ಯಾತ್ರಿಗಳಿಗೆ ಮುಕ್ತಗೊಳಿಸಿದ ಎರಡನೇ ಹಿಂದೂ ದೇವಾಲಯವಾಗಲಿದೆ. ಕಳೆದ ಅಕ್ಟೋಬರ್‌ನಲ್ಲಿ 1000 ವರ್ಷ ಹಳೆಯದು ಎನ್ನಲಾದ ಸಿಯಾಲ್‌ಕೋಟ್ ಶಿವಾಲ ತೇಜಾ ಸಿಂಗ್ ದೇವಾಲಯವನ್ನು ಮುಕ್ತಗೊಳಿಸಲಾಗಿತ್ತು.

ಕರ್ತಾರ್‌ಪುರ ಕಾರಿಡಾರ್ ಉದ್ಘಾಟನೆಗೆ ಮುನ್ನ ಪಾಕಿಸ್ತಾನ, ಗುರುದ್ವಾರ ಚೋಹಾ ಸಾಹಿಬ್ ತೆರೆದಿತ್ತು. ಇದು ಯುನೆಸ್ಕೊ ಪರಂಪರೆ ತಾಣವಾದ ಜೇಲಂನ ರೋಹ್ಟಾಸ್ ಕೋಟೆಗೆ ಸಮೀಪದಲ್ಲಿದೆ. ವಿಭಜನೆ ಬಳಿಕ ಮುಚ್ಚಿದ್ದ ಮತ್ತೊಂದು ಐತಿಹಾಸಿಕ ಗುರುದ್ವಾರವಾದ ಗುರ್ಜನ್‌ಲಾವಾದ ಗುರದ್ವಾರ ಖಾರಾ ಸಾಹಿಬ್ ಪ್ರವೇಶವನ್ನೂ ಪಾಕ್ ಸರ್ಕಾರ ಇತ್ತೀಚೆಗೆ ಮುಕ್ತಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News