ಬಿಜೆಪಿ ತೊರೆದು ನಮ್ಮ ಬೆಂಬಲದೊಂದಿಗೆ ಸಿಎಎ ವಿರೋಧಿ ಸರ್ಕಾರ ರಚಿಸಿ: ಅಸ್ಸಾಂ ಸಿಎಂಗೆ ವಿಪಕ್ಷ ಕಾಂಗ್ರೆಸ್ ಸಲಹೆ

Update: 2020-01-13 04:36 GMT
ದೇಬಬ್ರತ ಸೈಕಿಯಾ

ಗುವಾಹತಿ: ಎಲ್ಲ ಬಿಜೆಪಿ ಶಾಸಕರ ಜತೆ ಪಕ್ಷ ತೊರೆದು, ಕಾಂಗ್ರೆಸ್ ಬೆಂಬಲದೊಂದಿಗೆ ಪರ್ಯಾಯ ಸರ್ಕಾರ ರಚಿಸಿ ಎಂದು ಅಸ್ಸಾಂ ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್ ಅವರಿಗೆ ರಾಜ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ ದೇಬಬ್ರತ ಸೈಕಿಯಾ ಸಲಹೆ ಮಾಡಿದ್ದಾರೆ. ಹೊಸ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಸರ್ಕಾರವಾಗಿರುತ್ತದೆ ಎಂದು ಸೈಕಿಯಾ ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಗೃಹ ಸಚಿವಾಲಯ ಸಿಎಎ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ಈ ಹೇಳಿಕೆ ನೀಡಿರುವ ಸೈಕಿಯಾ, "ಸೋನೊವಾಲ್ ಅವರು ಬಿಜೆಪಿ ಶಾಸಕರ ಜತೆ ಪಕ್ಷವನ್ನು ತೊರೆದರೆ, ಸೋನೊವಾಲ್ ನೇತೃತ್ವದ ಹೊಸ ಸರ್ಕಾರ ರಚಿಸಲು ಕಾಂಗ್ರೆಸ್ ಪಕ್ಷ ಬೆಂಬಲ ನೀಡಲಿದೆ" ಎಂದು ಹೇಳಿದ್ದಾರೆ. "ಅಸ್ಸಾಂನ ಪ್ರಸಕ್ತ ಸ್ಥಿತಿಯಲ್ಲಿ ಸೋನೊವಾಲ್ ಸ್ವತಂತ್ರರಾಗಿ ತಮ್ಮ 30 ಮಂದಿ ಶಾಸಕರ ಜತೆ ಬಿಜೆಪಿ ತೊರೆಯಬೇಕು. ಆಗ ಸಿಎಎ ವಿರೋಧಿ ಹಾಗೂ ಬಿಜೆಪಿ ವಿರೋಧಿ ಸರ್ಕಾರ ರಚಿಸಲು ಬೆಂಬಲ ನೀಡುತ್ತೇವೆ" ಎಂದು ವಿವರಿಸಿದ್ದಾರೆ.

"ಬಿಜೆಪಿ ಹಾಗೂ ಮೈತ್ರಿ ಪಕ್ಷವಾದ ಅಸ್ಸಾಂ ಗಣ ಪರಿಷತ್ ತಮ್ಮ ಚುನಾವಣಾ ಭರವಸೆ ಈಡೇರಿಸಲು ವಿಫಲವಾಗಿವೆ. ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್‍ನಿಂದ ಬಿಜೆಪಿ ಸೇರಿರುವ ಹಲವು ಮಂದಿ ಸಚಿವರು ಹಾಗೂ ಶಾಸಕರು ಅಸ್ಸಾಂ ಒಪ್ಪಂದ ಜಾರಿಗೊಳಿಸುವ ಭರವಸೆ ನೀಡಿದ್ದರು" ಎಂದು ಸೈಕಿಯಾ ಹೇಳಿದ್ದಾರೆ.

ಅಸ್ಸಾಂ ಒಪ್ಪಂದ ಜಾರಿ ಬಗ್ಗೆ ಉದಾಸೀನ ತೋರಿರುವ ಕೇಂದ್ರ ಬಿಜೆಪಿ ವಿರುದ್ಧದ ಕ್ರಾಂತಿ ಬಿಜೆಪಿಯನ್ನು ತೊರೆಯುವ ಮೂಲಕ ಆರಂಭವಾಗಲಿ ಎಂದು ಸಲಹೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News