ಭೀಮಾ ಕೋರೆಗಾಂವ್ ಯುದ್ಧ ಸ್ಮಾರಕದಲ್ಲಿ ಲಕ್ಷಾಂತರ ಜನರಿಂದ ಗೌರವ ನಮನ

Update: 2020-01-01 17:33 GMT
ಫೋಟೊ ಕೃಪೆ: hindustantimes

ಪುಣೆ, ಜ.1: ಭೀಮಾ ಕೋರೆಗಾಂವ್ ಸಂಘರ್ಷದ 202ನೇ ವರ್ಷಾಚರಣೆ ಸಂದರ್ಭ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪೆರ್ನೆ ಗ್ರಾಮದಲ್ಲಿರುವ ಜಯಸ್ಥಂಭಕ್ಕೆ ಲಕ್ಷಾಂತರ ಮಂದಿ ಭೇಟಿ ನೀಡಿ ಗೌರವ ನಮನ ಸಲ್ಲಿಸಿದ್ದಾರೆ.

ಎರಡು ವರ್ಷದ ಹಿಂದೆ ಈ ಪ್ರದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆದಿದ್ದ ಹಿನ್ನೆಲೆಯಲ್ಲಿ ಅತ್ಯಂತ ಬಿಗಿ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿತ್ತು. ಅಲ್ಲದೆ ಕೋರೆಗಾಂವ್ ಭೀಮಾ ಸುತ್ತಮುತ್ತಲ ಪ್ರದೇಶದಲ್ಲಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಸಮೀಪದ ವಧು ಬುದ್ರಕ್ ಗ್ರಾಮದಲ್ಲೂ ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್, ವಂಚಿತ್ ಬಹುಜನ ಅಘಾದಿ(ವಿಬಿಎ) ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್, ಕೇಂದ್ರ ಸಚಿವ ರಾಮದಾಸ ಅಠವಾಳೆ ಹಾಗೂ ಇತರ ಹಲವು ಮುಖಂಡರು ಭೇಟಿ ನೀಡಿ ಗೌರವ ನಮನ ಸಲ್ಲಿಸಿದ್ದಾರೆ.

ಬಳಿಕ ಮಾತನಾಡಿದ ಅಜಿತ್ ಪವಾರ್, ಈ ಸ್ಥಂಭಕ್ಕೆ ಐತಿಹಾಸಿಕ ಹಿನ್ನೆಲೆಯಿದ್ದು ಪ್ರತೀ ವರ್ಷ ಲಕ್ಷಾಂತರ ಮಂದಿ ಇಲ್ಲಿಗೆ ಬಂದು ಗೌರವ ಸಲ್ಲಿಸುತ್ತಾರೆ. ಎರಡು ವರ್ಷದ ಹಿಂದೆ ನಡೆದ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಸರಕಾರ ಬಿಗು ಬಂದೋಬಸ್ತ್ ವ್ಯವಸ್ಥೆಗೊಳಿಸಿದೆ ಎಂದರು. ಇಲ್ಲಿಗೆ ಬಂದು ವೀರಯೋಧರಿಗೆ ಗೌರವ ನಮನ ಸಲ್ಲಿಸುವ ಜೊತೆಗೆ ವದಂತಿಗೆ ಕಿವಿಗೊಡದೆ ಶಾಂತಿ ಕಾಪಾಡಬೇಕು ಎಂದು ಜನತೆಗೆ ಮನವಿ ಮಾಡಿಕೊಂಡರು.

ಈ ಪ್ರದೇಶ ಶೌರ್ಯ, ಪರಾಕ್ರಮಕ್ಕೆ ಹೆಸರಾಗಿದೆ. ಅದೇ ರೀತಿ ಛತ್ರಪತಿ ಸಂಭಾಜಿ ಮಹಾರಾಜ್‌ಗೆ ಕೂಡಾ ಈ ಪ್ರದೇಶದೊಂದಿಗೆ ಸಂಪರ್ಕವಿತ್ತು. ಇಲ್ಲಿ ನಡೆದ ಯುದ್ಧದಲ್ಲಿ ಶೌರ್ಯ ಪರಾಕ್ರಮ ಮೆರೆದು ವೀರ ಮರಣವನ್ನಪ್ಪಿದ ಯೋಧರಿಂದ ಇಂದಿನ ಯುವಜನತೆ ಪ್ರೇರಣೆ ಪಡೆದು ಅವರು ತೋರಿದ ದಾರಿಯಲ್ಲಿ ಮುಂದೆ ಸಾಗಬೇಕು ಎಂದು ಪವಾರ್ ಹೇಳಿದರು.

ಇದೇ ಸಂದರ್ಭ ಮಾತನಾಡಿದ ಪ್ರಕಾಶ್ ಅಂಬೇಡ್ಕರ್, ಕೆಲ ಜನರು ಈ ಕಾರ್ಯಕ್ರಮಕ್ಕೆ ರಾಜಕೀಯ ಬಣ್ಣ ಬಳಿದು ಗಲಭೆ ಎಬ್ಬಿಸುವ ಪ್ರಯತ್ನ ನಡೆಸಿದರೂ ಈಗ ರಾಜ್ಯದಲ್ಲಿರುವ ಹೊಸ ಸರಕಾರದ ಸಕಾಲಿಕ ಕ್ರಮಗಳಿಂದ ಅವರ ಪ್ರಯತ್ನ ವಿಫಲವಾಗಿದೆ ಎಂದರು. 2017ರ ಎಲ್ಗಾರ್ ಪರಿಷದ್ ಪ್ರಕರಣ ಹಾಗೂ 2018ರ  ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿ ಕಾರ್ಯಕರ್ತರ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಹಿಂಪಡೆಯುವಂತೆ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಮಾಡಿರುವ ಒತ್ತಾಯದ ಬಗ್ಗೆ ಪ್ರತಿಕ್ರಿಯಿಸಿದ ಪ್ರಕಾಶ್ ಅಂಬೇಡ್ಕರ್, ಈಗ ಅಧಿಕಾರದಲ್ಲಿರುವ ಮೈತ್ರಿಕೂಟದ ಮೂರೂ ಪಕ್ಷಗಳು ಸಹಕಾರ ತತ್ವದಡಿ ಕಾರ್ಯನಿರ್ವಹಿಸುತ್ತಿರುವುದು ಸ್ವಾಗತಾರ್ಹ ಎಂದರು.

ಡಿಸೆಂಬರ್ 29ರಿಂದ ಮುಂದಿನ ನಾಲ್ಕು ದಿನ ಜಿಲ್ಲೆಯನ್ನು ಪ್ರವೇಶಿಸದಂತೆ ಸೂಚಿಸಿ ಕಳೆದ ವಾರ ಬಲಪಂಥೀಯ ಮುಖಂಡರಾದ ಮಿಲಿಂದ್ ಏಕಬೋಟೆ, ಸಂಭಾಜಿ ಭಿಡೆ, ಕಬೀರ್ ಕಲಾ ಮಂಚದ ಸದಸ್ಯರಿಗೆ ಪುಣೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದರು.

500 ದಲಿತ ಸೈನಿಕರು ಪೇಶ್ವೆಯ ಸೇನೆಯನ್ನು ಹಿಮ್ಮೆಟ್ಟಿಸಿದ್ದರು

1818ರಲ್ಲಿ ಈ ಪ್ರದೇಶದಲ್ಲಿ ನಡೆದಿದ್ದ ಯುದ್ಧದಲ್ಲಿ ಪೇಶ್ವೆಯ ಸೇನೆಯನ್ನು ಎದುರಿಸಿದ್ದ ದಲಿತರ ಸಣ್ಣ ಪಡೆ ಪೇಶ್ವೆಯ ಸೈನ್ಯವನ್ನು ಹಿಮ್ಮೆಟ್ಟಿಸಿತ್ತು. ದಲಿತ ಮಹಾರ್ ಜಾತಿಯ ಸುಮಾರು 500 ಸೈನಿಕರು (ಬ್ರಿಟಿಷ್ ಪಡೆಯ ಭಾಗವಾಗಿತ್ತು) ಸಾಧಿಸಿದ ಮಹಾನ್ ಗೆಲುವಿನ ಸ್ಮರಣಾರ್ಥ ಸ್ಥಾಪಿಸಿರುವ ಜಯಸ್ಥಂಭದ ಪ್ರದೇಶಕ್ಕೆ ಪ್ರತೀ ವರ್ಷ ಜನವರಿ 1ರಂದು ಲಕ್ಷಾಂತರ ಮಂದಿ, ವಿಶೇಷವಾಗಿ ಅಂಬೇಡ್ಕರ್ ವಾದಿ ದಲಿತ ಸಂಘಟನೆಯವರು ಭೇಟಿ ನೀಡಿ ಗೌರವ ಸಲ್ಲಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News