ಚಂದ್ರಯಾನ-3, ಗಗನಯಾನಕ್ಕೆ ಸಕಲ ಸಿದ್ಧತೆ: ಇಸ್ರೊ ಅಧ್ಯಕ್ಷ ಕೆ.ಶಿವನ್

Update: 2020-01-01 13:08 GMT

ಬೆಂಗಳೂರು, ಜ.1: ಚಂದ್ರಯಾನ-3 ಯೋಜನೆಗೆ ಕೇಂದ್ರ ಸರಕಾರದಿಂದ ಅನುಮೋದನೆ ಸಿಕ್ಕಿದ್ದು, ಉದ್ದೇಶಿತ ಯೋಜನೆ ಯಶಸ್ವಿಗೆ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ.

ಬುಧವಾರ ಇಸ್ರೋ ಸಂಸ್ಥೆ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2020ರ ಸಾಲಿನಲ್ಲಿ ನಾವು ಚಂದ್ರಯಾನ-3, ಗಗನಯಾನ ಹಾಗೂ ಎಸ್‌ಎಸ್‌ಎಲ್ವಿ ಉಡಯಾನಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಇದೇ ವೇಳೆ ವಿವರಿಸಿದರು.

ಚಂದ್ರಯಾನ-2 ಲ್ಯಾಂಡಿಂಗ್ ವಿಫಲವಾದರೂ ನಾವು ಈ ಯೋಜನೆಯ ಮೂಲಕ ಉತ್ತಮ ಸಾಧನೆ ಮಾಡಿದ್ದೇವೆ. ಆರ್ಬಿಟರ್ ಈಗಲೂ ಕಾರ್ಯವೆಸಗುತ್ತಿದ್ದು, ಮುಂದಿನ ಏಳು ವರ್ಷಗಳ ಕಾಲ ಇದು ನಮಗೆ ಮಾಹಿತಿ ಒದಗಿಸಲಿದೆ ಎಂದು ಅವರು ತಿಳಿಸಿದರು.

2020ರಲ್ಲಿ ಮೂರು ಪ್ರಮುಖ ಯೋಜನೆಗಳನ್ನು ಇಸ್ರೋ ಹಮ್ಮಿಕೊಂಡಿದ್ದರೂ ಚಂದ್ರಯಾನ-3ಗೆ ಆದ್ಯತೆ ನೀಡಲಾಗುವುದು ಎಂದ ಅವರು, ಚಂದ್ರಯಾನ-2ರಲ್ಲಿನ ಲ್ಯಾಂಡರ್ ಹಾಗೂ ರೋವರ್‌ಗಳನ್ನೇ ಚಂದ್ರಯಾನ-3ರಲ್ಲೂ ಬಳಸಿಕೊಳ್ಳುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

650 ಕೋಟಿ ರೂ.ವೆಚ್ಚ: ಚಂದ್ರಯಾನ-3ರ ಲ್ಯಾಂಡರ್ ಮತ್ತು ರೋವರ್‌ಗಾಗಿ 250 ಕೋಟಿ ರೂ.ಗಳಷ್ಟು ವೆಚ್ಚ ಮಾಡಲಾಗಿದ್ದು, ಈ ಯೋಜನೆಗೆ ಒಟ್ಟು 650 ಕೋಟಿ ರೂ.ಗಳಷ್ಟು ವೆಚ್ಚ ಮಾಡಲಾಗುತ್ತಿದೆ ಎಂದು ಶಿವನ್ ಇದೇ ವೇಳೆ ತಿಳಿಸಿದರು.

ವಿಕ್ರಂ ಲ್ಯಾಂಡರ್‌ನ್ನು ಪತ್ತೆಹಚ್ಚಿದ್ದು ಅಮೆರಿಕದ ನಾಸಾ ಸಂಸ್ಥೆಯೋ ಅಥವಾ ಭಾರತದ ಯುವಕ ವಿಕ್ರಂ ಅವರೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ವಿಕ್ರಂ ಲ್ಯಾಂಡರ್ ಪತ್ತೆಗೆ ಧನ್ಯವಾದ ಅರ್ಪಿಸುತ್ತೇನೆ. ಈ ವರ್ಷ 25 ಮಿಷನ್‌ಗಳನ್ನು ಟಾರ್ಗೆಟ್ ಇಟ್ಟುಕೊಂಡಿದ್ದೇವೆ. ವರ್ಷದ ಕೊನೆಯಲ್ಲಿ ಮಾನವ ಸಹಿತ ಮಿಷನ್ ನಡೆಸಲು ಚಿಂತನೆ ನಡೆಸಲಾಗಿದೆ ಎಂದರು.

ಭವಿಷ್ಯದಲ್ಲಿ ಇಸ್ರೋ ಸಂಸ್ಥೆ ಹಲವು ಮಹತ್ವದ ಯೋಜನೆಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಿದ್ದು, ಬಾಹ್ಯಾಕಾಶ ನೌಕೆಗಳ ಉಡ್ಡಯಣ ಕೇಂದ್ರ ಸ್ಥಾಪಿಸಲು ತಮಿಳುನಾಡಿನ ತೂತುಕುಡಿಯಲ್ಲಿ ಅಗತ್ಯವಿರುವಷ್ಟು ಭೂಮಿ ಪಡೆದು 2,300 ಎಕರೆ ಜಾಗದಲ್ಲಿ ಸ್ಪೇಸ್‌ಪೋರ್ಟ್ ನಿರ್ಮಿಸಲು ಕ್ರಮ ಕೈಗೊಂಡಿದ್ದೇವೆ ಎಂದರು.

ಇಸ್ರೋ ಟಿವಿ: ‘ಶೀಘ್ರದಲ್ಲೆ ಇಸ್ರೋ ಸಂಸ್ಥೆಯಿಂದ ‘ಇಸ್ರೋ ಟಿವಿ’ ಆರಂಭಗೊಳ್ಳಲಿದೆ. ಕಳೆದ ವರ್ಷವೇ ಟಿವಿ ಆರಂಭಗೊಳ್ಳಬೇಕಿತ್ತು. ಆದರೆ, ಅಗತ್ಯ ಸಿದ್ಧತೆ ಕಾರ್ಯ ಪೂರ್ಣಗೊಳ್ಳದ ಕಾರಣ ವಿಳಂಬವಾಗಿತ್ತು. ಇದೀಗ ಶೀಘ್ರವೇ ಟಿವಿ ವಾಹಿನಿ ಆರಂಭಗೊಳ್ಳಲಿದೆ’

-ಶಿವನ್, ಇಸ್ರೋ ಸಂಸ್ಥೆ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News