ಭಾರತ್ ಬಂದ್: ಪಶ್ಚಿಮಬಂಗಾಳದಲ್ಲಿ ಹಿಂಸಾಚಾರ

Update: 2020-01-08 18:31 GMT

ಕೋಲ್ಕತ್ತಾ, ಜ. 8: ಬಂದ್ ಬೆಂಬಲಿಗರು ಎಂದು ಹೇಳಲಾದ ಗುಂಪೊಂದು ಪಶ್ಚಿಮಬಂಗಾಳದ ಮಾಲ್ಡಾ ಜಿಲ್ಲೆಯ ಸುಜಾಪುರದಲ್ಲಿ ಬುಧವಾರ ಅಪರಾಹ್ನ ಕಲ್ಲು ತೂರಾಟ ನಡೆಸಿದೆ ಹಾಗೂ ಪೊಲೀಸರ ವಾಹನಗಳಿಗೆ ಬೆಂಕಿ ಹಚ್ಚಿದೆ ಎಂದು ವರದಿಯಾಗಿದೆ.

ಪೊಲೀಸರು ಬ್ಯಾರಿಕೇಡ್‌ಗಳನ್ನು ಅಪರಾಹ್ನ 1.15ಕ್ಕೆ ತೆರವುಗೊಳಿಸುತ್ತಿರುವ ಸಂದರ್ಭ ಬಂದ್ ಬೆಂಬಲಿಗರು ದಾಳಿ ನಡೆಸಿದರು. ಈ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಆದರೆ, ಪರಿಸ್ಥಿತಿ ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ಅಶ್ರುವಾಯು ಸಿಡಿಸಿದರು. ಈ ನಡುವೆ ಸುಜಾಪುರದ ಕಾಂಗ್ರೆಸ್ ಶಾಸಕ ಇಶಾ ಖಾನ್ ಚೌಧರಿ ಪತ್ರಿಕಾಗೋಷ್ಠಿ ಏರ್ಪಡಿಸಿ ಕೆಲವು ವೀಡಿಯೊ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದಾರೆ.

ಈ ವೀಡಿಯೊ ದೃಶ್ಯಾವಳಿಗಳಲ್ಲಿ ಪೊಲೀಸ್ ಸಮವಸ್ತ್ರ ಧರಿಸಿದ ವ್ಯಕ್ತಿಗಳು ಶಸ್ತ್ರಾಸ್ತ್ರ ಹಿಡಿದುಕೊಂಡು ಕೆಲವು ವಾಹನಗಳ ಗಾಜುಗಳನ್ನು ಒಡೆದಿರುವುದು ಬಹಿರಂಗಗೊಂಡಿದೆ. ‘‘ಕಾಂಗ್ರೆಸ್ ಕಾರ್ಯಕರ್ತರು ವಾಹನಗಳಿಗೆ ಹಾನಿ ಉಂಟು ಮಾಡಿಲ್ಲ. ಪೊಲೀಸರು ಈ ಕೃತ್ಯ ಎಸಗಿದ್ದಾರೆ ಹಾಗೂ ನಮ್ಮ ಮೇಲೆ ಆರೋಪ ಹೊರಿಸಿದ್ದಾರೆ’’ ಎಂದು ಚೌಧರಿ ಹೇಳಿದ್ದಾರೆ. ಆದರೆ, ಎಡರಂಗ ಈ ಆರೋಪವನ್ನು ನಿರಾಕರಿಸಿದೆ. ‘‘ಅವರು ಪೊಲೀಸರ ಮೇಲೆ ಯಾಕೆ ದಾಳಿ ನಡೆಸಿದರು ? ಮಾಲ್ಡಾ ಜಿಲ್ಲೆಯಲ್ಲಿ ಬಂದ್ ಶಾಂತಿಯುತವಾಗಿ ನಡೆದಿದೆ’’ ಎಂದು ಸಿಪಿಎಂನ ಮಾಲ್ಡಾ ಜಿಲ್ಲೆಯ ಕಾರ್ಯದರ್ಶಿ ಅಂಬರ್ ಮಿತ್ರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News