ಒಂದು ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಗಳು ಎಷ್ಟು ಗೊತ್ತೇ ?

Update: 2020-01-14 13:03 GMT

ಬೆಂಗಳೂರು, ಜ.14: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಸೇರಿದಂತೆ ವಿವಿಧ ಬೇಡಿಕೆಗಳು ಈಡೇರಿಕೆಗಾಗಿ ಆಗ್ರಹಿಸಿ ಕಳೆದೊಂದು ತಿಂಗಳಿನಲ್ಲಿ 82 ಪ್ರತಿಭಟನೆಗಳು ನಡೆದಿದ್ದು, ಇದು ನಗರದ ಇತಿಹಾಸದಲ್ಲಿಯೇ ಅತ್ಯಧಿಕವಾಗಿದೆ ಎಂದು ಅಂದಾಜಿಸಲಾಗಿದೆ.

ಬೆಂಗಳೂರಲ್ಲಿ ಡಿ.12ರಿಂದ ಬರೋಬ್ಬರಿ 82 ಪ್ರತಿಭಟನೆಗಳು ನಡೆದಿದ್ದು, ಇದು ಇತಿಹಾಸದಲ್ಲೇ ಅತ್ಯಧಿಕವಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧವಾಗಿ ನಗರದ ವಿವಿಧ ಭಾಗಗಳಲ್ಲಿ ಪ್ರಗತಿಪರ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳು ಪ್ರತಿಭಟನಾ ಸಭೆಗಳು ನಡೆಸುತ್ತಿವೆ. ಅಲ್ಲದೆ, ಕಾರ್ಮಿಕ ಸಂಘಟನೆಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯದ ರಾಜಧಾನಿಯಲ್ಲಿ ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್‌ ರಾವ್, ರಾಷ್ಟ್ರದ ರಾಜಧಾನಿ ದಿಲ್ಲಿಯಲ್ಲಿ ನಡೆದಿರುವ ಪ್ರತಿಭಟನೆಗಳಿಗಿಂತಲೂ ಅಧಿಕವಿರಬಹುದು ಎಂದು ಹೇಳಿದ್ದಾರೆ. 

ಡಿ.15 ರಂದು ದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಅಕ್ರಮವಾಗಿ ಒಳ ಪ್ರವೇಶ ಮಾಡಿದ್ದರು. ಅಲ್ಲದೆ, ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ನಡೆಸಿದ್ದರು. ಇದರ ಕಿಚ್ಚು ದೇಶದಾದ್ಯಂತ ಹತ್ತಿಕೊಂಡಿದ್ದರ ನಡುವೆ ನಗರದಲ್ಲಿಯೂ ಅಧಿಕ ಪ್ರತಿಭಟನೆಗಳು ನಡೆದಿದ್ದವು.

ದಿಲ್ಲಿಯ ಜಾಮಿಯಾ ವಿವಿ ವಿದ್ಯಾರ್ಥಿಗಳ ಮೇಲೆ ದಾಳಿ, ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಮುಸುಕುಧಾರಿಗಳ ಹಲ್ಲೆ, ಎನ್‌ಆರ್‌ಸಿ, ಸಿಎಎ ವಿರೋಧಿಸಿ ಪ್ರತಿಭಟನೆಗಳು ನಡೆದಿವೆ. ದಿನಕ್ಕೆ ಸರಾಸರಿ 20 ಕ್ಕೂ ಅಧಿಕ ಅನುಮತಿ ನೀಡುವಂತೆ ವಿನಂತಿಗಳು ಬಂದಿವೆ. ಅದರಲ್ಲಿ ಹೆಚ್ಚು ಮನವಿಗಳನ್ನು ಸ್ವೀಕರಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರು ಕೇಂದ್ರ ವಿಭಾಗದಲ್ಲಿ ಹೆಚ್ಚು ಪ್ರತಿಭಟನೆಗಳು ನಡೆದಿವೆ. ಕೇಂದ್ರ ವಿಭಾಗದಲ್ಲಿ ಬರುವ ಪುರಭವನ ಬಹುಪಾಲು ಪ್ರತಿಭಟನೆಗಳು ನಡೆದಿವೆ. ಆದರೆ ಎರಡನೇ ಅತಿದೊಡ್ಡ ಸಂಖ್ಯೆಯ ಪ್ರತಿಭಟನೆಗಳನ್ನು ಪಶ್ಚಿಮ ವಿಭಾಗದಲ್ಲಿ ಬರುವ ಸ್ವಾತಂತ್ರ ಉದ್ಯಾನವನದಲ್ಲಿ ನಡೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News