ವಿವಿಗಳಿಗೆ ಹೆಚ್ಚು ಅನುದಾನ ಸಿಗುವಂತಾಗಬೇಕು: ಎನ್.ರವಿಕುಮಾರ್

Update: 2020-01-11 17:46 GMT

ಬೆಂಗಳೂರು, ಜ.11: ವಿಶ್ವವಿದ್ಯಾನಿಲಯಗಳಿಗೆ ಸರಕಾರಗಳು ಹೆಚ್ಚು ಅನುದಾನವನ್ನು ನೀಡಬೇಕು. ಆ ಮೂಲಕ ವಿದ್ಯಾರ್ಥಿಗಳಿಗೆ ಉತ್ಕೃಷ್ಟ ಶಿಕ್ಷಣ ಸಿಗುವಂತಾಗಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಆಶಿಸಿದರು.

ಶನಿವಾರ ಬೆಂಗಳೂರು ವಿವಿಯಲ್ಲಿ ಹೊರಗುತ್ತಿಗೆ ನೌಕರರು ಹಾಗೂ ಅತಿಥಿ ಉಪನ್ಯಾಸಕರ ಒಕ್ಕೂಟವು ಆಯೋಜಿಸಿದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಶೇ.20 ರಷ್ಟಿದೆ. ವಿದೇಶಗಳಲ್ಲಿ ಶೇ.60 ರಿಂದ 70 ರಷ್ಟಿದೆ. ಉನ್ನತ ಶಿಕ್ಷಣದಿಂದ ಮಾತ್ರ ಜೀವನಮಟ್ಟ ಸುಧಾರಿಸಲು ಸಾಧ್ಯ ಎಂದು ಅಭಿಪ್ರಾಯಿಸಿದರು.

ಬೆಂವಿವಿ ಅಭಿವೃದ್ಧಿಗೆ ಸಿಂಡಿಕೇಟ್ ಸದಸ್ಯರಾದ, ಬಿ.ಶಿವಣ್ಣ ಹಾಗೂ ವಸಂತ್ ಕುಮಾರ್ ಅವರು ಜೋಡೆತ್ತುಗಳಂತೆ ಶ್ರಮಿಸಿದ್ದಾರೆಂದ ಅವರು, ದೇಶದ ಬಹುತೇಕ ವಿವಿಗಳು ಅತಿಥಿ ಉಪನ್ಯಾಸಕರು, ಸರಕಾರಿ ಸಂಸ್ಥೆಗಳು ಹೊರಗುತ್ತಿಗೆ ನೌಕರರ ಸೇವೆಯಿಂದ ಮುಂದುವರೆಯುತ್ತಿವೆ ಎಂದರು.

ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್ ಮಾತನಾಡಿ, ಶಿವಣ್ಣ ಹಾಗೂ ವಸಂತ್ ಕುಮಾರ್ ವಿಶ್ವವಿದ್ಯಾಲಯದ ಬೆಳವಣಿಗೆಗೆ ತಮ್ಮದೇ ಆದ ಅಮೂಲ್ಯ ಕೊಡುಗೆ ನೀಡಿದ್ದಾರೆ, ಗುತ್ತಿಗೆ ಕಾರ್ಮಿಕರ ವೇತನ ಹೆಚ್ಚಳ ಹಾಗೂ ರಾಮನಗರ ಪಿ.ಜಿ.ಸೆಂಟರ್ ಆರಂಭದಲ್ಲಿ ಇವರ ಕೊಡುಗೆ ಗಮನಾರ್ಹ ಎಂದು ಮೆಚ್ಚುಗೆ ಸೂಚಿಸಿದರು.

ಪ್ರೊ.ಬಿ.ಕೆ.ರವಿ ಮಾತನಾಡಿ, ಸಾಮಾಜಿಕ ನ್ಯಾಯ ರಥ ಎಳೆಯಲು ಎಂದಿಗೂ ಹಿಂದೆ ಬೀಳುವುದಿಲ್ಲ. ದೀನ ದಲಿತರ ನೆರವಿಗೆ ನಿಲ್ಲುವುದೇ ನಿಜವಾದ ಅಧಿಕಾರ ಧರ್ಮ ಎಂದರು. ಭವಿಷ್ಯದಲ್ಲೂ ಶಿವಣ್ಣ ಹಾಗೂ ವಸಂತಕುಮಾರ್ ಬಡವರ ಕಣ್ಣೀರು ಒರೆಸುವ ಕಾರ್ಯದಲ್ಲಿ ತಮ್ಮನ್ನು ತಾವು ಅಹರ್ನಿಷಿ ತೊಡಗಿಸಿಕೊಳ್ಳಲಿ ಎಂದು ಆಶಿಸಿದರು.

ಸನ್ಮಾನ ಸ್ವೀಕರಿಸಿ ಸಿಂಡಿಕೇಟ್ ಸದಸ್ಯ ಶಿವಣ್ಣ ಮಾತನಾಡಿ, ಹಲವು ಕೆಲಸ ಕಾರ್ಯಗಳಲ್ಲಿ ನಾನೇ ಖುದ್ದು ಮುತುವರ್ಜಿ ವಹಿಸಿದರೂ ಕಾರ್ಯ ವಿಳಂಬವಾಗುತ್ತಿತ್ತು. ಇದರ ನಡುವೆಯೂ ದಿಟ್ಟ ಹೆಜ್ಜೆಗಳನ್ನು ಇಟ್ಟ ಪರಿಣಾಮ ಕೆಲ ಕಾರ್ಯಗಳನ್ನು ಸಾಧಿಸಲು ಸಾಧ್ಯವಾಯಿತು ಎಂದು ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿ ಧನ್ಯವಾದ ಸಲ್ಲಿಸಿದರು.

ಕುಲಸಚಿವ ಮೌಲ್ಯಮಾಪನ ಪ್ರೊ.ಶಿವರಾಜ್, ಮಾಜಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ್ ಸಿಂಡಿಕೇಟ್ ಸದಸ್ಯರು, ಬೋಧಕ, ಬೋಧಕೇತರ ವರ್ಗವು ವಿದ್ಯಾರ್ಥಿಗಳು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News