ರಾಜ್ಯದಲ್ಲಿ ವಾಸವಿರುವ ಹಿಂದೂ ನಿರಾಶ್ರಿತರ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಿದ ಉತ್ತರ ಪ್ರದೇಶ

Update: 2020-01-13 04:21 GMT

ಲಕ್ನೋ: ಪಾಕಿಸ್ತಾನ, ಅಪ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ವಲಸೆ ಬಂದು, ಉತ್ತರ ಪ್ರದೇಶದ 19 ಜಿಲ್ಲೆಗಳಲ್ಲಿ ವಾಸವಿರುವ ಹಿಂದೂ ನಿರಾಶ್ರಿತರ ಪಟ್ಟಿಯನ್ನು ರಾಜ್ಯ ಸರ್ಕಾರ, ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿದೆ. ಈ ಮೂಲಕ ಉತ್ತರ ಪ್ರದೇಶ, ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನ ಪ್ರಕ್ರಿಯೆಗೆ ಚಾಲನೆ ನೀಡಿದ ಮೊದಲ ರಾಜ್ಯ ಎನಿಸಿಕೊಂಡಿದೆ.

ರಾಜ್ಯ ಸರ್ಕಾರ ಸಿದ್ಧಪಡಿಸಿದ, "ಉತ್ತರ ಪ್ರದೇಶ ಮೈನ್ ಆಯೇ ಪಾಕಿಸ್ತಾನ್, ಅಫ್ಘಾನಿಸ್ತಾನ್ ಏವಂ ಬಾಂಗ್ಲಾದೇಶ್ ಕೇ ಶರಣಾರ್ಥಿಯೊಂ ಕಿ ಆಪ್‍ಬೀತಿ ಕಹಾನಿ" ಎಂಬ ವರದಿಯಲ್ಲಿ ನಿರಾಶ್ರಿತರ ವೈಯಕ್ತಿಕ ಕಥೆಗಳನ್ನೂ ವಿವರಿಸಲಾಗಿದೆ.

ಕಳೆದ ವಾರ ಗೃಹ ಇಲಾಖೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ವಲಸೆ ಬಂದು ತಮ್ಮ ಜಿಲ್ಲೆಯ ವ್ಯಾಪ್ತಿಯಲ್ಲಿ ವಾಸವಿರುವ ನಿರಾಶ್ರಿತರನ್ನು ಪತ್ತೆ ಮಾಡಿ ಸರ್ಕಾರಕ್ಕೆ ಪಟ್ಟಿ ಸಲ್ಲಿಸುವಂತೆ ಸೂಚಿಸಿತ್ತು. ಈ ಅಂಕಿ ಅಂಶಗಳನ್ನು ಕ್ರೋಢೀಕರಿಸಿದಾಗ ಸುಮಾರು 40 ಸಾವಿರ ಮುಸ್ಲಿಮೇತರ ಅಕ್ರಮ ವಲಸಿಗರು ಉತ್ತರ ಪ್ರದೇಶದಲ್ಲಿ ವಾಸವಿರುವುದು ಕಂಡುಬಂದಿದೆ.

ಬಹುತೇಕವಾಗಿ ಆಗ್ರಾ, ರಾಯಬರೇಲಿ, ಸಹರಣಪುರ, ಗೋರಖ್‍ಪುರ, ಅಲೀಗಢ, ರಾಂಪುರ, ಮುಝಫರ್ ನಗರ, ಹಾಪುರ, ಮಥುರಾ, ಕಾನ್ಪುರ, ಪ್ರತಾಪ್‍ ಗಢ, ವಾರಣಾಸಿ, ಅಮೇಠಿ, ಝಾನ್ಸಿ, ಬಹರೀಚ್, ಲಖೀಂಪುರ ಖೇರಿ, ಲಕ್ನೋ, ಮೀರಠ್ ಮತ್ತು ಪಿಲಿಬಿಟ್ ಹೀಗೆ 19 ಜಿಲ್ಲೆಗಳಲ್ಲಿ ಇವರು ವಾಸವಿದ್ದಾರೆ. ಫಿಲಿಬಿಟ್‍ನಲ್ಲಿ 30 ರಿಂದ 35 ಸಾವಿರ ವಲಸಿಗರು ವಾಸವಿದ್ದಾರೆ. ನಿರಾಶ್ರಿತರ ವಿವರಗಳು ಹಾಗೂ ಪ್ರತಿ ಜಿಲ್ಲೆಗಳ ಕೆಲವರಿಂದ ಸಾಕ್ಷಿಗಳನ್ನು ಗೃಹ ಸಚಿವಾಲಯ ಹಾಗೂ ಮುಖ್ಯಮಂತ್ರಿಗಳ ಕಚೇರಿಗೆ ಸಲ್ಲಿಸಲಾಗಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News