ಅಸ್ಪೃಶ್ಯತೆಯ ನೋವು ನಾನೂ ಅನುಭವಿಸಿದ್ದೇನೆ: ಲೋಕಸಭೆ ಮಾಜಿ ಸ್ಪೀಕರ್ ಮೀರಾ ಕುಮಾರ್

Update: 2020-01-11 16:01 GMT

ಬೆಂಗಳೂರು, ಜ.11: ಸಮಾಜದಲ್ಲಿ ಆಗುವ ಅಸ್ಪಶ್ಯತೆಯ ನೋವು, ಸಮಸ್ಯೆಯನ್ನು ನಾನೂ ಸಹ ಅನುಭವಿಸಿದ್ದೇನೆ ಎಂದು ಲೋಕಸಭೆ ಮಾಜಿ ಸ್ಪೀಕರ್ ಮೀರಾ ಕುಮಾರ್ ನುಡಿದರು.

ಶನಿವಾರ ನಗರದ ಲಾಲ್‌ಬಾಗ್ ರಸ್ತೆಯ ಸೇಂಟ್ ಜೋಸೆಫ್ ಕಾಲೇಜು ಏರ್ಪಡಿಸಿದ್ದ, ಓಪನ್ ಹಾರ್ಟ್ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹಲವು ವರ್ಷಗಳ ಹಿಂದೆ ಹೊಸದಿಲ್ಲಿಯಲ್ಲಿ ಜಿಮ್‌ಗೆ ಹೋಗುತ್ತಿದ್ದಾಗ ಅಸ್ಪೃಶ್ಯತೆಯ ಸಮಸ್ಯೆ ಎದುರಿಸಿದ್ದೆ. ಪ್ರತಿ ದಿನ ಜಿಮ್‌ಗೆ ಹೋಗುತ್ತಿದ್ದುದರಿಂದ ಬೇಸರಗೊಂಡ ಕೆಲವರು ಜಿಮ್‌ಗೆ ಬರುವುದನ್ನು ನಿಲ್ಲಿಸಿದ್ದರು. ಈ ಕುರಿತು ಜಿಮ್‌ನ ತರಬೇತುದಾರರು ನನಗೆ ಹೇಳಿದ್ದರು. ಇದರಿಂದಾಗಿ ಬೇಸರಗೊಂಡು ಜಿಮ್‌ಗೆ ಹೋಗುವುದನ್ನು ನಿಲ್ಲಿಸಿದ್ದೆ ಎಂದು ಅವರು ನೆನದರು.

ಲೋಕಸಭೆಯ ಸ್ಪೀಕರ್ ಆದ ಬಳಿಕ ಜಾತಿ ಅಥವಾ ಲಿಂಗ ತಾರತಮ್ಯ ಕಂಡುಬರಲಿಲ್ಲ. ಎಲ್ಲರೂ ನನ್ನ ಸ್ಥಾನಕ್ಕೆ ಗೌರವ ತೋರಿದರು ಎಂದ ಅವರು, ರಾಷ್ಟ್ರಪತಿ ಸ್ಥಾನಕ್ಕಾಗಿ ಸ್ಪರ್ಧಿಸಿದಾಗ ಯಾರು ಗೆಲ್ಲುತ್ತಾರೆ ಎಂಬುದು ಮೊದಲೇ ಗೊತ್ತಾಗಿತ್ತು. ಆದರೂ ರಾಜಕಾರಣದಲ್ಲಿ ಅದುವರೆಗೆ ಪಾಲಿಸಿಕೊಂಡು ಬಂದ ಮೌಲ್ಯಗಳನ್ನು ಮುಂದುವರಿಸುವುದಕ್ಕಾಗಿ ಸ್ಪರ್ಧೆಯಿಂದ ಹಿಂದೆ ಸರಿಯಲಿಲ್ಲ ಎಂದರು.

ಏಷ್ಯಾದ ಬಲಶಾಲಿ ವ್ಯಕ್ತಿ ಎಂದು ಹೆಸರಾಗಿರುವ ಮನೋಜ್ ಚೋಪ್ರಾ ಮಾತನಾಡಿ, ಉದ್ಯಮದಲ್ಲಿ ನಷ್ಟ ಹೊಂದಿದಾಗ ದಿಕ್ಕು ತೋಚದೆ ಕುಳಿತಿದ್ದೆ. ನಂತರ ವಿಶ್ವ ಮಟ್ಟದಲ್ಲಿ ನಡೆಯುವ ಬಲಶಾಲಿ ವ್ಯಕ್ತಿ ಸ್ಪರ್ಧೆಯನ್ನು ಟಿವಿಯಲ್ಲಿ ನೋಡಿದಾಗ ಭಾರತವನ್ನು ಯಾರೂ ಪ್ರತಿನಿಧಿಸುತ್ತಿಲ್ಲ ಎಂದು ತಿಳಿಯಿತು. ದೇಶಕ್ಕೆ ಹಾಗೂ ಕುಟುಂಬಕ್ಕೆ ಹೆಸರು ತರಬೇಕೆಂದು ಅಭ್ಯಾಸ ಆರಂಭಿಸಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಹುಭಾಷಾ ನಟಿ ಮೇಘನಾ ರಾಜ್ ಪಾಲ್ಗೊಂಡು ನಟನೆ, ವೈಯಕ್ತಿಕ ಜೀವನದ ಕುರಿತು ಮಾತನಾಡಿದರು.

ಎಲ್ಲ ಧರ್ಮಗಳನ್ನು ಗೌರವಿಸಲಿ
ಪೌರತ್ವ ತಿದ್ದುಪಡಿ ಕಾಯ್ದೆ ಸರಿಯೇ ಎನ್ನುವ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಭಾರತ ಜಾತ್ಯತೀತ ರಾಷ್ಟ್ರವಾಗಿದ್ದು, ಜಾತ್ಯತೀತತೆ ಉಳಸಿಕೊಳ್ಳಲು ನಾನು ಹೋರಾಡುತ್ತೇನೆ. ಈ ದೇಶದಲ್ಲಿ ಎಲ್ಲ ಧರ್ಮೀಯರು ವಾಸಿಸುತ್ತಿದ್ದು, ಗೀತೆ, ಕುರಾನ್, ಬೈಬಲ್ ಸೇರಿದಂತೆ ಎಲ್ಲ ಧರ್ಮಗಳ ಪವಿತ್ರ ಗ್ರಂಥಗಳಿಗೆ ಗೌರವ ದೊರೆಯುತ್ತಿದೆ. ಒಂದು ಧರ್ಮಕ್ಕೆ ಸೇರಿದ ವ್ಯಕ್ತಿ ಮತ್ತೊಂದು ಧರ್ಮವನ್ನು ಗೌರವಿಸಿದಾಗ ಮಾತ್ರ ಆತ ತನ್ನ ಸ್ವಂತ ಧರ್ಮಕ್ಕೆ ಗೌರವ ತೋರಿದಂತಾಗುತ್ತದೆ.
-ಮೀರಾ ಕುಮಾರ್ ಲೋಕಸಭೆ ಮಾಜಿ ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News