ರೈತರ ಭೂಮಿಗೆ ನ್ಯಾಯಯುತ ಪರಿಹಾರ ನೀಡಲು ಒತ್ತಾಯ: ಜ.7ರಂದು ಅಹೋರಾತ್ರಿ ಧರಣಿ ಸತ್ಯಾಗ್ರಹ

Update: 2019-12-30 17:58 GMT

ಬೆಂಗಳೂರು, ಡಿ.30: ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಯೋಜನೆಯಡಿ ಸ್ವಾಧೀನ ಪಡಿಸಿಕೊಳ್ಳುತ್ತಿರುವ ರೈತರ ಭೂಮಿಗೆ ನ್ಯಾಯಯುತ ಪರಿಹಾರ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜ.7 ರಂದು ಬಿಡಿಎ ಕೇಂದ್ರ ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ.

ಸೋಮವಾರ ಪ್ರೆಸ್‌ಕ್ಲಬ್‌ನ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಅಂದು ಬೆಳಗ್ಗೆ 11.30ಕ್ಕೆ ಧರಣಿ ಆರಂಭವಾಗಲಿದೆ. ಬೆಂಗಳೂರು ಉತ್ತರ ಭಾಗದ 67 ಹಳ್ಳಿಗಳ ರೈತರು ಸೇರಿದಂತೆ ಒಟ್ಟು ಎರಡು ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದರು. ತುಮಕೂರು ರಸ್ತೆಯಿಂದ ಹಳೆಯ ಮದ್ರಾಸ್ ರಸ್ತೆ ಮಾರ್ಗವಾಗಿ ಹೊಸೂರುವರೆಗೆ 65 ಕಿ.ಮೀ. ವ್ಯಾಪ್ತಿಯಲ್ಲಿ ರಸ್ತೆ ನಿರ್ಮಿಸಲು ಬಿಡಿಎ ಯೋಜನೆ ರೂಪಿಸಿದೆ. ಈ ಮಾರ್ಗದಲ್ಲಿ ಬರುವ 67 ಗ್ರಾಮಗಳಲ್ಲಿನ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳುತ್ತಿದೆ. ಇದಕ್ಕಾಗಿ 8,100 ಕೋಟಿ ರೂ. ಹಣವನ್ನು ಭೂಪರಿಹಾರಕ್ಕೆ ಬಿಡಿಎ ನೀಡಬೇಕಾಗುತ್ತದೆ ಎಂದರು.

ಅಭಿವೃದ್ಧಿ ದೃಷ್ಟಿಯಿಂದ ಹಾಗೂ ಸರಕಾರದ ಮೇಲಿರುವ ನಂಬಿಕೆಯಿಂದ ರೈತರು ಜಮೀನು ನೀಡಿದ್ದಾರೆ. ಆದರೆ 15 ವರ್ಷ ಕಳೆದರೂ ಯೋಜನೆ ಆರಂಭವಾಗಿಲ್ಲ. ಆದರೆ ವರ್ಷದಿಂದ ವರ್ಷಕ್ಕೆ ಜಮೀನಿನ ಬೆಲೆ ಮಾತ್ರ ಹೆಚ್ಚಾಗುತ್ತಿದೆ. 2005ರಿಂದ ಈವರೆಗೆ ನಾಲ್ಕು ಬಾರಿ ಗೈಡನ್ಸ್ ದರ ಹೆಚ್ಚಿಸಲಾಗಿದೆ. ಹೀಗಾಗಿ ಬಿಡಿಎ ಜಮೀನಿನ ಬೆಲೆ ಮತ್ತಷ್ಟು ಹೆಚ್ಚಬಹುದೆಂಬ ಆತಂಕದಿಂದ 67 ಗ್ರಾಮಗಳಲ್ಲಿನ ಜಮೀನಿನ ಬೆಲೆ ಹೆಚ್ಚಿಸದಂತೆ ಅಧಿಕೃತವಾಗಿ ಪತ್ರದ ಮೂಲಕ ಜಿಲ್ಲಾ ನೋಂದಣಾಧಿಕಾರಿಗಳಿಗೆ ತಿಳಿಸಿ ಬೆಲೆ ನಿಯಂತ್ರಿಸಿದೆ. ಭೂ ಸ್ವಾಧೀನಪಡಿಸಿಕೊಂಡ ಪ್ರತಿ ಎಕರೆ ಜಮೀನಿಗೆ ಪ್ರಸ್ತುತ ಮಾರುಕಟ್ಟೆ ವೌಲ್ಯ 3 ರಿಂದ 5 ಕೋಟಿಗೂ ಹೆಚ್ಚಿರುವುದನ್ನು ಮನಗಂಡು ಬಿಡಿಎ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು. ಆದ್ದರಿಂದ ಜಮೀನಿನ ಮಾಲಕರಿಗೆ ನ್ಯಾಯಬದ್ಧ ಬೆಲೆ ನಿಗದಿ ಮಾಡಬೇಕು. ರಸ್ತೆಯಿಂದ ಸಂಪೂರ್ಣ ಜಮೀನು ಕಳೆದುಕೊಳ್ಳುವವರಿಗೆ ಹೆಚ್ಚುವರಿಯಾಗಿ 2 ಕೋಟಿ ಹಣ ನೀಡಬೇಕು ಎಂದು ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News