ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣ: 5 ಜನರು ಮೃತ್ಯು

Update: 2020-01-05 17:41 GMT

ಬೆಂಗಳೂರು, ಜ.5: ನಗರ ವ್ಯಾಪ್ತಿಯಲ್ಲಿ ಸಂಭವಿಸಿದ ರಸ್ತೆ ಅಪಘಾತ ಪ್ರಕರಣಗಳಲ್ಲಿ ವಿದ್ಯಾರ್ಥಿಯೊರ್ವ ಸೇರಿದಂತೆ ಒಟ್ಟು ಐದು ಜನರು ಮೃತಪಟ್ಟಿರುವ ಘಟನೆ ನಡೆದಿದೆ.

ಲಾರಿಯೊಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಇಂಜಿನಿಯರೊಬ್ಬರು ಮೃತಪಟ್ಟು, ಅವರ ಪತ್ನಿ ಗಾಯಗೊಂಡಿರುವ ಘಟನೆ ವಿಮಾನ ನಿಲ್ದಾಣ ರಸ್ತೆಯ ಬ್ಯಾಟರಾಯನಪುರ ರವಿವಾರ ಬಳಿ ನಡೆದಿದೆ. ದುಬೈನಲ್ಲಿ ಇಂಜಿನಿಯರ್ ಆಗಿದ್ದ ಕಕ್ಸ್‌ಟೌನ್ ನಿವಾಸಿ ಗೋಪಿಶೆಟ್ಟಿ ವಾಸುದೇವರಾವ್ (58) ಮೃತಪಟ್ಟಿದ್ದು, ಇವರ ಪತ್ನಿ ಚಾರುಮತಿ (48) ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದುಬೈಗೆ ಹೋಗುತ್ತಿದ್ದ ಪತಿಯನ್ನು ವಿಮಾನ ನಿಲ್ದಾಣಕ್ಕೆ ರವಿವಾರ ಮುಂಜಾನೆ ಕರೆದುಕೊಂಡು ಕಾರನ್ನು ಚಲಾಯಿಸಿಕೊಂಡು ಅತಿ ವೇಗವಾಗಿ ಚಾರುಮತಿ ಹೋಗುತ್ತಿದ್ದರು. ಮಾರ್ಗಮಧ್ಯೆ ಬ್ಯಾಟರಾಯನಪುರದ ಮೇಲ್ಸೇತುವೆ ರಸ್ತೆಯಲ್ಲಿ ಮುಂದೆ ಹೋಗುತ್ತಿದ್ದ ಲಾರಿಗೆ ಢಿಕ್ಕಿ ಹೊಡೆದಿದ್ದಾರೆ. ಇದರ ಪರಿಣಾಮ ಗೋಪಿಶೆಟ್ಟಿ ವಾಸುದೇವರಾವ್ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಹೆಬ್ಬಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಚಾಲಕ ಮೃತ್ಯು: ಇಲ್ಲಿನ ಚಿಕ್ಕಜಾಲದ ರಝಾಕ್ ಪಾಳ್ಯ ರಸ್ತೆಯಲ್ಲಿ ವೇಗವಾಗಿ ಹೋಗುತ್ತಿದ್ದ ಬೈಕ್‌ಗೆ ಮುಂದಿನ ವಾಹನ ಢಿಕ್ಕಿ ಹೊಡೆದ ಪರಿಣಾಮ ಖಾಸಗಿ ಬಸ್ ಚಾಲಕನೊರ್ವ ಮೃತಪಟ್ಟಿದ್ದಾರೆ.

ದೇವನಹಳ್ಳಿ ಪ್ರಭಾಕರ್(31) ಎಂಬುವರು ಮೃತಪಟ್ಟಿದ್ದಾರೆ. ಡಿಸೆಂಬರ್ 30ರಂದು ಈ ಘಟನೆ ನಡೆದಿದ್ದು, ಅವರನ್ನು ಯಲಹಂಕದ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಚಿಕ್ಕಜಾಲ ಸಂಚಾರ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.

ಇಬ್ಬರು ಸಾವು: ಹಿಂದಿನಿಂದ ವೇಗವಾಗಿ ಬಂದ ಅಪರಿಚಿತ ವಾಹನ ಢಿಕ್ಕಿ ಹೊಡೆದು ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಇಬ್ಬರು ಯುವಕರು ಮೃತಪಟ್ಟಿರುವ ದುರ್ಘಟನೆ ಕುಮಾರಸ್ವಾಮಿ ಲೇಔಟ್‌ನ ಕನಕಪುರ ರಸ್ತೆಯಲ್ಲಿ ನಡೆದಿದೆ.
ಕನಕಪುರ ತಾಲೂಕಿನ ಶಿವನೇಗೌಡನ ದೊಡ್ಡಿಯ ಪುಟ್ಟ (25) ಹಾಗೂ ಕುಮಾರ್ (20) ಮೃತರು ಎಂದು ತಿಳಿದುಬಂದಿದೆ. ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ.

ವಿದ್ಯಾರ್ಥಿ: ಹೊಸೂರು ರಸ್ತೆಯ ಎಲಿವೇಟೆಡ್ ಮೇಲ್ಸೇತುವೆ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ಎಂಬಿಎ ವಿದ್ಯಾರ್ಥಿಯೊರ್ವ ನಿಯಂತ್ರಣ ತಪ್ಪಿ ಮೃತಪಟ್ಟಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ಎಲೆಕ್ಟ್ರಾನಿಕ್ ಸಿಟಿಯ ಅನಂತ ನಗರದ ಹರೀಶ (22) ಮೃತ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News