ವಿಮಾನ ಪತನಕ್ಕೆ ಕಾರಣರಾದ ಎಲ್ಲರಿಗೂ ಶಿಕ್ಷೆಯಾಗಬೇಕು: ಇರಾನ್ ಅಧ್ಯಕ್ಷ ರೂಹಾನಿ

Update: 2020-01-14 15:05 GMT

ಟೆಹರಾನ್, ಜ. 14: ಯುಕ್ರೇನ್ ಏರ್‌ಲೈನ್ಸ್‌ಗೆ ಸೇರಿದ ಪ್ರಯಾಣಿಕ ವಿಮಾನವನ್ನು ಆಕಸ್ಮಿಕವಾಗಿ ಹೊಡೆದುರುಳಿಸಿದ ಪ್ರಕರಣದಲ್ಲಿ ಸಂಬಂಧಪಟ್ಟ ಎಲ್ಲರಿಗೂ ಶಿಕ್ಷೆಯಾಗಬೇಕು ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಮಂಗಳವಾರ ಹೇಳಿದ್ದಾರೆ.

‘‘ಈ ಘಟನೆಯಲ್ಲಿ ಯಾರೆಲ್ಲಾ ತಪ್ಪಿತಸ್ಥರಾಗಿದ್ದಾರೋ ಅಥವಾ ಯಾವುದೇ ಮಟ್ಟದಲ್ಲಿ ಯಾರೆಲ್ಲಾ ಬೇಜವಾಬ್ದಾರಿಯ ಮನೋಭಾವ ಹೊಂದಿದ್ದಾರೋ ಅವರಿಗೆಲ್ಲ ಶಿಕ್ಷೆಯಾಗಬೇಕೆಂದು ನಮ್ಮ ಜನರು ಹೇಳುತ್ತಿದ್ದಾರೆ. ಯಾರು ಶಿಕ್ಷೆಗೆ ಅರ್ಹರೋ ಅವರಿಗೆಲ್ಲ ಶಿಕ್ಷೆಯಾಗಬೇಕಾಗಿದೆ’’ ಎಂದು ಟೆಲಿವಿಶನ್‌ನಲ್ಲಿ ಮಾಡಿದ ಭಾಷಣವೊಂದರಲ್ಲಿ ರೂಹಾನಿ ಹೇಳಿದರು.

ಅಮೆರಿಕ ನಡೆಸಿದ ವಾಯು ದಾಳಿಯಲ್ಲಿ ಇರಾನ್ ಸೇನಾಧಿಕಾರಿ ಕಾಸಿಮ್ ಸುಲೈಮಾನಿ ಹತ್ಯೆಗೀಡಾದ ಬಳಿಕ, ಇರಾನ್ ಮತ್ತು ಅಮೆರಿಕಗಳ ನಡುವಿನ ಸಂಘರ್ಷ ಉತ್ತುಂಗದಲ್ಲಿದ್ದಾಗ, ಕಳೆದ ಬುಧವಾರ ಯುಕ್ರೇನ್ ಏರ್‌ಲೈನ್ಸ್ ವಿಮಾನವನ್ನು ಇರಾನ್ ಕ್ಷಿಪಣಿಗಳು ಟೆಹರಾನ್ ಹೊರವಲಯದಲ್ಲಿ ಹೊಡೆದುರುಳಿಸಿದ್ದವು. ಶತ್ರು ಕ್ಷಿಪಣಿ ಎಂಬುದಾಗಿ ಪರಿಗಣಿಸಿ ಕಣ್ತಪ್ಪಿನಿಂದಾಗಿ ನಾಗರಿಕ ವಿಮಾನವನ್ನು ಇರಾನ್ ಸೇನೆ ಕ್ಷಿಪಣಿಯೊಂದರ ಮೂಲಕ ಹೊಡೆದುರುಳಿಸಿದೆ ಎಂಬುದಾಗಿ ಕೆಲವು ದಿನಗಳ ಬಳಿಕ ಇರಾನ್ ಒಪ್ಪಿಕೊಂಡಿತ್ತು. ವಿಮಾನದಲ್ಲಿದ್ದ ಎಲ್ಲ 176 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಹಲವರ ಬಂಧನ: ಇರಾನ್ ನ್ಯಾಯಾಂಗ

 ಯುಕ್ರೇನ್ ಏರ್‌ಲೈನ್ಸ್‌ನ ನಾಗರಿಕ ವಿಮಾನವನ್ನು ಇರಾನ್ ಸೇನೆ ಹೊಡೆದುರುಳಿಸಿದ ಪ್ರಕರಣದಲ್ಲಿ ಹಲವರನ್ನು ಬಂಧಿಸಲಾಗಿದೆ ಎಂದು ಇರಾನ್ ನ್ಯಾಯಾಂಗ ಹೇಳಿದೆ.

‘‘ವಿಸ್ತೃತ ತನಿಖೆಗಳು ನಡೆದಿವೆ ಹಾಗೂ ಕೆಲವರನ್ನು ಬಂಧಿಸಲಾಗಿದೆ’’ ಎಂದು ನ್ಯಾಯಾಂಗ ವಕ್ತಾರ ಗುಲಾಮ್ ಹುಸೈನ್ ಇಸ್ಮಾಯೀಲಿ ಮಂಗಳವಾರ ತಿಳಿಸಿದರು ಎಂದು ಇರಾನ್ ಸರಕಾರಿ ಮಾಧ್ಯಮ ವರದಿ ಮಾಡಿದೆ.

ಆದರೆ, ಎಷ್ಟು ಮಂದಿಯನ್ನು ಬಂಧಿಸಲಾಗಿದೆ ಎನ್ನುವುದನ್ನು ಅವರು ತಿಳಿಸಿಲ್ಲ ಹಾಗೂ ಬಂಧಿತರ ಹೆಸರುಗಳನ್ನೂ ಹೇಳಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News