ವ್ಯಾಸ ಮಹಾಭಾರತವನ್ನು ಆಧುನಿಕ ಸ್ಪರ್ಶದೊಂದಿಗೆ ರಚಿಸಲಾಗಿದೆ: ಡಾ.ಚಂದ್ರಶೇಖರ ಕಂಬಾರ

Update: 2019-12-29 15:14 GMT

ಬೆಂಗಳೂರು, ಡಿ.29: ವ್ಯಾಸ ಮಹಾಭಾರತದ ಪ್ರತಿಯೊಂದು ಪರ್ವವನ್ನು ವಿಡಂಬನಾತ್ಮಕವಾಗಿ ಆಧುನಿಕ ಸ್ಪರ್ಶದೊಂದಿಗೆ ರಚಿಸಲಾಗಿದೆ ಎಂದು ಜ್ಞಾನಪೀಠ ಪುರಸ್ಕೃತ, ಸಾಹಿತಿ ಡಾ.ಚಂದ್ರಶೇಖರ ಕಂಬಾರ ಹೇಳಿದ್ದಾರೆ.

ರವಿವಾರ ಎಸ್.ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಮೈಸೂರು ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಸಹಯೋಗದೊಂದಿಗೆ ಜಯನಗರದ ಎನ್‌ಎಂಕೆಆರ್‌ವಿ ಕಾಲೇಜಿನ ಮಂಗಳ ಮಂಟಪ ಸಭಾಂಗಣದಲ್ಲಿ ಡಾ.ಎಸ್.ಎಲ್.ಭೈರಪ್ಪ ಅವರ ಮೇರು ಕೃತಿ ಪರ್ವಕ್ಕೆ 40 ವರ್ಷ ತುಂಬಿದ ಪ್ರಯುಕ್ತ ಆಯೋಜಿಸಿದ್ದ ಪರ್ವ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಪರ್ವ ಕಾದಂಬರಿಯು ವ್ಯಾಸ ಭಾರತದ ಮರುಸೃಷ್ಟಿಯೇ ಅಥವಾ ವಿರುದ್ಧದ ಬಂಡಾಯವೇ ಎಂಬ ಪ್ರಶ್ನೆಯು ಓದುಗರನ್ನು ಕಾಡುತ್ತಿದೆ. ವ್ಯಾಸರು ಸೃಷ್ಟಿಸಿದ ಮಿಥ್‌ಗಳಲ್ಲಿ ಮುಳುಗಿ ಮರೆಯಾಗಿದ್ದ ಮಾನವನ ಸ್ವಾಭಾವದ ಸತ್ಯಗಳ ಆವಿಷ್ಕಾರವೇ ಈ ಕೃತಿಯಲ್ಲಿ ಭೈರಪ್ಪ ಅವರು ಉಲ್ಲೇಖಿಸಿದ್ದಾರೆ. ಇಂತಹ ಕೃತಿಯು 21ನೇ ಶತಮಾನದ ಜನರನ್ನೂ ಕೂಡ ಸೆಳೆದುಕೊಂಡಿದೆ ಎಂದರು.

ಸತ್ಯ, ಧರ್ಮ, ತ್ಯಾಗ ಹಾಗೂ ರಾಜ ನೀತಿಯನ್ನು ಬಿಂಬಿಸುವ ಈ ಕೃತಿಯು ಅತ್ಯಂತ ಶ್ರೇಷ್ಟ ಕಾದಂಬರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಹಾಭಾರತದಲ್ಲಿ ಬರುವ ಮಾನವೀಯ ಮೌಲ್ಯಗಳನ್ನು ಓದುಗರಿಗೆ ಅರ್ಥಪೂರ್ಣವಾಗಿ ಸರಳವಾಗಿ ಕೃತಿಯಿಲ್ಲಿ ತಿಳಿಸಿಲಾಗಿದೆ. ಭೈರಪ್ಪ ಅವರು ಮೈ ರೋಮಾಂಚನಕಾರಿಯಾವಂತೆ ಭಾಷಣ ಮಾಡುವ ಗುಣ ಹೊಂದಿದ್ದು, ಘಟನಾ ವಿಷಯಗಳು ನೇರವಾಗಿ ನಮ್ಮ ಮುಂದೆಯೇ ನಡೆಯುತ್ತಿದೆ ಎಂಬಂತೆ ಭಾಸವಾಗುತ್ತದೆ ಎಂದರು.

ಸಾಹಿತಿ ಶತಾವಧಾನಿ ಡಾ.ಆರ್.ಗಣೇಶ್ ಮಾತನಾಡಿ, ಮಹಾಕಾವ್ಯಗಳು ಸಮಾಜದಲ್ಲಿ ತಲೆ ಎತ್ತಲು ಮತ್ತು ಬದುಕಲು ಸಾಮಾನ್ಯ ಓದುಗರಿಂದ ಮಾತ್ರ ಸಾಧ್ಯ. ಇದಕ್ಕೆ ರಾಮಾಯಣ, ಮಹಾಭಾರತಗಳೇ ನಿದರ್ಶನ. ಸಂಗೀತದ ಕುರಿತಾದ ಕಾರ್ಯಕ್ರಮವನ್ನು ಪ್ರತಿಯೊಂದು ಕಡೆಗಳಲ್ಲಿಯೂ ನಡೆಸಿಕೊಂಡು ಬರಲಾಗುತ್ತಿದ್ದು, ಅದೇ ರೀತಿಯಲ್ಲಿ ಸಾಹಿತ್ಯದ ಕುರಿತಾಗಿ ಇಂತಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಬೇಕು. ಆಧ್ಯಾತ್ಮ ಎಂದರೆ ಮನುಷ್ಯನ ಚಿತ್ತವನ್ನು ಆಳವಾಗಿ ಅಧ್ಯಯನ ನಡೆಸುವುದಾಗಿದೆ. ಅದರಂತೆ ಭೈರಪ್ಪ ಅವರು ಅತ್ಯಂತ ಆಳವಾಗಿ ಅಧ್ಯಯನ ನಡೆಸಿ ಪರ್ವ ಕಾದಂಬರಿ ರಚನೆ ಮಾಡಿದ್ದಾರೆ ಎಂದರು.

ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ, ಕೇಂದ್ರ ಸಾಹಿತ್ಯ ಅಕಾಡೆಮಿಯ ಉಪಾಧ್ಯಕ್ಷ ಡಾ.ಮಾಧವ್ ಕೌಶಿಕ್, ಮರಾಠಿ ಲೇಖಕಿ ಡಾ.ಅರುಣಾ ಢೇರೆ, ಸಂಸ್ಕೃತ ಲೇಖಕ ಡಾ.ಎಚ್.ಆರ್.ವಿಶ್ವಾಸ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News