ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವಂತಹ ಜನಪ್ರತಿನಿಧಿಗಳ ಅಗತ್ಯವಿದೆ: ನ್ಯಾ.ವೆಂಕಟಾಚಲಯ್ಯ

Update: 2020-01-04 16:19 GMT

ಬೆಂಗಳೂರು, ಜ.4: ಪ್ರಜಾಪ್ರಭುತ್ವದ ಆಧಾರಸ್ತಂಬಗಳನ್ನು ಗಟ್ಟಿಗೊಳಿಸುವಂತಹ ಜನಪ್ರತಿನಿಧಿಗಳ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾ.ಎಂ.ಎನ್.ವೆಂಕಟಾಚಲಯ್ಯ ಅಭಿಪ್ರಾಯಿಸಿದ್ದಾರೆ.

ಶನಿವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರ ಸಾಧನೆ-ಸಿದ್ದಿಗಳ ಕುರಿತು ಪರಿಚಯಿಸುವಂತಹ ಕೃಷ್ಣಪಥ ಸೇರಿದಂತೆ ಆರು ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ರಾಜ್ಯ ಹಾಗೂ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವಲ್ಲಿ ಮುಖ್ಯಮಂತ್ರಿಯಾಗಿ, ರಾಜ್ಯಪಾಲರಾಗಿ, ವಿದೇಶಾಂಗ ಸಚಿವರಾಗಿ ಎಸ್.ಎಂ.ಕೃಷ್ಣರವರ ಪಾತ್ರ ಶ್ಲಾಘನೀಯವೆಂದು ತಿಳಿಸಿದರು.

ದೇಶಕ್ಕೆ ಸ್ವಾತಂತ್ರಬಂದ ಪ್ರಾರಂಭದ ಕಾಲಘಟ್ಟದಲ್ಲಿ ಜನಪ್ರತಿನಿಧಿಗಳು ವೌಲ್ಯಾಧಾರಿತವಾಗಿ ಆಡಳಿತ ನಡೆಸಿರುವುದನ್ನು ನಾವು ಕಂಡಿದ್ದೇವೆ. ದೇಶದ ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ತಮ್ಮ ಅಧಿಕಾರವನ್ನು ಸ್ವಾರ್ಥಕ್ಕೆ ಬಳಸಿಕೊಳ್ಳದೆ ರಾಜ್ಯದ ಏಳ್ಗೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿರುವುದನ್ನು ನಾವು ನೋಡಿದ್ದೇವೆ. ಇಂತಹ ರಾಜಕಾರಣಿಗಳಿಂದ ಇವತ್ತಿನ ಯುವತಲೆಮಾರಿನ ಜನಪ್ರತಿನಿಧಿಗಳು ರಾಜಕೀಯ ಪಾಠವನ್ನು ಕಲಿಯಬೇಕಿದೆ ಎಂದು ಅವರು ಆಶಿಸಿದರು.

ಅಮೆರಿಕಾದಲ್ಲಿ ವಿದ್ಯಾಭ್ಯಾಸ ಮುಗಿಸಿದ ಎಸ್.ಎಂ.ಕೃಷ್ಣರವರ ಬಗ್ಗೆ ಅವರ ಸಮಕಾಲೀನರಲ್ಲಿ ವಿಭಿನ್ನ ಅನಿಸಿಕೆಗಳು ಮೂಡಿದ್ದವು. ಕೆಲವರು ಕೃಷ್ಣರವರು ವಕೀಲ ವೃತ್ತಿ ಆರಂಭಿಸಿ ನಂತರ ನ್ಯಾಯಾಮೂರ್ತಿಯಾಗಬಹುದೆಂದು ಭಾವಿಸಿದ್ದರು. ಮತ್ತೊಂದಷ್ಟು ಮಂದಿ ಎಸ್.ಎಂ.ಕೃಷ್ಣ ರಾಜಕೀಯದಲ್ಲಿ ಸಕ್ರಿಯರಾಗಿ ದೇಶದ ಪ್ರಧಾನಿಯಾಗಬಹುದೆಂದು ಆಶಾಭಾವನೆ ಹೊಂದಿದ್ದರು ಎಂದು ಅವರು ನೆನಪು ಮಾಡಿಕೊಂಡರು.

ಹಿರಿಯ ಕವಿ ಸಿದ್ದಲಿಂಗಯ್ಯ ಮಾತನಾಡಿ, ಎಸ್.ಎಂ.ಕೃಷ್ಣ ರಾಜಕೀಯ ಕ್ಷೇತ್ರದಲ್ಲಿ ನಡೆದ ಹಾದಿಯು ಎಲ್ಲರೂ ಅನುಕರಣೆ ಮಾಡುವಂತಹದ್ದಾಗಿದೆ. ವಿದ್ಯಾರ್ಥಿಗಳಿಗೆ ಮಾಧ್ಯಾಹ್ನದ ಬಿಸಿಯೂಟ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್, ಮೆಡಿಕಲ್ ಪ್ರವೇಶಾತಿಗೆ ಶೇ.5ರಷ್ಟು ಮೀಸಲಾತಿ ಕಲ್ಪಿಸಿದ್ದು, ಮಹಿಳಾ ವಿಶ್ವವಿದ್ಯಾಲಯಗಳ ಸ್ಥಾಪನೆ ಹೀಗೆ ಅವರ ಜನಪರವಾದ ಯೋಜನೆಗಳು ಎಂದೆಂದಿಗೂ ಜನರ ಮನಸಿನಲ್ಲಿ ಉಳಿಯುವಂತಹದ್ದಾಗಿದೆ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಮನು ಬಳಿಗಾರ್ ಮಾತನಾಡಿ, ಇಂದು ಬಿಡುಗಡೆಯಾಗುತ್ತಿರುವ ಎಸ್.ಎಂ.ಕೃಷ್ಣರವರ ಕುರಿತ ಕೃಷ್ಣಪಥ, ಸ್ಮತಿ ವಾಹಿನಿ, ಚಿತ್ರದೀಪ ಸಾಲು ಸೇರಿದಂತೆ ಆರು ಪುಸ್ತಕಗಳು ಯುವತಲೆಮಾರಿನ ರಾಜಕಾರಣಿಗಳು ಓದಲೇಬೇಕಾದ ಕೃತಿಗಳಾಗಿವೆ. ಹಾಗೂ ರಾಜ್ಯದ ರಾಜಕಾರಣದ ಕುರಿತು ಸಂಶೋಧನೆ ಮಾಡಲು ಈ ಕೃತಿಗಳು ಯೋಗ್ಯವಾಗಿವೆ ಎಂದು ತಿಳಿಸಿದರು.

ರಾಮಕೃಷ್ಣ ಆಶ್ರಮದ ಮುಕ್ತಿದಾನಂದ ಮಹಾರಾಜ್ ಮಾತನಾಡಿ, ಮೈಸೂರಿನ ರಾಮಕೃಷ್ಣ ಮಠದ ಶಾಖೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಪ್ರವಚನ ಕೇಳಿದ್ದಾರೆ. ಮಾನವೀಯ ವೌಲ್ಯಗಳ ದಾರಿಯಲ್ಲಿ ನಡೆದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಅದರಲ್ಲಿ ರಾಷ್ಟ್ರಕವಿ ಕುವೆಂಪು, ದೇ.ಜವರೇಗೌಡ ಹಾಗೂ ಎಸ್.ಎಂ.ಕೃಷ್ಣರವರ ಸಾಧನೆ ಗಮನಾರ್ಹವಾದುದ್ದೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಕರ್ನಾಟಕ ಚಿತ್ರಕಲಾ ಪರಿಷತ್‌ನ ಅಧ್ಯಕ್ಷ ಬಿ.ಎಲ್.ಶಂಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನನ್ನ ತಂದೆ ಮಲ್ಲಯ್ಯರಿಂದ ಕಲಿತ ಮಾನವೀಯ ಮೌಲ್ಯಗಳು, ತತ್ವಾದರ್ಶಗಳು ನನ್ನ ರಾಜಕೀಯ ಜೀವನವನ್ನು ಮುನ್ನಡೆಸಿವೆ. ಆದರೆ, ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆ ಹಣ ಬಲದ ಮೇಲೆ ನಿಂತಿರುವುದು ದುರದೃಷ್ಟಕರ. ಇದು ಹೀಗೆಯೇ ಮುಂದುವರೆದರೆ ದೇಶವು ದೊಡ್ಡಮಟ್ಟದಲ್ಲಿ ಅಪಾಯಕ್ಕೆ ಸಿಲುಕಲಿದೆ.

-ಎಸ್.ಎಂ.ಕೃಷ್ಣ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News