ಆರ್‌ಬಿಐ ನಿರ್ಬಂಧ ಹಿನ್ನೆಲೆ: ಸಹಕಾರ ಬ್ಯಾಂಕ್ ಠೇವಣಿ ವಾಪಸ್ ಗೆ ಆಗ್ರಹಿಸಿ ಗ್ರಾಹಕರ ದುಂಬಾಲು

Update: 2020-01-13 18:38 GMT

ಬೆಂಗಳೂರು, ಜ.13: ಆರ್‌ಬಿಐ ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ ಕಂಗಾಲಾಗಿರುವ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಗ್ರಾಹಕರು ತಮ್ಮ ಠೇವಣಿ ವಾಪಸ್ಸು ಪಡೆಯಲು ನೂರಾರು ಜನರು ಇಲ್ಲಿನ ಬ್ಯಾಂಕ್ ಮುಂದೆ ಜಮಾವಣೆಗೊಂಡಿದ್ದಾರೆ.

ನಗರದ ಬಸವನಗುಡಿಯ ನೆಟ್ಟಕಲ್ಲಪ್ಪ ವೃತ್ತದ ಬಳಿಯಿರುವ ಬ್ಯಾಂಕ್ ಎದುರು ನೂರಾರು ಗ್ರಾಹಕರು ಕೂಡಲೇ ತಮ್ಮ ಠೇವಣಿಯನ್ನು ವಾಪಸ್ಸು ನೀಡುವಂತೆ ಬ್ಯಾಂಕ್ ಸಿಬ್ಬಂದಿಗೆ ದುಂಬಾಲು ಬಿದ್ದಿದ್ದಾರೆ.

ನಗರದಾದ್ಯಂತ 12 ಶಾಖೆಗಳನ್ನು ಹೊಂದಿರುವ ಸಹಕಾರ ಬ್ಯಾಂಕ್ 2,500 ಕೋಟಿಗೂ ಅಧಿಕ ವಹಿವಾಟು ನಡೆಸುತ್ತದೆ. ಒಂದೇ ಬ್ರಾಂಚ್‌ನಲ್ಲಿ 25 ಸಾವಿರಕ್ಕೂ ಅಧಿಕ ಷೇರುದಾರರಿದ್ದಾರೆ. ಇದೀಗ ಆರ್‌ಬಿಐ ಲೈಸೆನ್ಸ್ ರದ್ದು ಮಾಡಿದ ಪರಿಣಾಮ ಹಣ ಹೂಡಿಕೆ ಮಾಡಿದ್ದ ಗ್ರಾಹಕರು ಪರದಾಡುವಂತಾಗಿದೆ. ಹೀಗಾಗಿ, ಹಣ ವಾಪಸ್ಸು ನೀಡುವಂತೆ ನೂರಾರು ಜನರು ಬ್ಯಾಂಕ್ ಮುಂದೆ ಜಮಾಯಿಸಿ ಬ್ಯಾಂಕ್ ಮ್ಯಾನೇಜರ್‌ರನ್ನು ಆಗ್ರಹಿಸಿದರು.

ನಿವೃತ್ತ ನೌಕರರು, ವಯೋವೃದ್ಧರು, ಮಹಿಳೆಯರು ಹೆಚ್ಚಾಗಿ ಬ್ಯಾಂಕ್‌ನಲ್ಲಿ ಖಾತೆ ತೆರೆದು, ತಮ್ಮ ಜೀವನಪೂರ್ತಿ ಸಂಪಾದನೆ ಮಾಡಿದ ಹಣವನ್ನು ಠೇವಣಿ ಇಟ್ಟಿದ್ದಾರೆ. ಅದರಿಂದ ಬರುವ ಬಡ್ಡಿಯಿಂದಲೇ ಕೆಲವರು ಜೀವನ ನಡೆಸುತ್ತಿದ್ದಾರೆ. ಈಗ ಏಕಾಏಕಿ ವಹಿವಾಟು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಜನರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಆರ್‌ಬಿಐ ನಿರ್ಬಂಧ ಹೇರಿಕೆ ಯಾಕೆ?: ನಿಗದಿತ ದಾಖಲೆಗಳಿಲ್ಲದೆ ಬ್ಯಾಂಕ್ ನಿರ್ದೇಶಕರು ಶಾಮೀಲಾಗಿ ಕಮೀಷನ್ ಪಡೆದು ಕೋಟ್ಯಂತರ ರೂ.ಗಳ ಸಾಲವನ್ನು ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಆರ್‌ಬಿಐ ಬ್ಯಾಂಕ್‌ನ ವಹಿವಾಟು ಮೇಲೆ ನಿರ್ಬಂಧ ಹೇರಿದೆ. ಗ್ರಾಹಕರು ಕೇವಲ 35 ಸಾವಿರ ರೂ.ಗಳನ್ನು ಅಷ್ಟೇ ಬ್ಯಾಂಕ್‌ನಿಂದ ಹಿಂಪಡೆಯಲು ಅವಕಾಶ ನೀಡಲಾಗಿದೆ.

ಸಹಕಾರ ಬ್ಯಾಂಕ್‌ನ ನಿರ್ದೇಶಕರು, ಅಧ್ಯಕ್ಷರು ಆರು ತಿಂಗಳೊಳಗೆ ಎಲ್ಲವೂ ಸರಿಯಾಗಲಿದೆ. ಯಾರೂ ಆತಂಕಕ್ಕೆ ಒಳಗಾಗಬೇಡಿ ಎಂದು ಹೇಳಿದ್ದಾರೆ. ಆದರೆ, ಇದನ್ನು ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲ. ಈಗಾಗಲೇ ದೊಡ್ಡ ಮಟ್ಟದ ಬ್ಯಾಂಕ್‌ಗಳಿಂದ, ಫೈನಾನ್ಸ್ ಕಂಪನಿಗಳಿಂದ, ಹಲವು ಸಹಕಾರ ಬ್ಯಾಂಕ್‌ಗಳಿಂದ ವಂಚನೆಗೊಳಗಾದ ಜನರು, ಮುಂದೆ ದೊಡ್ಡ ಮಟ್ಟದ ಹೋರಾಟಕ್ಕೆ ಸಿದ್ಧರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News