ರಾಜಸ್ವ ಸಂಗ್ರಹವೋ, ದರೋಡೆಯೋ?

Update: 2020-01-02 05:31 GMT

ಕೇಂದ್ರ ಸರಕಾರ ಮತ್ತು ಕರ್ನಾಟಕ ರಾಜ್ಯ ಸರಕಾರ ಜನಸಾಮಾನ್ಯರಿಗಾಗಿ ವಿಭಿನ್ನ ಕೊಡುಗೆಗಳನ್ನು ಹೊಸ ವರ್ಷದ ಅಂಗವಾಗಿ ನೀಡಿವೆ. ಕೇಂದ್ರ ಸರಕಾರ ಸಬ್ಸಿಡಿ ರಹಿತ ಎಲ್‌ಪಿಜಿಯ ದರವನ್ನು ಹೆಚ್ಚಿಸಿದೆ. ‘‘ದೇಶದ ಹಿತಾಸಕ್ತಿಗಾಗಿ ದರ ಏರಿಕೆಯನ್ನು ಸಹಿಸಿಕೊಳ್ಳಿ’’ ಎಂದು ಬಿಜೆಪಿ ನಾಯಕರು ಜನರಿಗೆ ದೇಶಪ್ರೇಮದ ಪಾಠವನ್ನೂ ಮಾಡುತ್ತಿದ್ದಾರೆ. ಇಷ್ಟಕ್ಕೂ ದೇಶವೆಂದರೆ ಏನು? ದೇಶದ ಹಿತಾಸಕ್ತಿ ಎಂದರೇನು? ಜನರ ಅಭಿವೃದ್ಧಿ ದೇಶದ ಅಭಿವೃದ್ಧಿ. ಆದರೆ ಕೇಂದ್ರ ಸರಕಾರ ಜನರನ್ನು ಮರೆತು ಒಂದೆರಡು ಕಾರ್ಪೊರೇಟ್ ದನಿಗಳ ಹಿತಾಸಕ್ತಿಯನ್ನಷ್ಟೇ ದೃಷ್ಟಿಯಲ್ಲಿಟ್ಟುಕೊಂಡು ಆರ್ಥಿಕ ನೀತಿಗಳನ್ನು ಜಾರಿಗೆ ತಂದ ಪರಿಣಾಮವಾಗಿ ದೇಶವಿಂದು ಆರ್ಥಿಕವಾಗಿ ದಯನೀಯ ಸ್ಥಿತಿಯಲ್ಲಿದೆ. ಯುದ್ಧಗಳು, ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಮಾತ್ರ ಸಂಭವಿಸಬಹುದಾದ ಆರ್ಥಿಕ ಹಾನಿಗಳು ಮೋದಿ ನೇತೃತ್ವದ ಸರಕಾರದ ನೀತಿಗಳಿಂದ ಸಂಭವಿಸಿವೆ. ಜನರ ಅಭಿವೃದ್ಧಿಯ ವಿಷಯಗಳನ್ನು ಬದಿಗಿಟ್ಟು ಪಟೇಲ್ ಪ್ರತಿಮೆ, ರಾಮಮಂದಿರ ನಿರ್ಮಾಣ, ಶಿವಾಜಿ ಪಾರ್ಕ್ ಮೊದಲಾದ ಅನುತ್ಪಾದಕ ಭಾವನಾತ್ಮಕ ವಿಷಯಗಳ ಮೇಲೆ ಜನರ ತೆರಿಗೆಯ ಹಣವನ್ನು ಸರಕಾರ ಹೂಡಿಕೆ ಮಾಡಿತು. ಯಾವುದೇ ದೂರದೃಷ್ಟಿಯಿಲ್ಲದ ನೋಟು ನಿಷೇಧ ಜನರ ಇದ್ದ ಬಿದ್ದ ಭರವಸೆಗಳನ್ನು ನಾಶ ಮಾಡಿತು. ಎಲ್ಲ ಬಿಟ್ಟ ಭಂಗಿ ನೆಟ್ಟ ಎಂಬಂತೆ ಇದೀಗ ಸಿಎಎ, ಎನ್‌ಆರ್‌ಸಿಯನ್ನು ಜಾರಿಗೊಳಿಸಲು ಹೊರಟಿದೆ. ಇದರಿಂದ ದೇಶದ ಅಭಿವೃದ್ಧಿಯ ಮೇಲೆ ಬೀರುವ ಪರಿಣಾಮವೇನು ಎನ್ನುವುದರ ಕುರಿತಂತೆ ಯಾವ ಅರಿವೂ ಸರಕಾರಕ್ಕೆ ಇಲ್ಲ. ಎನ್‌ಆರ್‌ಸಿಗಾಗಿ ಸರಕಾರ ಹಲವು ಕೋಟಿ ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ. ಈ ವೆಚ್ಚಕ್ಕೆ ಹಣವನ್ನು ಎಲ್ಲಿಂದ ತರುತ್ತದೆ? ಜನರ ಅಭಿವೃದ್ಧಿಗೆ ಮೀಸಲಿಡುವ ಹಣವೇ ಇಂದು ಕಾಶ್ಮೀರದಲ್ಲಿ ಸೇನೆಗಳಿಗೆ, ಸಿಎಎ ವಿರೋಧಿ ಪ್ರತಿಭಟನೆಗಳ ದಮನಗಳಿಗೆ ಸರಕಾರ ಬಳಸುತ್ತಿದೆ. ಎನ್‌ಆರ್‌ಸಿಯಂತಹ ದೇಶವನ್ನು ಅಪಾಯಕ್ಕೆ ತಳ್ಳುವ ಯೋಜನೆಗೂ ಇದೇ ಹಣ ಬಳಕೆಯಾಗಲಿದೆ. ಹೀಗಿರುವಾಗ ದೇಶ ಪತನದತ್ತ ಹೆಜ್ಜೆ ಇಡದೇ ಇನ್ನೇನಾಗುತ್ತದೆ?

ಇತ್ತ ರಾಜ್ಯ ಸರಕಾರ ‘ಇಂದಿರಾ ಕ್ಯಾಂಟೀನ್’ನಂತಹ ಜನಪರ ಯೋಜನೆಗಳ ಕುರಿತಂತೆ ತನ್ನ ಆಕ್ಷೇಪಗಳನ್ನು ವ್ಯಕ್ತಪಡಿಸುತ್ತಾ, ಜನರಿಗೆ ಮಧ್ಯ ರಾತ್ರಿಯವರೆಗೆ ಮದ್ಯ ಪೂರೈಸುವ ಕೊಡುಗೆಯೊಂದನ್ನು ನೀಡಿದೆ. ಈ ಮೂಲಕ ಹೊಸ ವರ್ಷವನ್ನು ‘ಅರ್ಥಪೂರ್ಣ’ವಾಗಿ ಸ್ವಾಗತಿಸಿದೆ. ‘‘ಇನ್ನು ಮುಂದೆ ಮದ್ಯದಂಗಡಿಗಳು ರಾತ್ರಿ 2 ಗಂಟೆಯವರೆಗೆ ಕಾರ್ಯನಿರ್ವಹಿಸಲಿದ್ದು ಇದಕ್ಕೆ ಗೃಹ ಇಲಾಖೆ ಸಮ್ಮತಿಸಿದೆ’’ ಎಂದು ಅಬಕಾರಿ ಸಚಿವರು ಹೇಳಿದ್ದಾರೆ. ಜೊತೆಗೆ ಸಬ್ಸಿಡಿ ದರದಲ್ಲಿ ಮದ್ಯ ಪೂರೈಕೆ ಮಾಡುವ ಕುರಿತಂತೆಯೂ ವದಂತಿಗಳು ಹರಡುತ್ತಿವೆ. ಸರಕಾರ ಮದ್ಯ ನಿಷೇಧ ಮಾಡಬೇಕು ಎಂದು ರಾಜ್ಯದಲ್ಲಿ ಮಹಿಳೆಯರು ಸುದೀರ್ಘ ಚಳವಳಿಯನ್ನೇ ಮಾಡಿಕೊಂಡು ಬಂದಿದ್ದಾರೆ. ರಾಜ್ಯದ ಅಭಿವೃದ್ಧಿಯಲ್ಲಿ ಮದ್ಯ ನಿಷೇಧ ಪರಿಣಾಮಕಾರಿ ಪಾತ್ರವನ್ನು ನಿರ್ವಹಿಸುತ್ತದೆ. ರಾಜ್ಯದಲ್ಲಿ ಮದ್ಯಪಾನ ಕಡಿಮೆಯಾದಂತೆ ಶಿಕ್ಷಣ, ಆರೋಗ್ಯ, ಪೌಷ್ಟಿಕತೆ ಇತ್ಯಾದಿಗಳ ಗುಣಮಟ್ಟ ಹೆಚ್ಚಾಗುತ್ತಾ ಹೋಗುತ್ತದೆ. ದುರಂತವೆಂದರೆ, ಸರಕಾರ ಮಧ್ಯರಾತ್ರಿಯವರೆಗೆ ಮದ್ಯ ಮಾರಾಟಕ್ಕೆ ಅನುಮತಿ ನೀಡಿರುವುದು, ಹೆಚ್ಚುವರಿ ಹಣವನ್ನು ಸಂಗ್ರಹಿಸುವುದಕ್ಕಾಗಿ. ರಾಜ್ಯದ ಅಭಿವೃದ್ಧಿಗೆ ಹಣದ ಅಗತ್ಯವಿರುವುದರಿಂದ, ಮದ್ಯವನ್ನು ಹೆಚ್ಚು ಹೆಚ್ಚು ಮಾರಾಟ ಮಾಡಿ ಖಜಾನೆ ತುಂಬುವುದು ಸರಕಾರದ ಉದ್ದೇಶ. ಇಲ್ಲೂ ಮತ್ತೆ ‘ರಾಜ್ಯದ ಅಭಿವೃದ್ಧಿ’ ಎಂದರೆ ಏನು ಎನ್ನುವ ಪ್ರಶ್ನೆ ತಲೆಯೆತ್ತುತ್ತದೆ. ರಾಜ್ಯ ಎಂದರೆ ಜನರು. ಜನರ ಬದುಕಿನ ಮಟ್ಟ ಉತ್ತಮಗೊಳ್ಳದೆ ರಾಜ್ಯ ಅಭಿವೃದ್ಧಿಯಾಗುವುದಕ್ಕೆ ಸಾಧ್ಯವಿಲ್ಲ.

ಮದ್ಯ ಹೆಚ್ಚು ಹೆಚ್ಚು ಮಾರಾಟವಾದಂತೆ ಸರಕಾರದ ಖಜಾನೆಗೆ ಹೆಚ್ಚು ಹಣ ಬರಬಹುದೇನೋ ನಿಜ. ಆದರೆ ಜನರ ಬದುಕು ಅದ್ವಾನವಾಗುತ್ತದೆ. ಒಂದು ರೀತಿಯಲ್ಲಿ ಜನರ ಹಣವನ್ನು ದೋಚಿ ತನ್ನ ಖಜಾನೆಯನ್ನು ತುಂಬಲು ಸರಕಾರ ಹೊರಟಿದೆ. ಜನರನ್ನೇ ದೋಚಿ ರಾಜ್ಯವನ್ನು ಅಭಿವೃದ್ಧಿ ಪಡಿಸುವುದು ಹೇಗೆ ಸಾಧ್ಯ? ಈ ಪ್ರಶ್ನೆಗೆ ಸರಕಾರವೇ ಉತ್ತರಿಸಬೇಕಾಗುತ್ತದೆ. ಒಂದೆಡೆ ಶ್ರೀಸಾಮಾನ್ಯರ ಆರೋಗ್ಯ, ಶಿಕ್ಷಣ, ಪೌಷ್ಟಿಕತೆಗಾಗಿ ಸರಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದೆ. ರಾಜ್ಯದಲ್ಲಿ ಮದ್ಯ ಹೆಚ್ಚು ಹೆಚ್ಚು ಮಾರಾಟವಾದಂತೆಯೇ ಬಡತನ, ಅನಾರೋಗ್ಯಗಳು ಹೆಚ್ಚ ತೊಡಗುತ್ತವೆ. ಇದು ಮಕ್ಕಳ ಶಿಕ್ಷಣದ ಮೇಲೆಯೂ ಪರಿಣಾಮ ಉಂಟು ಮಾಡುತ್ತದೆ. ವಿಪರ್ಯಾಸವೆಂದರೆ ಇದರ ಜೊತೆ ಜೊತೆಗೇ ಸರಕಾರವೇ ‘ಹೆಂಡ ಸಾರಾಯಿ ಸಹವಾಸ - ಹೆಂಡತಿ ಮಕ್ಕಳ ಉಪವಾಸ’ ಎಂಬ ಜಾಹೀರಾತುಗಳಿಗೂ ಕೋಟ್ಯಂತರ ವೆಚ್ಚ ಮಾಡುವುದು. ಜನರನ್ನು ದುಷ್ಚಟಗಳಿಂದ ಹೊರಗೆ ತರುವುದಕ್ಕಾಗಿಯೇ ಸರಕಾರ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಮಗದೊಂದೆಡೆ ಮದ್ಯ ಮಾರಾಟಕ್ಕೆ ಉತ್ತೇಜನ ಕೊಡುವುದು ಮೂರ್ಖತನದ ಪರಮಾವಧಿಯಾಗಿದೆ.

ಮದ್ಯ ಮಾರಾಟ ಸರಕಾರಕ್ಕೆ ಲಾಭವನ್ನು ತರುವ ನಟನೆಯನ್ನಷ್ಟೇ ಮಾಡುತ್ತದೆ. ಆದರೆ ಆಳದಲ್ಲಿ ಅದು ಕೊಟ್ಟ ಲಾಭದ ದುಪ್ಪಟ್ಟು ನಷ್ಟವನ್ನು ಮಾಡುತ್ತದೆ. ಇದರ ಅರಿವು ಸರಕಾರಕ್ಕೆ ಇಲ್ಲದೇ ಏನೂ ಅಲ್ಲ. ಇಂದು ಮದ್ಯ ಮಾರಾಟ ಹೊರತು ಪಡಿಸಿ ದೇಶವನ್ನು ಆರ್ಥಿಕವಾಗಿ ಸುಸ್ಥಿತಿಗೆ ತರುವ ಎಲ್ಲ ಉದ್ಯಮಗಳೂ ನಷ್ಟದೆಡೆಗೆ ಸಾಗುತ್ತಿದೆ. ಕೃಷಿ ಉದ್ಯಮವೂ ಸೇರಿದಂತೆ ನಾಡಿನ ವಿವಿಧ ಉದ್ದಿಮೆಗಳಿಗೆ ಪ್ರೋತ್ಸಾಹ ನೀಡಿ, ಅವುಗಳನ್ನು ಲಾಭದಾಯಕವನ್ನಾಗಿಸುವುದು ಆ ಮೂಲಕ ನಾಡನ್ನು ಅಭಿವೃದ್ಧಿಯೆಡೆಗೆ ಮುನ್ನಡೆಸುವುದು ಸರಕಾರದ ಗುರಿಯಾಗಿರಬೇಕು. ಮಧ್ಯಮವರ್ಗ, ತಳಸ್ತರದ ಜನರಿಗೆ ಮದ್ಯವನ್ನು ಕೊಟ್ಟು ಅವರು ದುಡಿದ ದುಡಿಮೆಯ ಹಣವನ್ನು ತನ್ನದಾಗಿಸಿಕೊಳ್ಳುವುದನ್ನು ರಾಜಸ್ವ ಸಂಗ್ರಹ ಎನ್ನುವುದಿಲ್ಲ, ಅದನ್ನು ದರೋಡೆ ಎಂದು ಕರೆಯುತ್ತಾರೆ. ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿದ್ದ ಹಾಗೆಯೇ ಅಪರಾಧ ಕೃತ್ಯಗಳೂ ಹೆಚ್ಚುತ್ತಿವೆ. ಹೆಚ್ಚಿನ ಅಪರಾಧ ಪ್ರಕರಣಗಳಲ್ಲಿ ಮದ್ಯ ಸೇವನೆಯ ಪಾತ್ರ ಬಹುದೊಡ್ಡದಿದೆ. ಬೆಂಗಳೂರಂತೂ ಅಪರಾಧಗಳ ನಗರ ಎಂಬ ಕುಖ್ಯಾತಿಯನ್ನು ತನ್ನದಾಗಿಸಿಕೊಳ್ಳುತ್ತಿದೆ. ತಡರಾತ್ರಿಯವರೆಗೆ ಮದ್ಯ ಮಾರಾಟ ಮಾಡಲು ಹೊರಟರೆ ಅಪರಾಧ ಪ್ರಕರಣ ದುಪ್ಪಟ್ಟಾಗಲಿದೆ. ಇದು ರಾಜ್ಯವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯುವ ವಿಧಾನ ಅಲ್ಲವೇ ಅಲ್ಲ. ಬಡವರ, ಮಹಿಳೆಯರ ಕಣ್ಣೀರಿನ ದುಡ್ಡನ್ನು ಅಭಿವೃದ್ಧಿಗೆ ಬಳಸಿದರೆ ಅದು ನಾಡಿನ ಪಾಲಿಗೆ ಶಾಪವಾಗಬಹುದು. ಅಂತಹ ಹಣದಿಂದ ಕಟ್ಟುವ ಸೇತುವೆ, ನಿರ್ಮಿಸುವ ಹೆದ್ದಾರಿಗಳು ನಮ್ಮ ನಾಡನ್ನು ಪತನದೆಡೆಗೆ ಕೊಂಡೊಯ್ಯಬಹುದೇ ಹೊರತು, ಒಳಿತಿನೆಡೆಗೆ ಅಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News