ಪರಮೇಶ್ವರ್ ನಿವಾಸದಲ್ಲಿ 'ಕೈ' ನಾಯಕರ ಮಹತ್ವದ ಸಭೆ: ಒಗ್ಗಟ್ಟಿನ ಮಂತ್ರ ಜಪಿಸಿದ ಮುಖಂಡರು

Update: 2020-01-04 16:03 GMT

ಬೆಂಗಳೂರು, ಜ. 4: ಕೆಪಿಸಿಸಿ ಅಧ್ಯಕ್ಷ ಸ್ಥಾನ, ಶಾಸಕಾಂಗ ಪಕ್ಷದ ನಾಯಕನ ಆಯ್ಕೆ, ಬಣ ರಾಜಕೀಯ ಬದಿಗಿಟ್ಟು ಪಕ್ಷ ಸಂಘಟನೆ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕಾಂಗ್ರೆಸ್ ಮುಖಂಡರೆಲ್ಲ ಒಗ್ಗೂಡಿ ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ನಿವಾಸದಲ್ಲಿ ಮಹತ್ವದ ಸಭೆ ನಡೆಸಿದ್ದಾರೆ.

ಶನಿವಾರ ಸಂಜೆ ವಿಪಕ್ಷ ನಾಯಕ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಹಿರಿಯ ಮುಖಂಡರಾದ ಕೆ.ಎಚ್.ಮುನಿಯಪ್ಪ, ವೀರಪ್ಪ ಮೊಯ್ಲಿ, ಹರಿಪ್ರಸಾದ್, ಡಿ.ಕೆ.ಶಿವಕುಮಾರ್, ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ರಾಮಲಿಂಗಾರೆಡ್ಡಿ ಸೇರಿದಂತೆ 20ಕ್ಕೂ ಹೆಚ್ಚು ಪರಮೇಶ್ವರ್ ನಿವಾಸದ ಸಭೆಯಲ್ಲಿ ಪಾಲ್ಗೊಂಡಿದ್ದರು.

ಒಗ್ಗಟ್ಟಿನ ಮಂತ್ರ: ಪಕ್ಷದಲ್ಲಿ ಮೂಲ, ವಲಸಿಗ ಎಂಬ ಭೇದ ಹಾಗೂ ಸ್ವಪ್ರತಿಷ್ಠೆ ಹಿನ್ನೆಲೆಯಲ್ಲಿ ಮುಖಂಡರು ಪರಸ್ಪರ ಭಿನ್ನ ಹಾದಿ ಹಿಡಿದಿರುವುದರಿಂದ ಸತತ ಸೋಲು ಅನುಭವಿಸುತ್ತಿದ್ದು, ಸಮರ್ಥ ವಿಪಕ್ಷವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಮತ್ತೆ ಪುಟಿದೇಳಲು ಸಿದ್ಧತೆ ನಡೆಸಬೇಕಿದೆ. ಇತ್ತೀಚೆಗೆ ನಡೆದ 15 ಕ್ಷೇತ್ರಗಳ ಉಪಚುನಾವಣೆ ವೇಳೆ ಮೂಲ ಹಾಗೂ ವಲಸಿಗ ನಾಯಕರ ಭಿನ್ನಾಪ್ರಾಯದಿಂದಲೇ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ. ಇದೇ ರೀತಿ ಕಚ್ಚಾಟದಲ್ಲಿ ತೊಡಗಿದ್ದರೆ ಇದರ ಲಾಭ ಬಿಜೆಪಿಗೆ ಆಗಲಿದೆ. ಹೀಗಾಗಿ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕೆಂದು ಸಭೆ ಸೇರಿದ್ದಾರೆ.

ಕೆಪಿಸಿಸಿ ಅಧ್ಯಕ್ಷ, ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಗೊಂದಲದಲ್ಲಿರುವ ಹೈಕಮಾಂಡ್ ‘ಮೊದಲು ನಿಮ್ಮಲ್ಲಿನ ಬಣ ರಾಜಕೀಯ ಬಗೆಹರಿಸಿಕೊಂಡು ಒಮ್ಮತ ನಾಯಕನನ್ನು ಆಯ್ಕೆ ಮಾಡಿಕೊಂಡು ದಿಲ್ಲಿಗೆ ಬನ್ನಿ’ ಎಂದು ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಸಂಜೆ 4:30ರಿಂದ ರಾತ್ರಿ 8ಗಂಟೆಯ ವರೆಗೆ ಸುದೀರ್ಘ ಸಭೆ ನಡೆಸಿದ ಕಾಂಗ್ರೆಸ್ ಮುಖಂಡರು ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಬಿಜೆಪಿ ಸರಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಪಕ್ಷ ಸಂಘಟನೆ ಸಂಬಂಧ ಸಮಾಲೋಚನೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.

‘ರಾಜ್ಯದಲ್ಲಿ ಯಾವ ಕ್ಷಣದಲ್ಲಿ ಬೇಕಾದರೂ ಚುನಾವಣೆ ಬರಬಹುದು. ಹೀಗಾಗಿ ಪಕ್ಷ ಸಂಘಟನೆ ಬಗ್ಗೆ ಹಿರಿಯ ಮುಖಂಡರೆಲ್ಲರೂ ಸೇರಿ ಸುದೀರ್ಘ ಚರ್ಚೆ ಮಾಡಿದ್ದೇವೆ. ಪಕ್ಷದಲ್ಲಿನ ಗೊಂದಲಗಳನ್ನು ಶೀಘ್ರದಲ್ಲೆ ಬಗೆಹರಿಸಿಕೊಳ್ಳಲಿದ್ದೇವೆ. ಚರ್ಚಿಸಿರುವ ವಿಚಾರಗಳ ಕುರಿತು ವರಿಷ್ಠರ ಗಮನಕ್ಕೆ ತರಲಿದ್ದೇವೆ’

-ಡಾ.ಜಿ.ಪರಮೇಶ್ವರ್, ಮಾಜಿ ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News