ಜೆಎಂಐ ಗಲಭೆ ಕುರಿತ ವರದಿ ಪ್ರಸಾರದಲ್ಲಿ ಪಕ್ಷಪಾತ ಧೋರಣೆಗೆ ಪ್ರತಿಭಟನೆ: ‘ಝಿ ನ್ಯೂಸ್’ ಉದ್ಯೋಗಿ ರಾಜೀನಾಮೆ

Update: 2019-12-28 05:54 GMT
file photo

ಹೊಸದಿಲ್ಲಿ,ಡಿ.27: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ವೇಳೆ ಭುಗಿಲೆದ್ದ ಹಿಂಸಾಚಾರದ ಕುರಿತ ವರದಿಯಲ್ಲಿ ‘ಝಿನ್ಯೂಸ್’ ಸುದ್ದಿವಾಹಿನಿಯು ಪಕ್ಷಪಾತ ಮಾಡಿದೆಯೆಂದು ಆಪಾದಿಸಿ, ಸಂಸ್ಥೆಯ ವಿಡಿಯೋ ನಿರ್ಮಾಣ ವಿಭಾಗದ ವರಿಷ್ಠ ನಾಸಿರ್ ಅಝ್ಮಿ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

‘ಹಿಂದೋಂಸೆ ಆಝಾದಿ’ ಎಂಬ ಘೋಷಣೆಯನ್ನು ಕೂಗುತ್ತಿರುವಂತೆ ಕೆಲವು ಸುದ್ದಿವಾಹಿನಿಗಳಲ್ಲಿ ತೋರಿಸಲಾದ ವಿಡಿಯೋ ಕೃತ್ರಿಮವೆಂದು ಅವರು ಆರೋಪಿಸಿದ್ದಾರೆ. ವಾಸ್ತವಿಕವಾಗಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ‘‘ಇನ್ ದೋನೊ ಸೆ ಆಝಾದಿ’’ ಎಂಬ ಘೋಷಣೆಯನ್ನು ಕೂಗಿದ್ದಾರೆಂದು ಅವರು ಹೇಳಿದ್ದಾರೆ.

ಜಾಮಿಯಾ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಹಿಂಸಾಚಾರವನ್ನು ಪ್ರಸಾರ ಮಾಡದಿರಲು ‘ಝಿನ್ಯೂಸ್’ ನಿರ್ಧರಿಸಿತೆಂದು ನಾಸಿರ್ ಆಪಾದಿಸಿದ್ದಾರೆ. ಜಾಮಿಯಾ ಮಿಲ್ಲಿಯಾ ವಿವಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯದ ಘಟನೆಗಳ ಕುರಿತ ವರದಿಗಳನ್ನು ತಾನು ನಿರಂತರವಾಗಿ ಕಳುಹಿಸುತ್ತಿದ್ದರೂ, ಆ ಬಗ್ಗೆ ಒಂದೇ ಒಂದು ಪ್ರತಿಕ್ರಿಯೆ ಅಥವಾ ಉತ್ತರ ತನಗೆ ಬಂದಿಲ್ಲವೆಂದು ನಾಸಿರ್ ಹೇಳಿದ್ದಾರೆ.

ಜಾಮಿಯಾ ಮಿಲ್ಲಿಯಾ ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯದ ಘಟನೆಗಳ ವಿಡಿಯೋಗಳನ್ನು ಪೇಸ್‌ಬುಕ್‌ನಲ್ಲಿ ಪ್ರಸಾರ ಮಾಡಿದ್ದಕ್ಕಾಗಿ ತನ್ನ ಮೇಲೆ ಗುರಿಯಿರಿಸಲಾಗಿದೆಯೆಂದು ನಾಸಿರ್ ಆರೋಪಿಸಿದ್ದಾರೆ. ಇಂತಹ ವಿಷಯಗಳನ್ನು ಪ್ರಸಾರ ಮಾಡದಂತೆಯೂ ತನ್ನ ಮೇಲಾಧಿಕಾರಿಗಳು ತನಗೆ ಸೂಚಿಸಿದ್ದಾರೆಂದು ಅವರು ಆಪಾದಿಸಿದ್ದಾರೆ.

ಡಿಸೆಂಬರ್ 15ರಂದು ದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ಆವರಣದಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ಹಾಗೂ ಅಶ್ರುವಾಯು ಪ್ರಯೋಗಿಸಿದ ಘಟನೆಯ ಬಳಿಕ ‘ಝಿ ನ್ಯೂಸ್’ ಪ್ರಸಾರ ಮಾಡಿದ ವಿಶೇಷ ಕಾರ್ಯಕ್ರಮವೊಂದರಲ್ಲಿ ಸ್ಥಳೀಯರು ಬಸ್‌ಗಳನ್ನು ಸುಟ್ಟುಹಾಕಿದಾಗ ಅವರನ್ನು ನಿಯಂತ್ರಿಸಲು ಪೊಲೀಸರು ಬಲಪ್ರಯೋಗಿಸಬೇಕಾಯಿತೆಂದು ವಿವರಿಸಲಾಯಿತು. ಡಿಎನ್‌ಎ ಎಂಬ ಹೆಸರಿನ ಈ ಕಾರ್ಯಕ್ರಮದಲ್ಲಿ, ಝಿ ವಾಹಿನಿಯ ಮುಖ್ಯ ಸುದ್ದಿಸಂಪಾದಕ ಸುಧೀರ್ ಚೌಧರಿ ಅವರು ‘‘ನಿರ್ದಿಷ್ಟ ಸಮುದಾಯವೊಂದು ವಾಸಿಸುತ್ತಿರುವ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಕಾನೂನು ಅಸ್ತಿತ್ವದಲ್ಲಿಲ್ಲವೆಂಬುದು ಎಲ್ಲರಿಗೂ ಗೊತ್ತಿದೆ. ಹಲವಾರು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಕೂಡಾ ಇಂತಹದೇ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ’’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.ಸುಧೀರ್ ಚೌಧರಿ ಅವರು ಹೇಳಿಕೆ ವಿರುದ್ಧ ವ್ಯಾಪಕ ಅಕ್ರೋಶ ಉಂಟಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News