ಲಾಠಿ, ತ್ರಿಶೂಲಗಳಿಗಿಂತ ರಾಷ್ಟ್ರಧ್ವಜ ಅಪಾಯಕಾರಿಯೇ?

Update: 2019-12-28 07:20 GMT

ಒಂದು ಕಾಲದಲ್ಲಿ ತನ್ನ ವಿಷಕಾರಿ ಭಾಷಣಗಳ ಮೂಲಕ ಜನರನ್ನು ಪ್ರಚೋದಿಸಿ ಪರಸ್ಪರ ಗಲಭೆಗೆ ಹಚ್ಚಿದ ಇತಿಹಾಸವಿರುವ ಕಾವಿ ವೇಷದ ನಾಯಕ, ಇದೀಗ ಪ್ರಜಾಸತ್ತಾತ್ಮಕವಾಗಿ ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಜನರನ್ನು ‘ಹಿಂಸಾಚಾರಿ’ಗಳು ಎಂದು ಕರೆಯುತ್ತಿದ್ದಾರೆ. ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿ ಸ್ಥಾನವನ್ನು ನಿರ್ವಹಿಸುವ ಮುನ್ನ ಉತ್ತರ ಪ್ರದೇಶಕ್ಕೆ ಕೊಟ್ಟ ಕೊಡುಗೆಗಳೇನು ಎನ್ನುವುದಕ್ಕೆ ಆಗ ಅವರ ಮೇಲಿದ್ದ ಕ್ರಿಮಿನಲ್ ಪ್ರಕರಣಗಳೇ ಉತ್ತರ ನೀಡುತ್ತವೆ. ಉತ್ತರ ಪ್ರದೇಶದಲ್ಲಿ ಸಿಎಎ ವಿರುದ್ಧದ ಪ್ರತಿಭಟನೆಯನ್ನು ದಮನಿಸಲು ‘ಗಲಭೆ ಆರೋಪಿಗಳ ಸೊತ್ತುಗಳನ್ನು ಮುಟ್ಟುಗೋಲು ಹಾಕುತ್ತೇವೆ’ ಎಂದು ಅವರು ಹೇಳಿಕೆ ನೀಡಿದ್ದಾರೆ. ನಿಜಕ್ಕೂ ಗಲಭೆ ಆರೋಪಿಗಳು ಯಾರು ಎನ್ನುವುದನ್ನು, ಅವರದೇ ಪಕ್ಷದ ಕಾರ್ಯಕರ್ತರ ಹಿನ್ನೆಲೆ ನೋಡಿದರೆ ಗೊತ್ತಾಗಿ ಬಿಡುತ್ತದೆ. ಅವರ ‘ಹಿಂದೂ ಯುವ ವಾಹಿನಿ’ ಉತ್ತರ ಪ್ರದೇಶದಲ್ಲಿ ಸೃಷ್ಟಿಸಿದ ಗಲಭೆ, ನಾಶ ಮಾಡಿದ ಸೊತ್ತುಗಳ ಅಂಕಿಅಂಶಗಳನ್ನು ಸಂಗ್ರಹಿಸಿದರೆ, ಸ್ವತಃ ಆದಿತ್ಯನಾಥರ ಆಸ್ತಿಗಳನ್ನು ಮುಟ್ಟುಗೋಲು ಹಾಕುವುದು ಅನಿವಾರ್ಯವಾದೀತು.

ಇಂದು ಉತ್ತರ ಪ್ರದೇಶದಲ್ಲಿ ಜನರ ನಡುವೆ ದಂಗೆಗಳು ಎದ್ದಿಲ್ಲ. ಗುಂಪುಗಳ ನಡುವೆ ಹಿಂಸಾಚಾರ ನಡೆದಿಲ್ಲ. ಸರಕಾರದ ಕಾನೂನಿನ ವಿರುದ್ಧ ಪ್ರಜೆಗಳು ಧ್ವನಿಯೆತ್ತಿದ್ದಾರೆ. ಬೀದಿಗಿಳಿದಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಹೈದರಾಬಾದ್‌ನಲ್ಲಿ ಆರೆಸ್ಸೆಸ್ ಸಾರ್ವಜನಿಕವಾಗಿ ಲಾಠಿಗಳನ್ನು ಹಿಡಿದು ಪಥಸಂಚಲನ ನಡೆಸಿತ್ತು. ಹಾಗೆಯೇ ಕೈಯಲ್ಲಿ ತ್ರಿಶೂಲದಂತಹ ಮಾರಕಾಯುಧಗಳನ್ನು ಹಿಡಿದು ಉತ್ತರ ಪ್ರದೇಶದಲ್ಲಿ ಹಿಂದೂ ಯುವವಾಹಿನಿಯು ಪ್ರತಿಭಟನೆಯ ಹೆಸರಿನಲ್ಲಿ ನಡೆಸಿದ ಹಿಂಸಾಚಾರ ಪ್ರಕರಣಗಳು ಹಲವಿವೆ. ಆದರೆ ಸಿಎಎ ವಿರೋಧಿ ಪ್ರತಿಭಟನಾಕಾರರ ಕೈಯಲ್ಲಿ ರಾಷ್ಟ್ರಧ್ವಜಗಳಿವೆ. ರಾಷ್ಟ್ರಧ್ವಜವನ್ನು ತ್ರಿಶೂಲ, ದೊಣ್ಣೆಗಳಿಗಿಂತ ಮಾರಕಾಯುಧವಾಗಿ ಪರಿಗಣಿಸುತ್ತಿರುವ ಸರಕಾರವೊಂದು ಉತ್ತರ ಪ್ರದೇಶವನ್ನು ಮಾತ್ರವಲ್ಲ, ಇಡೀ ಭಾರತವನ್ನು ಆಳುತ್ತಿದೆ. ಉತ್ತರ ಪ್ರದೇಶದಲ್ಲಿ ಪ್ರತಿಭಟನಾಕಾರರು ಹಿಂಸಾಚಾರವನ್ನು ನಡೆಸುತ್ತಿದ್ದಾರೆಯೋ ಅಥವಾ ಪೊಲೀಸರನ್ನು ಬಳಸಿಕೊಂಡು ಸರಕಾರವೇ ಹಿಂಸೆ ಎಸಗುತ್ತಿದೆಯೋ ಎನ್ನುವುದು ಇನ್ನು ಸಾಬೀತಾಗಬೇಕಷ್ಟೇ. ಪೊಲೀಸರು ಪ್ರತಿಭಟನೆಯನ್ನು ದಮನಿಸಲು ಅಡ್ಡ ದಾರಿ ಹಿಡಿದಿದ್ದಾರೆ ಎನ್ನುವ ಆರೋಪ ವ್ಯಾಪಕವಾಗಿವೆ. ಸ್ವತಃ ಪೊಲೀಸರೇ ಆಸ್ತಿಪಾಸ್ತಿಗಳಿಗೆ ಹಾನಿಗೈದು ಅವುಗಳ ಹೊಣೆಯನ್ನು ಪ್ರತಿಭಟನಾಕಾರರ ಮೇಲೆ ಹಾಕುತ್ತಿದ್ದಾರೆ. ಇದರ ಜೊತೆ ಜೊತೆಗೇ ಅಮಾಯಕ ಪ್ರತಿಭಟನಾಕಾರರನ್ನು ಹಿಂಸಾತ್ಮಕ ರೀತಿಯಲ್ಲಿ ದಮನಿಸುವ ಮೂಲಕ ಅವರನ್ನು ಪ್ರಚೋದಿಸುತ್ತಿದ್ದಾರೆ. ಶಾಂತಿಯಿಂದ ಪ್ರತಿಭಟನೆ ನಡೆಸುವುದು ಪೊಲೀಸರಿಗೇ ಬೇಕಾಗಿಲ್ಲ. ಜೊತೆ ಜೊತೆಗೇ ‘ಗಲಭೆ ಆರೋಪಿಗಳ ಸೊತ್ತುಗಳನ್ನು ಮುಟ್ಟುಗೋಲು ಹಾಕುತ್ತೇವೆ’’ ಎಂದು ಸರಕಾರ ಹೊರಟಿದೆ.

ನಿಜಕ್ಕೂ ಮುಟ್ಟುಗೋಲು ಹಾಕುತ್ತಿದ್ದರೆ, ನಕಲಿ ವೇಷದಲ್ಲಿ ಸಾರ್ವಜನಿಕರ ಸೊತ್ತುಗಳನ್ನು ಹಾಳುಗೆಡಹುತ್ತಿರುವ ಪೊಲೀಸರನ್ನು ಗುರುತಿಸಿ ಅವರ ಆಸ್ತಿ ಪಾಸ್ತಿಗಳನ್ನು ಮುಟ್ಟುಗೋಲು ಹಾಕಬೇಕಾಗುತ್ತದೆ. ಅಥವಾ ಅವರ ವೇತನಗಳನ್ನು ತಡೆ ಹಿಡಿಯಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಯಾರು ಪ್ರತಿಭಟನಾಕಾರರು, ಯಾರು ದುಷ್ಕರ್ಮಿಗಳು ಎನ್ನುವುದನ್ನು ನಿರ್ಧರಿಸುವುದು ಸರಕಾರವೋ, ಪೊಲೀಸರೋ ಅಲ್ಲ. ಗಲಭೆಯ ಆರೋಪಗಳನ್ನು ಹೊತ್ತವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಬೇಕು. ನ್ಯಾಯಾಲಯ ಅದನ್ನು ತೀರ್ಮಾನಿಸಬೇಕು. ಒಂದು ವೇಳೆ ಪ್ರತಿಭಟನಾಕಾರರೇ ಗಲಭೆಗೈದಿರುವುದು ನಿಜವೆಂದು ಸಾಬೀತಾದರೆ ಸರಕಾರ ಅವರ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಬಹುದು. ವಿಪರ್ಯಾಸವೆಂದರೆ, ಪ್ರತಿಭಟನಾಕಾರರನ್ನು ಸರಕಾರವೇ ಗಲಭೆಕೋರರೆಂದು ಕರೆದು, ಮುಟ್ಟುಗೋಲು ಹಾಕಲು ಮುಂದಾಗಿದೆ. ಇದು ಸಂವಿಧಾನ ವಿರೋಧಿಯಲ್ಲವೇ? ಈಗಾಗಲೇ ಸರಕಾರ ಪ್ರತಿಭಟನೆಗಳನ್ನು ಸಂಘಟಿಸಿದ ಹಲವರಿಗೆ ನೋಟಿಸ್ ಕಳುಹಿಸಿದೆ. ಹಲವು ಅಂಗಡಿಗಳಿಗೆ ಬೀಗ ಜಡಿಯಲು ಮುಂದಾಗಿದೆ. ನ್ಯಾಯಾಲಯ ಮಾಡಬೇಕಾದ ಕೆಲಸವನ್ನು ನೇರವಾಗಿ ಸರಕಾರ ಮಾಡುತ್ತಿದೆ ಎಂದಾದರೆ, ಉತ್ತರ ಪ್ರದೇಶದಲ್ಲಿ ಸಂವಿಧಾನ ಅಮಾನತಿನಲ್ಲಿದೆ ಎಂದರ್ಥವಲ್ಲವೇ? ಇಷ್ಟಕ್ಕೂ ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ, ಮುಂಬೈ ಗಲಭೆಯ ಸಂದರ್ಭದಲ್ಲಿ, ಮುಝಫ್ಫರ್ ನಗರ ಗಲಭೆಯಲ್ಲಿ, ದಾದ್ರಿಯಲ್ಲಿ ಹಿಂಸಾಚಾರ ಗೈದ ಎಷ್ಟು ಮಂದಿ ನಾಯಕರ ಆಸ್ತಿಗಳನ್ನು ಈವರೆಗೆ ಮುಟ್ಟುಗೋಲು ಹಾಕಲಾಗಿದೆ ಎಂಬ ಪ್ರಶ್ನೆ ಉತ್ತರವಿಲ್ಲದೆ ಖಾಲಿ ಬಿದ್ದುಕೊಂಡಿದೆ.

ಸರಕಾರದ ಪ್ರಕಾರ ಕೋಮುಗಲಭೆಗಳನ್ನು ನಡೆಸುವವರು ದೇಶಭಕ್ತರು. ಸರಕಾರದ ನೀತಿಗಳನ್ನು ವಿರೋಧಿಸಿ ಸಾರ್ವಜನಿಕವಾಗಿ ಪ್ರತಿಭಟನೆಗೆ ಇಳಿಯುವ ವಿದ್ಯಾರ್ಥಿಗಳು ದೇಶದ್ರೋಹಿಗಳು. ಉತ್ತರ ಪ್ರದೇಶದ ಕ್ರಮಗಳ ವಿರುದ್ಧ ಈಗಾಗಲೇ ನ್ಯಾಯವಾದಿಗಳು ಬಂಡೆದಿದ್ದಾರೆ. ಸರಕಾರದ ಕ್ರಮಕ್ಕೆ ಯಾವುದೇ ಕಾನೂನಿನ ಬೆಂಬಲ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಸರಕಾರ ಮಾತ್ರ ಸರ್ವಾಧಿಕಾರಿ ಕ್ರಮವನ್ನು ಮುಂದುವರಿಸಿದೆ. ಅಷ್ಟೇ ಅಲ್ಲ, ವಿವಿಧ ಮುಖಂಡರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿ ಜೈಲಿಗೆ ತಳ್ಳುತ್ತಿವೆ. ಬಹುಶಃ ನಾಯಕತ್ವವಿಲ್ಲದೇ ಇದ್ದರೆ ಪ್ರತಿಭಟನೆ ತಣ್ಣಗಾಗಬಹುದು ಎನ್ನುವುದು ಇವರ ಉದ್ದೇಶವಿರಬಹುದು. ಇದೇ ಸಂದರ್ಭದಲ್ಲಿ ಪ್ರತಿಭಟನೆಗಳಿಗೆ ಪಾಕಿಸ್ತಾನದ ನಂಟನ್ನು ಜೋಡಿಸುವ ಪ್ರಯತ್ನವೂ ನಡೆಯುತ್ತಿದೆ. ಇವೆಲ್ಲವೂ ಏನನ್ನು ಹೇಳುತ್ತಿದೆಯೆಂದರೆ, ಪ್ರತಿಭಟನೆಯಿಂದ ಸರಕಾರ ಹತಾಶೆಗೊಂಡಿದೆ. ಬೆದರಿದೆ. ಕರ್ನಾಟಕದಲ್ಲೂ ಪ್ರತಿಭಟನೆಗಳನ್ನು ದಮನಿಸಲು ಉತ್ತರ ಪ್ರದೇಶದ ಕ್ರಮ ಅನುಸರಿಸಲು ಕೆಲವು ಬಿಜೆಪಿ ನಾಯಕರು ಸಲಹೆಗಳನ್ನು ನೀಡುತ್ತಿದ್ದಾರೆ. ಸಿ.ಟಿ. ರವಿಯಂತಹ ರಾಜಕಾರಣಿಗಳು ತಮ್ಮ ಉಗ್ರ ಭಾಷಣಗಳಿಂದ ಉರಿಸಿದ ಮನೆಗಳೆಷ್ಟು ಎನ್ನುವುದನ್ನು, ಅವರ ಮೇಲಿದ್ದ ಕ್ರಿಮಿನಲ್ ಪ್ರಕರಣಗಳಿಂದ ತಿಳಿದುಕೊಳ್ಳಬಹುದು.

ಇತ್ತೀಚೆಗಷ್ಟೇ ಇವರ ಕಾರು ಇಬ್ಬರು ಅಮಯಕರ ಮೇಲೆ ಹರಿದು ಜೀವವನ್ನು ಬಲಿತೆಗೆದುಕೊಂಡಿತ್ತು. ತಮ್ಮಿಂದಾದ ಪ್ರಮಾದಕ್ಕಾಗಿ ಸಿ.ಟಿ. ರವಿ ಅವರು ತಮ್ಮ ಸೊತ್ತುಗಳಿಂದ ಅಮಾಯಕರಿಗೆ ಪರಿಹಾರ ಕೊಟ್ಟ ಯಾವುದೇ ವರದಿಗಳಿಲ್ಲ. ಕಾರವಾರದಲ್ಲಿ, ತೀರ್ಥಹಳ್ಳಿಯಲ್ಲಿ,ಕಲ್ಲಡ್ಕದಲ್ಲಿ ನಡೆದ ಹಿಂಸಾಚಾರ, ಸಾರ್ವಜನಿಕ ಸೊತ್ತುಗಳಿಗೆ ಆದ ಹಾನಿಗಳಿಗಾಗಿ ಮೊತ್ತ ಮೊದಲು ಶೋಭಾ ಕರಂದ್ಲಾಜೆ, ಸಿ. ಟಿ. ರವಿ, ಕಲ್ಲಡ್ಕ ಪ್ರಭಾಕರ ಭಟ್ ಅವರ ಸೊತ್ತುಗಳನ್ನು ಮುಟ್ಟುಗೋಲು ಹಾಕಬೇಕಾಗಿದೆ. ಬಳಿಕ, ಸಿಎಎ ಪ್ರತಿಭಟನಾಕಾರರ ಕಡೆ ಸರಕಾರ ಗಮನ ಹರಿಸಲಿ. ಎಲ್ಲಕ್ಕಿಂತ ಮುಖ್ಯವಾಗಿ ಮಂಗಳೂರಿನಲ್ಲಿ ಪೊಲೀಸರ ಕಾರಣದಿಂದ ಎರಡು ಜೀವಗಳು ಬಲಿಯಾಗಿವೆ. ಮೂರು ದಿನಗಳ ಕಾಲ ಕರ್ಫ್ಯೂ ಹೇರಿ ಸಾರ್ವಜನಿಕ ಬದುಕನ್ನು ಅಸ್ತವ್ಯಸ್ತಗೊಳಿಸಲಾಗಿದೆ. ಇದಕ್ಕಾಗಿ ಯಾರ ಆಸ್ತಿಗಳನ್ನು ಮುಟ್ಟುಗೋಲು ಮಾಡಬೇಕು?ಮಂಗಳೂರು ಪೊಲೀಸ್ ಆಯುಕ್ತರ ಆಸ್ತಿಗಳನ್ನೋ ಅಥವಾ ಅವರ ಮೂಲಕ ಮಂಗಳೂರಿನ ಶಾಂತಿಯನ್ನು ಕೆಡಿಸಿದ ಕೆಲವು ಸಂಘಟನೆಗಳ ಮುಖ್ಯಸ್ಥರ ಆಸ್ತಿಪಾಸ್ತಿಗಳನ್ನೋ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News