ಸರಣಿ ಅಪಘಾತಕ್ಕೀಡಾದ ಬಿಎಂಟಿಸಿ ಬಸ್: ಇಬ್ಬರು ಬೈಕ್ ಸವಾರರು ಮೃತ್ಯು

Update: 2020-01-06 14:07 GMT

ಬೆಂಗಳೂರು, ಜ.6: ಬಿಎಂಟಿಸಿ ಬಸ್ ನಿಯಂತ್ರಣ ತಪ್ಪಿ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಮೃತಪಟ್ಟು, ಮೂರು ಮಂದಿಗೆ ಗಾಯಗಳಾಗಿರುವ ಘಟನೆ ನಡೆದಿದೆ.

ನಗರದ ಮಾಗಡಿ ರಸ್ತೆಯ ಕೊಟ್ಟಿಗೆಪಾಳ್ಯ ಜಂಕ್ಷನ್ ಇಳಿಜಾರು ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮಾಗಡಿ ರಸ್ತೆಯ ಭೈರಪ್ಪ (50) ಹಾಗೂ ವಿಶ್ವಾರಾಧ್ಯ (40) ಎಂಬುವರು ಮೃತಪಟ್ಟವರು ಪೊಲೀಸರು ಗುರುತಿಸಿದ್ದು, ಗಾಯಗೊಂಡಿರುವ ಪ್ರಯಾಣಿಕರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಸೋಮವಾರ ಇಲ್ಲಿನ ಮೂರನೇ ಘಟಕದ ಕೆಎ57ಎಫ್696 ಮಾರ್ಗ ಸಂಖ್ಯೆ 245 ಎಂ ಸಂಖ್ಯೆಯ ಮಾದನಾಯಕನಹಳ್ಳಿಯಿಂದ ಕೆಂಪೇಗೌಡ ಬಸ್ ನಿಲ್ದಾಣದವರೆಗೂ ಕಾರ್ಯ ನಿರ್ವಹಿಸುವ ಬಿಎಂಟಿಸಿ ಬಸ್, ಕೊಟ್ಟಿಗೆಪಾಳ್ಯ ಜಂಕ್ಷನ್ ಇಳಿಜಾರಿನಲ್ಲಿ ಬಸ್ಸಿನ ಬ್ರೇಕ್ ವೈಫಲ್ಯಗೊಂಡು ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ 6 ಬೈಕ್‌ಗಳು 1 ಕಾರು ಹಾಗೂ ಆಟೊಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಢಿಕ್ಕಿಯ ರಭಸಕ್ಕೆ ಬೈಕೊಂದರಲ್ಲಿದ್ದ ಭೈರಪ್ಪ(50) ಹಾಗೂ ವಿಶ್ವಾರಾಧ್ಯ(40) ಮೃತಪಟ್ಟಿದ್ದು, ಉಳಿದ ಬೈಕ್‌ಗಳಲ್ಲಿದ್ದ ಮೂವರಿಗೆ ಗಾಯಗಳಾಗಿವೆ. ಅಪಘಾತಗೊಂಡ ಎಲ್ಲ 8 ವಾಹನಗಳು ಕೂಡ ಜಖಂಗೊಂಡಿವೆ ಎಂದು ತಿಳಿದುಬಂದಿದೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಕಾಮಾಕ್ಷಿಪಾಳ್ಯ ಸಂಚಾರ ಠಾಣಾ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಾಗಿಸಿದರು. ಅಪಘಾತ ನಡೆದ ಸ್ಥಳದಲ್ಲಿ ನೂರಾರು ಜನರು ಜಮಾವಣೆಗೊಂಡು ವಾಹನ ಸಂಚಾರ ಸ್ಥಗಿತಗೊಂಡಿದ್ದರಿಂದ ಹಲವು ರಸ್ತೆಗಳಲ್ಲಿ ಸಂಚಾರ ಅಸ್ಥವ್ಯಸ್ಥಗೊಂಡಿತ್ತು.

ಭೇಟಿ: ಬಿಎಂಟಿಸಿ ವ್ಯವಸ್ಥಾಪಕರು, ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಸೇರಿದಂತೆ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದರು.

ತಪ್ಪಿದ ಅನಾಹುತ

ಬ್ರೇಕ್ ಫೇಲ್ ಆಗಿದ್ದ ಬಸ್ ಚಾಲಕ ವೆಂಕಟೇಶ್ ಅವರ ನಿಯಂತ್ರಣಕ್ಕೆ ಸಿಗದೆ ಸುಮಾರು 200 ಮೀಟರ್ ಚಲಿಸಿದೆ. ಬಳಿಕ ರಸ್ತೆಯ ಬಲಭಾಗದಲ್ಲಿ ಕಾಮಗಾರಿ ನಡೆಯುತ್ತಿದ್ದುದ್ದನ್ನು ಕಂಡ ಚಾಲಕ ಬಸ್ ಅನ್ನು ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ತಿರುಗಿಸಿದಾಗ ಅಲ್ಲಿದ್ದ ಮಣ್ಣಿನ ಗುಡ್ಡಕ್ಕೆ ಬಸ್ ಢಿಕ್ಕಿ ಹೊಡೆದು ದೊಡ್ಡ ದುರಂತವೊಂದು ತಪ್ಪಿದಂತಾಗಿದೆ ಎನ್ನಲಾಗಿದೆ.

‘ಕಠಿಣ ಕ್ರಮ ಕೈಗೊಳ್ಳುತ್ತೇವೆ’

ಘಟನೆಯನ್ನು ಎಸಿಪಿ ದರ್ಜೆಯ ಅಧಿಕಾರಿಯಿಂದ ತನಿಖೆ ನಡೆಸಲಾಗುವುದು. ಬಸ್ ಘಟಕದ ವ್ಯವಸ್ಥಾಪಕ ಅವರ ನಿರ್ಲಕ್ಷ್ಯ ಕಂಡುಬಂದರೆ, ಅವರ ಮೇಲೆ ಕ್ರಮ ಕೈಗೊಂಡು ಬಂಧಿಸುತ್ತೇವೆ ಎಂದು ರವಿಕಾಂತೇಗೌಡ ಹೇಳಿದರು.

ಅಮಾನತು ಆದೇಶ

ಘಟನೆ ಸಂಬಂಧ ಡಿಪೋ ಮಾನ್ಯೇಜರ್, ಸಹಾಯಕ ಕಾರ್ಯ ಅಧೀಕ್ಷಕ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ. ಮೃತರ ಅಂತ್ಯಕ್ರಿಯೆಯ ಉದ್ದೇಶಕ್ಕಾಗಿ ತಲಾ 25 ಸಾವಿರ ರೂ.ಗಳನ್ನು ಕುಟುಂಬಸ್ಥರಿಗೆ ನೀಡಲಾಗಿದೆ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News