ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಂದೆಗೆ ಚಿಕಿತ್ಸೆ ನೀಡಿದ್ದ ವೈದ್ಯ ಶಂಕಾಸ್ಪದ ಸಾವು

Update: 2020-01-14 05:49 GMT

ಉನ್ನಾವೋ, ಜ.14: ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಂದೆಗೆ ಚಿಕಿತ್ಸೆ ನೀಡಿದ್ದ ವೈದ್ಯರೊಬ್ಬರು ಸೋಮವಾರ ಶಂಕಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿ ಬರ್ಬರವಾಗಿ ಹಲ್ಲೆಗೊಳಗಾಗಿದ್ದ ಸಂತ್ರಸ್ತೆಯ ತಂದೆಗೆ ವೈದ್ಯ ಪ್ರಶಾಂತ್ ಉಪಾಧ್ಯಾಯ ಎಪ್ರಿಲ್ 2018ರಲ್ಲಿ ಚಿಕಿತ್ಸೆ ನೀಡಿದ್ದರು. ಆಗ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡಿನಲ್ಲಿ ಉಪಾಧ್ಯಾಯ ಕರ್ತವ್ಯದಲ್ಲಿದ್ದರು. ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಅವರನ್ನು ಡಿಸ್ಚಾರ್ಜ್ ಮಾಡಿ ಕಸ್ಟಡಿಗೆ ಕೊಂಡು ಹೋದ ಕೆಲವೇ ಗಂಟೆಗಳಲ್ಲಿ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಂದೆ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದರು.

ಘಟನೆಯ ಸಿಬಿಐ ತನಿಖೆ ನಡೆದ ಸಂದರ್ಭ ಉಪಾಧ್ಯಾಯ ಅಮಾನತುಗೊಂಡಿದ್ದರು. ನಂತರ ಹಿಂದಿನ ಹುದ್ದೆಯಲ್ಲಿಯೇ ಅವರನ್ನು ಮರುನೇಮಿಸಲಾಗಿತ್ತು. ಮುಂದೆ ಅವರನ್ನು ಫತೇಹಪುರ್‌ಗೆ ವರ್ಗಾಯಿಸಲಾಗಿತ್ತು. ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಂದೆಯ ಪ್ರಕರಣ ನ್ಯಾಯಾಲಯದಲ್ಲಿ ಇಂದು ವಿಚಾರಣೆ ನಡೆಯಲಿದೆ.

ವೈದ್ಯರ ಕುಟುಂಬ ಸದಸ್ಯರ ಪ್ರಕಾರ ಸೋಮವಾರ ಬೆಳಗ್ಗೆ ಅವರಿಗೆ ಉಸಿರಾಟದ ಸಮಸ್ಯೆ ಎದುರಾದರೂ ಆಸ್ಪತ್ರೆಗೆ ಹೋಗಲು ನಿರಾಕರಿಸಿದ್ದರು. ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಅದಾಗಲೇ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದರು. ಅವರು ಮಧುಮೇಹಿಯಾಗಿದ್ದರೆಂದು ಅವರ ಕುಟುಂಬ ಸದಸ್ಯರು ಹೇಳಿದ್ದಾರೆ.

ಅತ್ಯಾಚಾರ ಪ್ರಕರಣ ಸಂಬಂಧ ಉಚ್ಚಾಟಿತ ಬಿಜೆಪಿ ಶಾಸಕ ಕುಲದೀಪ್ ಸೆಂಗರ್ ಅಪರಾಧಿಯೆಂದು ಘೋಷಿಸಲ್ಪಟ್ಟು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರೆ ಆತನ ಸೋದರ ಅತುಲ್ ಸೇಂಗರ್ ಸಂತ್ರಸ್ತೆಯ ತಂದೆಯ ಕೊಲೆ ಪ್ರಕರಣ ಸಂಬಂಧ ಜೈಲಿನಲ್ಲಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News