ಸಿಎಎ ಬೆಂಬಲಿಸಲು ಸರ್ಕಾರದಿಂದ ಒತ್ತಡ: ಪ್ರಗ್ ನ್ಯೂಸ್ ಮುಖ್ಯ ಸಂಪಾದಕ ರಾಜೀನಾಮೆ

Update: 2020-01-14 03:39 GMT

ಗುವಾಹತಿ, ಜ.14: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಅಸ್ಸಾಂನಲ್ಲಿ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲೇ ರಾಜ್ಯದ ಜನಪ್ರಿಯ ಉಪಗ್ರಹ ಸುದ್ದಿವಾಹಿನಿ ಪ್ರಗ್ ನ್ಯೂಸ್ ಮುಖ್ಯ ಸಂಪಾದಕ ಅಜಿತ್ ಕುಮಾರ್ ಭೂಯನ್ ಇತ್ತೀಚೆಗೆ ರಾಜೀನಾಮೆ ನೀಡಿದ್ದರು. ಆದರೆ ಭೂಯನ್ ರಾಜೀನಾಮೆ ನೀಡಿದ್ದೇಕೆ ಎಂಬ ವಿಚಾರ ಇದೀಗ ಬಹಿರಂಗವಾಗಿದೆ.

ಅಸ್ಸಾಂನ ಬಹುತೇಕ ಮಾಧ್ಯಮಗಳು ಪ್ರತಿಭಟನೆಯನ್ನು ಬೆಂಬಲಿಸಿದ್ದು, ಇದರಲ್ಲಿ ಭೂಯನ್ ಅವರ ಧ್ವನಿ ಗಟ್ಟಿಯಾಗಿ ಕೇಳಿಬರುತ್ತಿತ್ತು. ಹೊಸ ಪೌರತ್ವ ಕಾಯ್ದೆ ಬಗ್ಗೆ ಬಿಜೆಪಿ ಸಕಾರವನ್ನು ಟೀಕಿಸದಂತೆ ನಿರ್ಬಂಧ ವಿಧಿಸಿರುವುದನ್ನು ವಿರೋಧಿಸಿ ಭೂಯನ್ ರಾಜೀನಾಮೆ ನೀಡಿದ್ದಾರೆ ಎಂದು ಅವರ ಸ್ನೇಹಿತರು ಹಾಗೂ ಸಹೋದ್ಯೋಗಿಗಳು ಹೇಳಿದ್ದಾರೆ ಎಂದು newslaundry.com ವರದಿ ಮಾಡಿದೆ.

ಖ್ಯಾತ ಪತ್ರಕರ್ತ ಹಾಗೂ ಹೋರಾಟಗಾರ ಮಂಜೀತ್ ಮಹಾಂತ ಫೇಸ್‌ಬುಕ್‌ನಲ್ಲಿ ವಿಡಿಯೊ ಪೋಸ್ಟ್ ಮಾಡಿ, ಭೂಯನ್ ಅವರ ರಾಜೀನಾಮೆಗೆ ಕಾರಣವಾದ ಅಂಶಗಳನ್ನು ವಿವರಿಸಿದ್ದಾರೆ.

"ಭೂಯನ್ ಅವರು ಸಿಎಎ ವಿರುದ್ಧ ವೈಯಕ್ತಿಕಗಾಗಿ ಗಟ್ಟಿ ಧ್ವನಿ ಎತ್ತಿದ್ದಾರೆ ಎನ್ನುವುದು ನಿಚ್ಚಳ. ಈ ನಿಲುವಿನಿಂದ ತೊಂದರೆಗೆ ಸಿಲುಕಿದ ಬಿಜೆಪಿ ಸರ್ಕಾರ, ಸಂಚು ರೂಪಿಸಿ ಸುದ್ದಿವಾಹಿನಿಯ ಮಾಲಕರ ಮೇಲೆ ಒತ್ತಡ ತಂದಿದೆ. ಅಂತಿಮವಾಗಿ ಭೂಯನ್ ರಾಜೀನಾಮೆ ನೀಡುವವರೆಗೂ ಈ ತಂತ್ರಗಾರಿಕೆ ಮುಂದುವರಿದಿತ್ತು" ಎಂದು ಬಹಿರಂಗಪಡಿಸಿದ್ದಾರೆ.

ಇದನ್ನು ಸುದ್ದಿವಾಹಿನಿಯ ಹಿರಿಯ ಸಂಪಾದಕರೊಬ್ಬರು ಕೂಡಾ ದೃಢಪಡಿಸಿದ್ದಾರೆ. "ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ಆ ಒತ್ತಡಕ್ಕೆ ಮಣಿಯದೇ ರಾಜೀನಾಮೆ ನೀಡಿದರು" ಎಂದು ಹೇಳಿದ್ದಾರೆ.

ಆದರೆ ವಾಹಿನಿಯ ಮಾಲಕ ಸಂಜೀವ್ ನಾರಾಯಣ್ ಇದನ್ನು ನಿರಾಕರಿಸಿದ್ದು, ಭೂಯನ್ ರಾಜೀನಾಮೆಯಿಂದ ನಮಗೆ ಅತೀವ ಬೇಸರವಾಗಿದೆ. ಇನ್ನೂ ಅದನ್ನು ಸ್ವೀಕರಿಸಿಲ್ಲ. ಅವರೊಂದಿಗೆ ಮಾತನಾಡಿ, ಅವರು ಚಾನಲ್‌ಗೆ ಹಿಂದಿರುಗುವಂತೆ ಕೋರುತ್ತೇವೆ" ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News