​ಮಹಾರಾಷ್ಟ್ರ ಸಂಪುಟ ವಿಸ್ತರಣೆ ಬೆನ್ನಲ್ಲೇ ಎನ್‌ಸಿಪಿ ಶಾಸಕ ರಾಜೀನಾಮೆ

Update: 2019-12-31 03:49 GMT

ಔರಂಗಾಬಾದ್, ಡಿ.31: ಮಹಾರಾಷ್ಟ್ರ ಸಂಪುಟ ವಿಸ್ತರಣೆ ಬೆನ್ನಲ್ಲೇ ಆಡಳಿತಾರೂಢ ತ್ರಿಪಕ್ಷ ಮೈತ್ರಿಕೂಟದಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಬೀಡ್ ಜಿಲ್ಲೆಯ ಎನ್‌ಸಿಪಿ ಶಾಸಕ ಪ್ರಕಾಶ್ ಸೋಳಂಕಿ ಶಾಸಕತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

ನಾಲ್ಕು ಬಾರಿ ಮಜಲಗಾಂವ್ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸೋಳಂಕಿ, ಸಂಪುಟಕ್ಕೆ ತಮ್ಮನ್ನು ಸೇರಿಸಿಕೊಳ್ಳದಿರುವುದಕ್ಕೆ ಹಾಗೂ ರಾಜೀನಾಮೆಗೆ ನೇರ ಸಂಬಂಧ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೆ "ನಾನು ರಾಜಕೀಯ ಮಾಡಲು ಅಯೋಗ್ಯ ಎನ್ನುವುದು ಸಂಪುಟ ವಿಸ್ತರಣೆಯಿಂದ ಖಚಿತವಾಗಿದೆ" ಎಂದು ಅವರು ಹೇಳಿದ್ದಾರೆ.

"ನಾನು ಮಂಗಳವಾರ ರಾಜೀನಾಮೆ ನೀಡಿ ರಾಜಕೀಯದಿಂದ ದೂರ ಉಳಿಯುತ್ತೇನೆ" ಎಂದು ಸೋಳಂಕಿ ಹೇಳಿದ್ದಾರೆ. ಆದರೆ ಪಕ್ಷದ ಯಾವುದೇ ನಾಯಕರ ಬಗ್ಗೆ ಅಸಮಾಧಾನ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

"ಪದತ್ಯಾಗದ ನಿರ್ಧಾರದ ಬಗ್ಗೆ ಎನ್‌ಸಿಪಿ ನಾಯಕರ ಜತೆ ಚರ್ಚಿಸಿದ್ದೇನೆ. ಮುಂಬೈನಲ್ಲಿ ವಿಧಾನಸಭೆ ಸ್ಪೀಕರ್ ಅವರನ್ನು ಮಂಗಳವಾರ ಸಂಜೆ ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಲಿದ್ದೇನೆ. ಸಂಪುಟ ವಿಸ್ತರಣೆಗೂ ನನ್ನ ರಾಜೀನಾಮೆಗೂ ಸಂಬಂಧ ಇಲ್ಲ" ಎಂದು ಪಿಟಿಐ ಜತೆ ಮಾತನಾಡಿದ ಅವರು ತಿಳಿಸಿದರು.

ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರು ಸೋಮವಾರ 36 ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಸಂಪುಟ ವಿಸ್ತರಣೆ ಮಾಡಿದ್ದರು. ಎನ್‌ಸಿಪಿ ಮುಖಂಡ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಸೇರ್ಪಡೆಯಾಗಿದ್ದಾರೆ. 288 ಸದಸ್ಯಬಲದ ವಿಧಾನಸಭೆಯಲ್ಲಿ ಎನ್‌ಸಿಪಿ 54 ಹಾಗೂ ಶಿವಸೇನೆ 56 ಶಾಸಕರನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News