ಬೆಂಕಿ ಹಚ್ಚುವ ಕೆಲಸಕ್ಕೆ ಎಚ್‌ಡಿಕೆ ಕೈ ಹಾಕಿದ್ದಾರೆ: ಕೆ.ಎಸ್.ಈಶ್ವರಪ್ಪ

Update: 2020-01-11 14:18 GMT

ಬೆಂಗಳೂರು, ಜ.11: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತುಂಬಾ ಕಸರತ್ತು ಮಾಡಿ ವಿಡಿಯೋ ತಯಾರಿಸಿದ್ದಾರೆ. ಮಾಡುವದಕ್ಕೆ ಕೆಲಸ ಇಲ್ಲ ಅಂತಾ ಬೆಂಕಿ ಹಚ್ಚುವ ಕೆಲಸಕ್ಕೆ ಕೈ ಹಾಕಿದ್ದಾರೆ. ಮಂಗಳೂರಿನಲ್ಲಿ ಗಲಭೆಗಳ ನಂತರ ಪರಿಸ್ಥಿತಿ ಶಾಂತವಾಗಿದೆ. ಇಂತಹ ಸಂದರ್ಭದಲ್ಲಿ ಜನರ ದಿಕ್ಕು ತಪ್ಪಿಸಲು ಸಿಡಿ ಬಿಡುಗಡೆ ಮಾಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.

ಶನಿವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಸಿ.ಡಿ.ಗೆ ಕೆಎಫ್‌ಡಿ, ಎಸ್‌ಡಿಪಿಐ ಗೂಂಡಾಗಳು ಇರುವ ಸಿಸಿಟಿವಿ ದೃಶ್ಯಾವಳಿಗಳು ಸಿಕ್ಕಿಲ್ಲ ಎಂದರು.

ಪೊಲೀಸರು ತಪ್ಪು ಮಾಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಜೀವರಕ್ಷಣೆಗೆ ಅವರು ಗೋಲಿಬಾರ್ ಮಾಡಿದ್ದಾರೆ. ಅಂದು ಪೊಲೀಸರು ಕ್ರಮ ತೆಗೆದುಕೊಳ್ಳದಿದ್ದರೆ ಗೂಂಡಾಗಳು ಪೊಲೀಸ್ ಠಾಣೆಯಿಂದ ಶಸ್ತ್ರಾಸ್ತ್ರ ಕಸಿದು, ಪೊಲೀಸರು ಮತ್ತು ಮಂಗಳೂರನ್ನು ನಾಶ ಮಾಡುತ್ತಿದ್ದರು ಎಂದು ಅವರು ಆರೋಪಿಸಿದರು.

ಮದ್ದೂರು ತಾಲೂಕಿನಲ್ಲಿ ತಮ್ಮ ಪಕ್ಷದ ಕಾರ್ಯಕರ್ತ ಹತ್ಯೆಯಾದಾಗ ಆಗ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಆರೋಪಿಗಳನ್ನು ಎನ್‌ಕೌಂಟರ್ ಮಾಡಿ ಬಿಸಾಕಿ ಎಂದಿದ್ದರು. ಆದರೆ, ಇದೀಗ ಗಲಭೆಗಳನ್ನು ನಿಯಂತ್ರಿಸಲು ಪೊಲೀಸರು ಕ್ರಮ ತೆಗೆದುಕೊಂಡರೆ ಅದನ್ನು ಪ್ರಶ್ನಿಸುತ್ತಿರುವುದು ದುರಂತ ಎಂದು ಈಶ್ವರಪ್ಪ ಹೇಳಿದರು.

2006ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಡಾ.ರಾಜ್‌ ಕುಮಾರ್ ನಿಧನರಾದಾಗ ಪಾರ್ಥಿವ ಶರೀರದ ಮೆರವಣಿಗೆ ವೇಳೆ ನಡೆದ ಹಿಂಸಾಚಾರದಲ್ಲಿ ಪೊಲೀಸರ ಗೋಲಿಬಾರ್‌ಗೆ ಐದು ಮಂದಿ ಅಮಾಯಕರು ಸಾವನ್ನಪ್ಪಿದ್ದರು. ಕಂಠೀರವ ಸ್ಟುಡಿಯೋ ಸುತ್ತಮುತ್ತಲಿನ ಪರಿಸರ ರಣಾಂಗಣವಾಗಿತ್ತು. ಆಗ ಗೃಹ ಖಾತೆ ಅವರ ಬಳಿಯೇ ಇತ್ತು ಎಂದು ಈಶ್ವರಪ್ಪ ತಿಳಿಸಿದರು.

ರಾಜ್ಯ ಶಾಂತವಾಗಿರುವುದು ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯಗೆ ಇಷ್ಟವಿಲ್ಲ. ಇಬ್ಬರಿಗೂ ಮುಖ್ಯಮಂತ್ರಿ ಕುರ್ಚಿ ಮೇಲೆಯೇ ಕಣ್ಣು. ಅದಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ವಿಧಾನಸಭೆ, ಲೋಕಸಭೆ, ವಿಧಾನಸಭೆ ಉಪ ಚುನಾವಣೆಯಲ್ಲಿ ಸೋತರೂ ಸಿದ್ದರಾಮಯ್ಯಗೆ ಬುದ್ಧಿ ಬಂದಿಲ್ಲ ಎಂದು ಅವರು ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿಯನ್ನು ‘ಹಿಟ್ಲರ್’ ಎಂದು ಕರೆದಿರುವ ಸಿದ್ದರಾಮಯ್ಯ ಕ್ಷಮೆ ಯಾಚಿಸಬೇಕು. ಹಿಂದೂ-ಮುಸ್ಲಿಮರ ನಡುವೆ ಒಡಕು ಮೂಡಿಸಿ ಮುಸ್ಲಿಮರ ಮತಗಳಿಗೆ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅವರ ಪ್ರಯತ್ನ ವಿಫಲವಾಗಲಿದೆ. ಮುಸ್ಲಿಮರನ್ನು ಸಂತೃಪ್ತಿಪಡಿಸಲು ಕುಮಾರಸ್ವಾಮಿ, ಸಿದ್ದರಾಮಯ್ಯ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಆದರೆ, ಮುಸ್ಲಿಮರೇ ಅವರನ್ನು ಸೋಲಿಸುತ್ತಾರೆ ಎಂದು ಈಶ್ವರಪ್ಪ ಹೇಳಿದರು.

ಗಲಭೆಕೋರರ ರಕ್ಷಾ ಕವಚವಾಗಿ ಕುಮಾರಸ್ವಾಮಿ ನಿಂತಿದ್ದಾರೆ. ಎಸ್‌ಡಿಪಿಐ, ಕೆಎಫ್‌ಡಿ ಷಡ್ಯಂತ್ರಗಳಿಗೆ ಸಹಾಯಹಸ್ತರಾಗಿ ನಿಂತಿರುವುದು ಅತೀವ ನೋವಿನ ಸಂಗತಿ. ವಿಭಜಕ ಶಕ್ತಿಗಳ ಪರ ನಿಂತಿರುವುದು ದಿಗ್ಭ್ರಮೆ ಮೂಡಿಸಿದೆ. ದೇಶದ್ರೋಹಿಗಳ ಪರ ನಿಲ್ಲದಂತೆ ದೇವೇಗೌಡರು ತಮ್ಮ ಪುತ್ರನಿಗೆ ತಿಳಿಹೇಳಬೇಕು ಎಂದು ಈಶ್ವರಪ್ಪ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಸಹವಕ್ತಾರ ಎಸ್.ಪ್ರಕಾಶ್, ಮಂಜುಳಾ ಹಾಗೂ ರಾಜ್ಯ ಕಾರ್ಯದರ್ಶಿ ಭಾರತಿ ಮಗದುಮ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News