ಪೌರತ್ವ ಕಾಯ್ದೆ ಬೆಂಬಲಿಸಿ ಕಾಂಗ್ರೆಸ್‌ಗೆ ನಾಲ್ವರು ಮುಖಂಡರ ರಾಜೀನಾಮೆ

Update: 2020-01-02 18:49 GMT

ಪಣಜಿ, ಜ.2: ಪೌರತ್ವ ಕಾಯ್ದೆ ಮತ್ತು ಎನ್‌ಆರ್‌ಸಿ ವಿಷಯದಲ್ಲಿ ಕಾಂಗ್ರೆಸ್ ಪಕ್ಷದ ನಿಲುವನ್ನು ವಿರೋಧಿಸಿ ಗೋವಾ ಕಾಂಗ್ರೆಸ್‌ನ ನಾಲ್ವರು ಮುಖಂಡರು ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ವರದಿಯಾಗಿದೆ.

ಕಾಂಗ್ರೆಸ್‌ನ ಪಣಜಿ ಬ್ಲಾಕ್ ಸಮಿತಿ ಅಧ್ಯಕ್ಷ ಪ್ರಸಾದ್ ಅಮೋಣ್‌ಕರ್, ಉತ್ತರ ಗೋವಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಾವೆದ್ ಶೇಖ್, ಬ್ಲಾಕ್ ಸಮಿತಿ ಕಾರ್ಯದರ್ಶಿ ದಿನೇಶ್ ಕುಬಲ್, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶಿವರಾಜ್ ತರ್ಕಾರ್ ರಾಜೀನಾಮೆ ಸಲ್ಲಿಸಿದ್ದು ತಾವು ಪೌರತ್ವ ಕಾಯ್ದೆ ಮತ್ತು ಎನ್‌ಆರ್‌ಸಿಯನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ.

ಪೌರತ್ವ ಕಾಯ್ದೆ ಮತ್ತು ಎನ್‌ಆರ್‌ಸಿ ವಿಷಯದಲ್ಲಿ ಕಾಂಗ್ರೆಸ್‌ನ ನಿಲುವನ್ನು ನಾವು ವಿರೋಧಿಸುತ್ತೇವೆ. ಪೌರತ್ವ ಕಾಯ್ದೆ ವಿಷಯದಲ್ಲಿ ಕಾಂಗ್ರೆಸ್ ಜನಸಾಮಾನ್ಯರನ್ನು , ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತರನ್ನು ದಾರಿ ತಪ್ಪಿಸುತ್ತಿದೆ. ಜವಾಬ್ದಾರಿಯುತ ವಿಪಕ್ಷವಾಗಿ ನಾವು ವಿಮರ್ಶಾತ್ಮಕವಾಗಿರಬೇಕು. ಆದರೆ ಎಲ್ಲವನ್ನೂ ವಿರೋಧಿಸಬೇಕು ಎಂಬ ಧೋರಣೆ ಸರಿಯಲ್ಲ. ಪೌರತ್ವ ಕಾಯ್ದೆಯನ್ನು ಸ್ವಾಗತಿಸಬೇಕು ಎಂದು ಸುದ್ದಿಗಾರರ ಜೊತೆ ಮಾತನಾಡಿದ ಅಮೋಣ್‌ಕರ್ ಹೇಳಿದ್ದಾರೆ.

ಪೌರತ್ವ ಕಾಯ್ದೆ ಮತ್ತು ಎನ್‌ಆರ್‌ಸಿ ವಿರೋಧಿಸಿ ಕಳೆದ ವಾರ ಕಾಂಗ್ರೆಸ್ ನಡೆಸಿದ್ದ ಪ್ರತಿಭಟನೆಯಲ್ಲಿ ನಾವೂ ಪಾಲ್ಗೊಂಡಿದ್ದೆವು. ಆದರೆ ಅಂದಿನ ಭಾಷಣದಲ್ಲಿ ಪಕ್ಷದ ಮುಖಂಡರು ಅಲ್ಪಸಂಖ್ಯಾತರ ಮನಸ್ಸಿನಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅರಿವಾಯಿತು. ಗೋವಾದ ಜನತೆ ಶಾಂತಿಪ್ರಿಯರು. ಆದರೆ ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಪ್ರಚೋದಿಸಲು ಯತ್ನಿಸುತ್ತಿದೆ ಎಂದವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News