ಒಣದ್ರಾಕ್ಷಿ ಉತ್ಪನ್ನಗಳಿಗೆ ‘ಇ-ಟ್ರೇಡಿಂಗ್’ ವ್ಯವಸ್ಥೆ ಜಾರಿ: ಶಾಸಕ ಯತ್ನಾಳ್

Update: 2020-01-02 18:02 GMT

ವಿಜಯಪುರ, ಜ.2: ವಿಜಯಪುರ ಜಿಲ್ಲೆಯಲ್ಲಿ ಬೆಳೆಯುತ್ತಿರುವ ಒಣದ್ರಾಕ್ಷಿ ಉತ್ಪನ್ನಗಳ ಶೇ.80 ಕ್ಕೂ ಹೆಚ್ಚು ಇಳುವರಿಯನ್ನು ನೆರೆಯ ರಾಜ್ಯಗಳ ಮಾರುಕಟ್ಟೆಗೆ ರೈತರು ಕೊಂಡೊಯ್ಯುತ್ತಿದ್ದಾರೆ. ಒಣದ್ರಾಕ್ಷಿ ಉತ್ಪನ್ನಕ್ಕೆ ಉತ್ತಮ ಬೆಲೆ ದೊರಕಿಸಿ ಕೊಡುವ ಸದುದ್ದೇಶದಿಂದ ಸದ್ಯ ಜಾರಿಯಲ್ಲಿರುವ ಬಹಿರಂಗ ಹರಾಜು ಪ್ರಕ್ರಿಯೆಯನ್ನು ರದ್ದುಪಡಿಸಿ ಇ-ಟ್ರೇಡಿಂಗ್ ವಹಿವಾಟು ಪ್ರಾರಂಭಿಸಲು ಯೋಜನೆ ಹಾಕಲಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಗುರುವಾರ ಇ-ಟ್ರೇಡಿಂಗ್ ನಡೆಸಲು ಉದ್ದೇಶಿಸಲಾಗಿರುವ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯಲ್ಲಿ ಸುಮಾರು 8600 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿಯನ್ನು ಬೆಳೆಯುತ್ತಿದ್ದು, 1 ಲಕ್ಷ ಕ್ವಿಂಟಾಲ್‌ನಷ್ಟು ಒಣದ್ರಾಕ್ಷಿ ಉತ್ಪಾದನೆಯಾಗುತ್ತಿದೆ ಎಂದರು.

ಮುಖ್ಯ ಮಾರುಕಟ್ಟೆ ಪ್ರಾಂಗಣದಿಂದ ಸುಮಾರು 500 ಮೀ ಅಂತರದಲ್ಲಿರುವ ನಗರದ ಕ್ರೀಡಾಂಗಣ ಪಕ್ಕದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಒಡೆತನದಲ್ಲಿರುವ 1.1 ಎಕರೆ ವಿಸ್ತೀರ್ಣದ ಜಾಗದಲ್ಲಿ ತೋಟಗಾರಿಕೆ ಉತ್ಪನ್ನಗಳ ವಹಿವಾಟಿಗಾಗಿ ತೋಟಗಾರಿಕಾ ಮಿಷನ್ ಯೋಜನೆಯ ಧನ ಸಹಾಯದೊಂದಿಗೆ 2.91 ಕೋಟಿ ರೂ.ಗಳ ವೆಚ್ಚದಲ್ಲಿ ಒಣದ್ರಾಕ್ಷಿ ಉತ್ಪನ್ನಕ್ಕೆ ಆನ್‌ಲೈನ್ ‘ಇ-ಟ್ರೇಡಿಂಗ್’ ಕಲ್ಪಿಸಲು ಕಟ್ಟಡವನ್ನು ನಿರ್ಮಿಸಲಾಗುತ್ತಿದ್ದು, ಮುಂಬರುವ 25 ದಿನಗಳ ಒಳಗಾಗಿ ಈ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಅವರು ಹೇಳಿದರು.

ವಿಜಯಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ 16 ಜನ ಒಣದ್ರಾಕ್ಷಿ ವಹಿವಾಟಿಗೆ ಲೈಸನ್ಸ್ ಹೊಂದಿದ್ದಾರೆ. ವಿಜಯಪುರ ಜಿಲ್ಲೆಯು ಮಹಾರಾಷ್ಟ್ರ ರಾಜ್ಯಕ್ಕೆ ಗಡಿಭಾಗವಾಗಿದ್ದು, ನೆರೆಯ ಜಿಲ್ಲೆಯಲ್ಲಿ ಸಾಂಗಲಿ ಮತ್ತು ತಾಸಗಾಂವ ಮಾರುಕಟ್ಟೆ ಸಮಿತಿಗಳು ಒಣದ್ರಾಕ್ಷಿ ವಹಿವಾಟಿಗೆ ಪ್ರಸಿದ್ಧವಾಗಿವೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.

ಹಾಗಾಗಿ ಜಿಲ್ಲೆಯಲ್ಲಿ ಬೆಳೆಯುತ್ತಿರುವ ಒಣದ್ರಾಕ್ಷಿ ಉತ್ಪನ್ನಗಳ ಶೇ.80ಕ್ಕೂ ಹೆಚ್ಚು ಇಳುವರಿಯನ್ನು ನೆರೆಯ ರಾಜ್ಯಗಳ ಮಾರುಕಟ್ಟೆಗೆ ರೈತರು ಕೊಂಡೊಯ್ಯುತ್ತಿದ್ದಾರೆ. ಒಣದ್ರಾಕ್ಷಿ ಉತ್ಪನ್ನದ ಖರೀದಿಗಾಗಿ ರಾಜ್ಯದ ಹಾಗೂ ಅಕ್ಕ-ಪಕ್ಕ ರಾಜ್ಯದ ಖರೀದಿದಾರರನ್ನು ಈ ಸಮಿತಿಯಲ್ಲಿಯೂ ಲೈಸನ್ಸ್ ಪಡೆದು ವಹಿವಾಟು ನಡೆಸಲು ಸೂಚಿಸುವಂತೆ ತೀರ್ಮಾನಿಸಲಾಗುತ್ತಿದೆ ಎಂದು ಅವರು ಹೇಳಿದರು.

ಸಭೆಯಲ್ಲಿ ಎಪಿಎಂಸಿ ಅಧ್ಯಕ್ಷ ಸುರೇಶ್ ಬಿರಾದಾರ, ಉಪಾಧ್ಯಕ್ಷ ಸುರೇಶ್ ತಳವಾರ, ಎಪಿಎಂಸಿ ಜಂಟಿ ನಿರ್ದೇಶಕ ಆರ್.ಎಂ.ಕುಮಾರಸ್ವಾಮಿ, ಎಪಿಎಂಸಿ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News