ಉತ್ತರ ಪ್ರದೇಶ : ಬಸ್ಸು- ಲಾರಿ ಢಿಕ್ಕಿ ; 20 ಮಂದಿ ಸಜೀವ ದಹನ

Update: 2020-01-11 03:56 GMT

ಲಕ್ನೋ: ಖಾಸಗಿ ಸ್ಲೀಪರ್ ಬಸ್ಸೊಂದು ದಹಿಸುವ ರಾಸಾಯನಿಕ ವಸ್ತುವನ್ನು ಒಯ್ಯುತ್ತಿದ್ದ ಟ್ರಕ್‌ಗೆ ಢಿಕ್ಕಿ ಹೊಡೆದಾಗ ಉಂಟಾದ ಬೆಂಕಿ ಅನಾಹುತದಲ್ಲಿ ಕನಿಷ್ಠ 20 ಪ್ರಯಾಣಿಕರು ಜೀವಂತ ದಹನವಾದ ಘಟನೆ ಶುಕ್ರವಾರ ರಾತ್ರಿ ಉತ್ತರ ಪ್ರದೇಶದ ಕನೌಜ್ ಜಿಲ್ಲೆಯಲ್ಲಿ ನಡೆದಿದೆ.

ಜೈಪುರದಿಂದ ಕನೌಜ್‌ಗೆ ಹೋಗುತ್ತಿದ್ದ ಖಾಸಗಿ ಬಸ್ಸು ದೆಹಲಿ- ಕಾನ್ಪುರ ಹೆದ್ದಾರಿಯ ಜಿಟಿ ರೋಡ್ ಬಳಿ ಲಾರಿಗೆ ಢಿಕ್ಕಿ ಹೊಡೆದಾಗ ಈ ದುರಂತ ಸಂಭವಿಸಿದೆ.ಬಸ್ಸಿನಲ್ಲಿ 46 ಪ್ರಯಾಣಿಕರಿದ್ದರು ಹಾಗೂ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.

ಎರಡೂ ವಾಹನಗಳೂ ಸಂಪೂರ್ಣ ಭಸ್ಮವಾಗಿವೆ. ದುರಂತದಲ್ಲಿ ಸುಟ್ಟು ಕರಕಲಾದ ಕನಿಷ್ಠ 15 ಮಂದಿಯ ಗುರುತು ಪತ್ತೆ ಸಾಧ್ಯವಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ತೀವ್ರ ಸುಟ್ಟಗಾಯಗಳಾಗಿರುವ 21 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಗಿಲು ಹಾಗೂ ಕಿಟಕಿಗಳನ್ನು ಮುಚ್ಚಿ ಜನ ನಿದ್ರೆ ಮಾಡುತ್ತಿದ್ದ ಕಾರಣ ದುರಂತ ಸಂಭವಿಸಿದಾಗ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳ ಕುಟುಂಬಕ್ಕೆ 50 ಸಾವಿರ ರೂ. ಪರಿಹಾರವನ್ನು ರಾಜ್ಯ ಸರ್ಕಾರ ಘೋಷಿಸಿದೆ.

ಅಗ್ನಿಶಾಮಕ ಠಾಣೆಯ 15 ಅಗ್ನಿಶಾಮಕ ಯಂತ್ರಗಳು ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಿಸಿದ್ದು, ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ. ಇನ್ನೂ ಸಾವಿನ ನಿಖರ ಸಂಖ್ಯೆ ಲಭ್ಯವಾಗಿಲ್ಲ. ಬಸ್ಸು- ಲಾರಿ ಢಿಕ್ಕಿ ಹೊಡೆದಾಗ ಸ್ಫೋಟ ಸಂಭವಿಸಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News