ಸ್ಥಳದ ಕೊರತೆ: ರಾಜಧಾನಿಯಲ್ಲಿ ಮತ್ತೊಮ್ಮೆ ಕಸದ ಸಮಸ್ಯೆ ತಲೆದೋರುವ ಸಾಧ್ಯತೆ

Update: 2020-01-11 17:44 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.11: ರಾಜ್ಯದ ರಾಜಧಾನಿಯಲ್ಲಿ ಕಸ ವಿಲೇವಾರಿಗೆ ಗುರುತಿಸಿದ್ದ ಮಿಟ್ಟಗಾನಹಳ್ಳಿ ಗಣಿ ಹೊಂಡ ಇದೀಗ ಪೂರ್ತಿಯಾಗುತ್ತಿದ್ದು, ನಗರದಲ್ಲಿ ಕಸ ಸುರಿಯಲು ಸ್ಥಳವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಬಿಬಿಎಂಪಿಯಿಂದ ಅಕ್ಟೋಬರ್‌ನಲ್ಲಿ ಮಿಟ್ಟಗಾನಹಳ್ಳಿಯಲ್ಲಿ ಕ್ವಾರಿ ಗುರುತಿಸಿ ಐದು ತಿಂಗಳು ಮಿಶ್ರ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಭೂಭರ್ತಿಗೆ ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಅಲ್ಲಿಗೆ, ಅಂದಾಜು ಮಾಡಿದ್ದಕ್ಕಿಂತ 100 ಹೆಚ್ಚು ಲಾರಿಗಳು ಕಸ ಸುರಿಯುತ್ತಿವೆ. ಇದೀಗ ಇಲ್ಲಿ ಶೇ.90 ರಷ್ಟು ಭರ್ತಿಯಾಗಿದೆ. ರಾಜಧಾನಿಯಲ್ಲಿ ಮತ್ತೊಮ್ಮೆ ಕಸದ ಸಮಸ್ಯೆ ತಲೆದೋರುವ ಸಾಧ್ಯತೆಗಳು ದಟ್ಟವಾಗತೊಡಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ 4 ರಿಂದ 5 ಸಾವಿರ ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ನಗರದಲ್ಲಿ ಒಟ್ಟು 7 ಸಂಸ್ಕರಣಾ ಘಟಕಗಳಿದ್ದು, ಅವು 1,600 ಟನ್ ಕಸ ಸಂಸ್ಕರಣೆ ಮಾಡುವ ಸಾಮರ್ಥ್ಯವಿದೆ. ಆದರೆ, ವಿಂಗಡಣೆ ಮಾಡಿದ ಹಸಿ ಕಸ ಸಂಗ್ರಹ ಮಾಡುವಲ್ಲಿ ಪಾಲಿಕೆ ವಿಫಲವಾಗಿದೆ. ಹೀಗಾಗಿ, ಸಂಸ್ಕರಣಾ ಘಟಕಗಳಿಗೆ ಕೇವಲ 600 ಟನ್ ಕಸ ಹೋಗುತ್ತಿದೆ. ಉಳಿದ 3 ಸಾವಿರ ಟನ್‌ಗೂ ಅಧಿಕ ಕಸವನ್ನು ವೈಜ್ಞಾನಿಕವಾಗಿ ಭೂಭರ್ತಿಗೆ ಗುರುತಿಸಿರುವ ತಾತ್ಕಾಲಿಕ ಹೊಂಡಕ್ಕೆ ಸುರಿಯಲಾಗುತ್ತಿದೆ.

ಟೆಂಡರ್ ತಡೆ ಹಿಡಿದ ಸರಕಾರ: ಕಸ ಸುರಿಯಲು ತಾತ್ಕಾಲಿಕವಾಗಿ ಗುರುತಿಸಲಾಗಿರುವ ಮಿಟ್ಟಗಾನಹಳ್ಳಿ ಗಣಿ ಹೊಂಡ ಮಾಸಾಂತ್ಯಕ್ಕೆ ಭರ್ತಿಯಾಗಲಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪಾಲಿಕೆಯು ನಗರಾಭಿವೃದ್ಧಿ ಇಲಾಖೆಗೆ ಹೊಸ ಟೆಂಡರ್ ಕರೆಯಲು ಕೋರಿತ್ತು. ಮಿಟ್ಟಗಾನಹಳ್ಳಿ ಬಳಿಯ ಇನ್ನೊಂದು ದೊಡ್ಡ ಗಣಿ ಹೊಂಡ ಗುರುತಿಸಿ ಒಂದು ವರ್ಷದವರೆಗೆ ಕಸ ಸುರಿಯಲು ಕ್ರಮ ಕೈಗೊಳ್ಳಲಾಗಿತ್ತು. ಭೂ ಭರ್ತಿಗಾಗಿ ಕರೆಯಲಾಗಿದ್ದ ಟೆಂಡರ್ ಪ್ರಕ್ರಿಯೆಯಲ್ಲಿ ಅರ್ಹರಲ್ಲದ ವ್ಯಕ್ತಿಗೆ ಗುತ್ತಿಗೆ ನೀಡಲಾಗಿದೆ ಎಂಬ ಕಾರಣದಿಂದ ಸರಕಾರ ತಡೆ ಹಿಡಿದಿದೆ.

ಟೆಂಡರ್‌ಗೆ 20 ದಿನ ಬಾಕಿ: ರಾಜ್ಯ ಸರಕಾರ ತಡೆ ಹಿಡಿದಿರುವ ಟೆಂಡರ್ ಪ್ರಕ್ರಿಯೆ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕು. ಹೊಸ ಟೆಂಡರ್‌ಗೆ ಅನುಮತಿ ನೀಡಬೇಕು. ಇಲ್ಲದಿದ್ದಲ್ಲಿ ಸಂಸ್ಥೆಗಳಿಗೆ ನಿರ್ವಹಣೆ ಜವಾಬ್ದಾರಿ ವಹಿಸಬೇಕು. ಎಲ್ಲ ಪ್ರಕ್ರಿಯೆಗೆ ಕೇವಲ 20 ದಿನಗಳ ಸಮಯವಿದ್ದು ಟೆಂಡರ್ ಪ್ರಕ್ರಿಯೆ ವಿಳಂಬವಾದರೆ ಮೂಲದಲ್ಲಿಯೇ ಕಸ ಉಳಿಯಲಿದೆ. ಮನೆಗಳು, ಹೊಟೇಲ್, ಆಸ್ಪತ್ರೆ, ಕಾಲೇಜು, ವಿದ್ಯಾರ್ಥಿ ನಿಲಯಗಳು, ಮಾರುಕಟ್ಟೆ ತಾಣಗಳಿಂದ ಕಸ ವಿಲೇವಾರಿಯಾಗದೇ ತೀವ್ರ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News