ಖಾಸಗೀಕರಣಕ್ಕೆ ವಿರೋಧ: ಬೆಂಗಳೂರಿನಲ್ಲಿ ಕೇಂದ್ರ ಸರಕಾರದ ವಿರುದ್ಧ ಕಾರ್ಮಿಕರ ಬೃಹತ್ ಪ್ರತಿಭಟನೆ

Update: 2020-01-04 16:55 GMT

ಬೆಂಗಳೂರು, ಜ.4: ದೇಶದ ಸರಕಾರಿ ಸ್ವಾಮ್ಯದ ಕಂಪೆನಿಗಳನ್ನು ಖಾಸಗೀ ಕರಣಗೊಳಿಸಲು ಮುಂದಾಗಿರುವ ಕೇಂದ್ರ ಸರಕಾರದ ಕ್ರಮ ಖಂಡಿಸಿ ಕಾರ್ಮಿಕರು ಬೃಹತ್ ಪ್ರತಿಭಟನೆ ನಡೆಸಿದರು.

ಶನಿವಾರ ಇಲ್ಲಿನ ಪುರಭವನ ಮುಂಭಾಗ ಜಮಾಯಿಸಿದ ಬಿಇಎಂಎಲ್, ಎಚ್‌ಎ ಎಲ್, ಬಿಎಚ್‌ಇ ಎಲ್, ಬಿಇಎಲ್, ಐಟಿಐ, ವಿಐಎಸ್‌ಎಲ್, ವಿಐಎಲ್ ತರೀಕೆರೆ ಸೇರಿದಂತೆ ಹತ್ತಾರು ಕಂಪೆನಿಗಳ ನೌಕರರು ಪ್ರತಿಭಟನೆ ನಡೆಸಿ, ಕೇಂದ್ರ ಸರಕಾರ ಈ ಕೂಡಲೇ ಖಾಸಗೀಕರಣ ಪ್ರಕ್ರಿಯೆ ಕೈಬಿಡಬೇಕೆಂದು ಒತ್ತಾಯಿಸಿದರು.

ದೇಶದ ಲಾಭದಾಯಕ ಸರಕಾರಿ ಸ್ವಾಮ್ಯದ ಕಂಪೆನಿಗಳಲ್ಲಿ ಒಂದಾದ ಬಿಇಎಂಎಲ್ ಖಾಸಗೀಕರಣಗೊಳಿಸುತ್ತಿರುವುದು ಖಂಡನೀಯ. ಇದರ ವಿರುದ್ಧ ಹಲವು ದಿನಗಳಿಂದ ಸಾಂಕೇತಿಕ ಪ್ರತಿಭಟನೆ ಆರಂಭಿಸಲಾಗಿದೆ. ಉದ್ಯೋಗಿಗಳು ಸರದಿಯಲ್ಲಿ ಎಂದಿನಂತೆ ಕೆಲಸ ಮಾಡುತ್ತಿದ್ದಾರೆ. ಕೆಲಸ ಮುಗಿದ ಬಳಿಕವೇ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಿಇಎಂಇಎಲ್ ಕಾರ್ಮಿಕ ಸಂಘದ ಅಧ್ಯಕ್ಷ ದೊಮ್ಮಲೂರು ಶ್ರೀನಿವಾಸ ರೆಡ್ಡಿ, ಬಿಇಎಂಎಲ್ ಸೇರಿದಂತೆ ಲಾಭದಲ್ಲಿರುವ ಸರಕಾರಿ ಸ್ವಾಮ್ಯದಲ್ಲಿರುವ ಪ್ರಮುಖ ಕಂಪೆನಿಗಳನ್ನು ಕೇಂದ್ರ ಸರಕಾರ ಖಾಸಗೀಕರಣಗೊಳಿಸಲು ಹೊರಟಿದೆ. ಇದರಿಂದ ಸುಮಾರು 8500 ಖಾಯಂ ಉದ್ಯೋಗಿಗಳು ಹಾಗೂ ಸುಮಾರು 4500 ಗುತ್ತಿಗೆ ಕಾರ್ಮಿಕರಿಗೆ ಭವಿಷ್ಯದಲ್ಲಿ ಕೆಲಸದ ಅಭದ್ರತೆ ತಲೆದೋರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕೇಂದ್ರದ ಭೂಚಲನ ಯಂತ್ರೋಪಕರಣಗಳ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ನಾರಾಯಣ, ಮೈಸೂರು ಬಿಇಎಂಎಲ್ ಸಂಘದ ಅಧ್ಯಕ್ಷ ಮುನಿರೆಡ್ಡಿ, ರಾಜಶೇಖರ್ ಮೂರ್ತಿ, ಕೆಜಿಎಫ್ ಆಂಜನೇಯ ರೆಡ್ಡಿ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News