ಸಿಎಎ ವಿರೋಧಿಸುವವರನ್ನು ಬಂಧಿಸಿ, ಇಲ್ಲವೇ ಗಡಿಪಾರು ಮಾಡಿ: ಅಖಿಲ ಭಾರತ ಹಿಂದೂ ಮಹಾಸಭಾ

Update: 2020-01-14 14:40 GMT

ಬೆಂಗಳೂರು, ಜ.14: ಕೇಂದ್ರ ಸರಕಾರ ಜಾರಿಗೆ ತರಲು ನಿರ್ಧರಿಸಿರುವ ಸಿಎಎ ಮತ್ತು ಎನ್‌ಆರ್‌ಸಿಯನ್ನು ಯಾವ ಒತ್ತಡಕ್ಕೂ ಮಣಿಯದೇ ಜಾರಿಗೆ ತರಬೇಕು ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಒತ್ತಾಯಿಸಿದೆ.

ಮಂಗಳವಾರ ಪ್ರೆಸ್‌ಕ್ಲಬ್‌ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ರಾಜ್ಯಾಧ್ಯಕ್ಷ ಡಿ.ವಿವೇಕಾನಂದ ಸ್ವಾಮಿ, ಭಾರತ ಹಲವಾರು ಧರ್ಮ, ಭಾಷೆ, ಜೀವನ ಪದ್ಧತಿಯನ್ನು ಒಳಗೊಂಡಂತಹ ದೇಶವಾಗಿದ್ದು, ಇಲ್ಲಿನ ನಾಗರಿಕರಿಗೆ ನೋಂದಣಿ ಅತ್ಯವಶ್ಯಕವಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ನೇಪಾಳದಿಂದ ಅನಧಿಕೃತ ವಲಸಿಗರು ಭಾರತದಾದ್ಯಂತ ಬಂದು ನೆಲೆಸಿದ್ದಾರೆ. ಇವರಲ್ಲಿ ಅನೇಕರು ಸಮಾಜಘಾತುಕ ಶಕ್ತಿಗಳಾಗಿ ಬೆಳೆಯುತ್ತಿದ್ದಾರೆ. ಇಂತಹ ವ್ಯಕ್ತಿಗಳನ್ನು ದೇಶದ ಆಚೆ ಹಾಕಲು ಸಿಎಎ, ಎನ್‌ಆರ್‌ಸಿ ಅವಶ್ಯಕ ಎಂದು ತಿಳಿಸಿದರು.

ದೆಹಲಿಯಲ್ಲಿರುವ ಜವಾಹರಲಾಲ್ ನೆಹರೂ ಯುನಿವರ್ಸಿಟಿಯನ್ನು ಅನಿರ್ದಿಷ್ಟ ಕಾಲ ಮುಚ್ಚಬೇಕು. ಅಲ್ಲಿನ ವಿದ್ಯಾರ್ಥಿಗಳಿಗೆ ಬೇರೆ ವಿಶ್ವವಿದ್ಯಾಲಯದಲ್ಲಿ ಅವಕಾಶ ಮಾಡಿಕೊಡಬೇಕು. ಸಿಎಎ ಮತ್ತು ಎನ್‌ಆರ್‌ಸಿಯನ್ನು ವಿರೋಧಿಸುವ ರಾಜಕಾರಣಿಗಳು, ರಾಜಕೀಯ ಪಕ್ಷಗಳು, ಚಲನಚಿತ್ರ ನಟ, ನಟಿಯರು ಹಾಗೂ ಅಂತರ್‌ರಾಷ್ಟ್ರೀಯ ಬರಹಗಾರ್ತಿ ಅರುಂಧತಿ ರಾಯ್ ಸೇರಿದಂತೆ ಮುಂತಾದವರನ್ನು ಕಾನೂನು ಚೌಕಟ್ಟಿನಲ್ಲಿ ಬಂಧಿಸಿ, ಜೈಲಿಗಟ್ಟಬೇಕು ಇಲ್ಲವೇ ಭಾರತದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಭಾರತದ ಆಂತರಿಕ ಮತ್ತು ಬಾಹ್ಯ ರಕ್ಷಣೆಯಲ್ಲಿ ತೊಡಗಿರುವ ಪೊಲೀಸ್ ಮತ್ತು ರಕ್ಷಣಾ ಪಡೆಗಳ ಮನೋಬಲ ವೃದ್ಧಿಗೊಳಿಸಿ, ಅವರಿಗೆ ಸರಿಯಾದ ಸವಲತ್ತನ್ನು ಕೇಂದ್ರ ಸರಕಾರ ನೀಡಬೇಕು. ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವ ವಿಷಯದಲ್ಲಿ ಯಾವುದೇ ಬಾಹ್ಯ ಒತ್ತಡಕ್ಕೂ ಸಿಲುಕದೇ ಮುಂದುವರೆಯಬೇಕು ಹಾಗೂ ಸಾವರ್ಕರ್ ಅವರಿಗೆ ಭಾರತರತ್ನ ನೀಡಿ ಗೌರವಿಸಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News