ಆಧ್ಯಾತ್ಮಿಕ ಸಂಸ್ಥೆ ಕಾನೂನಿಗಿಂತ ಮೇಲಲ್ಲ: ಇಷಾ ಪ್ರತಿಷ್ಠಾನಕ್ಕೆ ಹೆಕೋರ್ಟ್ ತರಾಟೆ

Update: 2020-01-07 18:33 GMT

ಬೆಂಗಳೂರು,ಜ.7: ತನ್ನ ‘ ಕಾವೇರಿ ಕಾಲಿಂಗ್ ’ ಯೋಜನೆಗಾಗಿ ಜನರಿಂದ ಎಷ್ಟು ಹಣವನ್ನು ಸಂಗ್ರಹಿಸಲಾಗಿದೆಎನ್ನುವುದನ್ನು ಘೋಷಿಸಲು ವಿಫಲಗೊಂಡಿದ್ದಕ್ಕಾಗಿ ಸದ್ಗುರು ಜಗ್ಗಿ ವಾಸುದೇವ ಅವರ ಇಷಾ ಪ್ರತಿಷ್ಠಾನವನ್ನು ಮಂಗಳವಾರ ತೀವ್ರ ತರಾಟೆಗೆತ್ತಿ ಕೊಂಡ ಕರ್ನಾಟಕ ಉಚ್ಚ ನ್ಯಾಯಾಲ ಯವು, ಪ್ರತಿಷ್ಠಾನವು ಸಂಗ್ರಹಿಸಿರುವ ಹಣದ ವಿವರ ಮಾತ್ರವಲ್ಲ,ಅದನ್ನು ಸಂಗ್ರಹಿಸಲು ಅನುಸರಿಸಿದ ವಿಧಾನಗಳ ಬಗ್ಗೆಯೂ ತಿಳಿಸಬೇಕು ಎಂದು ಹೇಳಿತು.

 ‘ನಿಮ್ಮದು ಆಧ್ಯಾತ್ಮಿಕ ಸಂಸ್ಥೆಯಾಗಿರುವುದರಿಂದ ಕಾನೂನಿಗೆ ನೀವು ಅತೀತರಾಗಿದ್ದೀರಿ ಎಂಬ ಭಾವನೆ ಬೇಡ ’ ಎಂದು ಮುಖ್ಯ ನ್ಯಾಯಾಧೀಶ ಅಭಯ ಓಕಾ ಮತ್ತು ನ್ಯಾ.ಹೇಮಂತ ಚಂದನಗೌಡರ ಅವರ ವಿಭಾಗೀಯ ಪೀಠವು ಚಾಟಿ ಬೀಸಿತು.

ನ್ಯಾಯವಾದಿ ಎ.ವಿ.ಅಮರನಾಥ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿ ಕೊಂಡಿದೆ. ಜನರಿಂದ ಹೆಚ್ಚು ಹಣವನ್ನು ಸಂಗ್ರಹಿಸದಂತೆ ಪ್ರತಿಷ್ಠಾನಕ್ಕೆ ಸೂಚನೆ ನೀಡುವಂತೆ ಅರ್ಜಿದಾರರು ಕೋರಿಕೊಂಡಿದ್ದರು.

ಹಣವನ್ನು ಜನರಿಂದ ಸ್ವಯಂಪ್ರೇರಿತ ದೇಣಿಗೆಯಾಗಿ ಸಂಗ್ರಹಿಸಲಾಗಿದೆಯೇ ಎನ್ನುವುದನ್ನೂ ತನಗೆ ತಿಳಿಸುವಂತೆ ನ್ಯಾಯಾಲಯವು ಪ್ರತಿಷ್ಠಾನಕ್ಕೆ ನಿರ್ದೇಶ ನೀಡಿತು.

 ‘ಕಾವೇರಿ ಕಾಲಿಂಗ್’ ಯೋಜನೆಯು ಗಿಡಗಳನ್ನು ನೆಡುವ ಮೂಲಕ ಕಾವೇರಿ ನೀರಿನ ಹರಿವು ಕಡಿಮೆಯಾಗುವುದನ್ನು ಮತ್ತು ರೈತರ ಸಂಕಷ್ಟಗಳನ್ನು ತಡೆಯುವ ಅವಳಿ ಉದ್ದೇಶಗಳನ್ನು ಹೊಂದಿದೆ. 242 ಕೋಟಿ ಗಿಡಗಳನ್ನು ನೆಡುವುದು ತನ್ನ ಗುರಿಯಾಗಿದ್ದು, ಈವರೆಗೆ 4,66,93,937 ಗಿಡಗಳ ಕೊಡುಗೆ ಸ್ವೀಕರಿಸಿದ್ದೇನೆ. ಈ ಪೈಕಿ 3.07 ಗಿಡಗಳು ಸರಕಾರ ಮತ್ತು ಇತರ ನರ್ಸರಿಗಳ ಕೊಡುಗೆಯಾಗಿದೆ ಎಂದು ಯೋಜನೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ. ಪ್ರತಿಷ್ಠಾನವು ಪ್ರತಿ ಗಿಡಕ್ಕೆ 42 ರೂ.ನಂತೆ ದೇಣಿಗೆಯನ್ನು ಸಂಗ್ರಹಿಸುತ್ತಿದೆ.

ನಟ ಲಿಯೊನಾರ್ಡೊ ಡಿಕ್ಯಾಪ್ರಿಯೊ ಅವರಂತಹ ಹವಾಮಾನ ಕಾರ್ಯಕರ್ತರು ಯೋಜನೆಯನ್ನು ಬೆಂಬಲಿಸಿದ್ದಾರೆ. ಆದರೆ ಅದಕ್ಕಾಗಿ ಹಣ ಸಂಗ್ರಹಿಸುತ್ತಿರುವ ವಿಧಾನವನ್ನು ನಾಗರಿಕ ಸಮಾಜದ ಗುಂಪುಗಳು ವಿರೋಧಿಸಿದ್ದು,ಇದರಿಂದಾಗಿ ಯೋಜನೆಯು ವಿವಾದಾತ್ಮಕವಾಗಿದೆ.

ಪುನಃಶ್ಚೇತನ ಚಟುವಟಿಕೆಯ ಬಗ್ಗೆ ಯಾರಾದರೂ ಅರಿವು ಮೂಡಿಸುತ್ತಿದ್ದರೆ ಅದು ಅತ್ಯಂತ ಸ್ವಾಗತಾರ್ಹ,ಆದರೆ ಬಲವಂತದಿಂದ ಹಣವನ್ನು ಸಂಗ್ರಹಿಸಬಾರದು ಎಂದೂ ಪೀಠವು ಹೇಳಿತು. ಪ್ರತಿಷ್ಠಾನವು ಬಲವಂತದಿಂದ ಹಣವನ್ನು ಸಂಗ್ರಹಿಸುತ್ತಿದೆ ಎಂಬ ದೂರುಗಳ ಬಗ್ಗೆ ಸ್ವತಂತ್ರ ತನಿಖೆ ನಡೆಸದ್ದಕ್ಕೆ ರಾಜ್ಯ ಸರಕಾರವನ್ನೂ ಉಚ್ಚ ನ್ಯಾಯಾಲಯವು ತರಾಟೆಗೆತ್ತಿಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News