ಬಿಬಿಎಂಪಿ ಅವ್ಯವಹಾರ ಆರೋಪ: ಎಸಿಬಿ ತನಿಖೆಗೆ ಶಿಫಾರಸ್ಸು

Update: 2020-01-11 18:32 GMT

ಬೆಂಗಳೂರು, ಜ.11: ಬಿಬಿಎಂಪಿ ಟ್ರಾಫಿಕ್ ಇಂಜಿನಿಯರಿಂಗ್ ಸೆಲ್ ವಿಭಾಗದಲ್ಲಿ ನಡೆದಿದ್ದ 109 ಕೋಟಿ ರೂ. ಅವ್ಯವಹಾರದ ಬಗ್ಗೆ ನೀಡಲಾಗಿದ್ದ ಟಿಸಿಸಿ ವರದಿ ಆಧರಿಸಿ, ಬಿಬಿಎಂಪಿ ಆಯುಕ್ತರು ಹಗರಣವನ್ನು ಎಸಿಬಿ ತನಿಖೆಗೆ ವಹಿಸುವಂತೆ, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

2017-18 ಮತ್ತು 2018-19ರ ಅವಧಿಯಲ್ಲಿ ಟ್ರಾಫಿಕ್ ಇಂಜಿನಿಯರಿಂಗ್ ಸೆಲ್ ವಿಭಾಗದಲ್ಲಿ 109 ಕೋಟಿ ರೂ. ಅವ್ಯವಹಾರ ನಡೆದಿತ್ತು. ಟಿಸಿಸಿ ಮುಖ್ಯ ಅಭಿಯಂತರರು ಸಲ್ಲಿಸಿರುವ ತನಿಖಾ ವರದಿ ಹಾಗೂ ಸಂಬಂಧಪಟ್ಟ ದಾಖಲೆಗಳ ಸಮೇತ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಎಸಿಬಿ ತನಿಖೆಗೆ ವಹಿಸುವಂತೆ ಮನವಿ ಮಾಡಿದ್ದಾರೆ. ಕಾಮಗಾರಿಗಳಲ್ಲಿ ಕೋಟ್ಯಂತರ ರೂ. ಗಳ ಅವ್ಯವಹಾರ ನಡೆದಿದ್ದು, ಈ ಸಂಬಂಧ ಟಿಸಿಸಿ ವರದಿಯು ಲಭ್ಯವಾಗಿದ್ದು, ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುವಂತೆ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಬಿಬಿಎಂಪಿಯೇ ನೇರವಾಗಿ ಈ ಪ್ರಕರಣ ಕುರಿತು, ತನಿಖೆ ನಡೆಸಲು ಸಾಧ್ಯವಿಲ್ಲ. ಹಾಗಾಗಿ ಸರಕಾರದ ಮೂಲಕ ಭ್ರಷ್ಟಾಚಾರ ನಿಗ್ರಹ ದಳಕ್ಕೆ ವಹಿಸಬೇಕಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಅವರು, ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಎರಡು ವರ್ಷಗಳ ಅವಧಿಯಲ್ಲಿ ನಡೆದಿರುವ 109 ಕೋಟಿ ರೂ. ಅವ್ಯವಹಾರದ ಬಗ್ಗೆ ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್.ರಮೇಶ್ ಅವರು, ಎಲ್ಲ್ಲ ದಾಖಲೆಗಳ ಸಮೇತ ಆಯುಕ್ತರಿಗೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News