ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ: ಅವಕಾಶ ಕಳೆದುಕೊಂಡ ಮೂಲ ಶಿವಸೈನಿಕರು; ‘ಸಾಮ್ನಾ’

Update: 2019-12-31 17:55 GMT
ಉದ್ಧವ್ ಠಾಕ್ರೆ

ಮುಂಬೈ, ಡಿ. 31: ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಸಚಿವ ಸಂಪುಟದ ಮೊದಲ ವಿಸ್ತರಣೆಯಲ್ಲಿ ಹಲವು ಭರವಸೆಗಳನ್ನು ಕಡೆಗಣಿಸಿದ ಬಳಿಕ ಶಿವಸೇನೆಯೊಳಗೆ ಅಸಮಾಧಾನ ಭುಗಿಲೆದ್ದಿದೆ. ಪಕ್ಷದ ಮುಖವಾಣಿ ‘ಸಾಮ್ನಾ’ ತನ್ನ ಸಂಪಾದಕೀಯದಲ್ಲಿ ಮೂಲ ಶಿವಸೈನಿಕರನ್ನು ಠಾಕ್ರೆ ತಂಡದಲ್ಲಿ ಸೇರಿಸಕೊಳ್ಳುತ್ತಿಲ್ಲ ಎಂಬ ಅಭಿಪ್ರಾಯ ಒಪ್ಪಿಕೊಂಡಿದೆ. ಆದರೆ, ಸೇನಾ ನೇತೃತ್ವದ ಮೈತ್ರಿಗೆ ಬೆಂಬಲ ನೀಡುವ ಸ್ವತಂತ್ರ ಶಾಸಕರಿಗೆ ಠಾಕ್ರೆ ತಂಡದಲ್ಲಿ ಅವಕಾಶ ಕಲ್ಪಿಸುವ ಅಗತ್ಯ ಇದೆ ಎಂದು ಅದು ವಿವರಿಸಿದೆ.

ಸಚಿವ ಸ್ಥಾನ ನೀಡದೇ ಇರುವುದಕ್ಕೆ ಅಸಮಾಧಾನ ಆಗಿದೆ ಎಂದು ಶಿವಸೇನೆಯ ಸಚಿವ ಸ್ಥಾನ ಆಕಾಂಕ್ಷಿಗಳಾದ ತಾನಾಜಿ ಸಾವಂತ್, ಸುನಿಲ್ ಪ್ರಭು ಹಾಗೂ ಭಾಸ್ಕರ್ ಜಾಧವ್ ಅವರಂತವರು ಹೇಳಿದ್ದಾರೆ ಹಾಗೂ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿಲ್ಲ. ಠಾಕ್ರೆ ಅವರ ಆಪ್ತರು ಎಂದು ಪರಿಗಣಿಸಲಾಗುವ ರವೀಂದ್ರ ವೈಕರ್ ಅವರನ್ನು ಅಚ್ಚರಿ ಎಂಬಂತೆ ಸಚಿವರ ಪಟ್ಟಿಯಿಂದ ಕೈಬಿಡಲಾಗಿದೆ. ತನ್ನ ಸಹೋದರ ಹಾಗೂ ಶಾಸಕ ಸುನೀಲ್ ರಾವತ್‌ಗೆ ಸಚಿವ ಸ್ಥಾನ ನೀಡದಿರುವ ಬಗ್ಗೆ ಶಿವಸೇನೆ ನಾಯಕ ಸಂಜಯ್ ರಾವತ್ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮಹಾರಾಷ್ಟ್ರ ವಿಕಾಸ್ ಅಘಾಡಿ ಮೈತ್ರಿ ರೂಪಿಸುವಲ್ಲಿ ರಾವತ್ ಅವರು ಪ್ರಮುಖ ಪಾತ್ರ ವಹಿಸಿದ್ದರು. ರಾವತ್ ಅವರು ಸಾಮ್ನಾದ ಕಾರ್ಯಕಾರಿ ಸಂಪಾದಕರು ಕೂಡ ಆಗಿದ್ದಾರೆ.

ದಿವಾಕರ್ ರಾವೋಟೆ, ರಾಮದಾಸ್ ಕದಮ್, ತಾನಾಜಿ ಸಾವಂತ್, ದೀಪಕ್ ಕೆಸರ್ಕಾರ್, ರವೀಂದ್ರ ವೈಕರ್ ಅವರಿಗೆ ಶಿವಸೇನೆಯಿಂದ ಇನ್ನೊಂದು ಅವಕಾಶ ಸಿಸ್ಕಿಲ್ಲ. ಮೊದಲ ಬಾರಿಗೆ ಶಾಸಕರಾಗಿರುವ ಯುವ ಸೇನೆಯ ವರಿಷ್ಠ ಆದಿತ್ಯ ಠಾಕ್ರೆ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಇದಲ್ಲದೆ ಶಿವಸೇನೆ ಕೋಟಾದಿಂದ ಸ್ವತಂತ್ರ ಶಾಸಕರಾದ ಬಚ್ಚು ಕಾಡು, ಶಂಕರ್‌ರಾವ್ ಗೋಡಖ್ ಹಾಗೂ ರಾಜೇಂದ್ರ ಯೆಡ್ರಾವ್ಕರ್ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಇದರಿಂದ ಮೂಲ ಶಿವಸೈನಿಕರು ಅವಕಾಶ ಕಳೆದುಕೊಂಡಿದ್ದಾರೆ ಎಂದು ಸಾಮ್ನಾ ಸಂಪಾದಕೀಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News