ಸಂಚಾರ ನಿಯಮ ಪಾಲನೆ ನಮ್ಮ ಸಂಸ್ಕೃತಿ ಆಗಲಿ: ಮುಖ್ಯಮಂತ್ರಿ ಯಡಿಯೂರಪ್ಪ

Update: 2020-01-14 16:20 GMT

ಬೆಂಗಳೂರು, ಜ.14: ಜನ ದಟ್ಟಣೆ ಹೆಚ್ಚಾದಂತೆ ವಾಹನಗಳ ಸಂಖ್ಯೆಯೂ ಗಣನೀಯವಾಗಿ ಅಧಿಕವಾಗಿದ್ದು, ಇದರ ಪರಿಣಾಮ ಅಪಘಾತಗಳು ಕೂಡ ಹೆಚ್ಚಾಗಿವೆ. ಆದ್ದರಿಂದ, ಸಂಚಾರ ನಿಯಮಗಳ ಕಡ್ಡಾಯ ಪಾಲನೆ ನಮ್ಮ ಸಂಸ್ಕೃತಿ ಮತ್ತು ಜೀವನ ವಿಧಾನವಾಗಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಮಂಗಳವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಸಾರಿಗೆ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ, 31ನೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ-2020 ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದಲ್ಲಿ ಪ್ರತಿ ವರ್ಷ ಒಂದೂವರೆ ಲಕ್ಷ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿಯೂ ಹಿಂದಿನ ವಾರ್ಷಿಕ ಸಾಲಿನಲ್ಲಿ 10,317 ಮಂದಿ ಅಪಘಾತ ಪ್ರಕರಣಗಳಲ್ಲಿ ಸಾವನ್ನಪ್ಪಿದ್ದಾರೆ, 49,571 ಮಂದಿ ಗಾಯಾಳುಗಳಾಗಿದ್ದಾರೆ. ಇದು ಅತ್ಯಂತ ಗಂಭೀರ ಸಮಸ್ಯೆಯಾಗಿದ್ದು, ಇದನ್ನು ಸಂಚಾರ ನಿಯಮಗಳ ಕಡ್ಡಾಯ ಪಾಲನೆ, ತಂತ್ರಜ್ಞಾನಗಳ ಅಳವಡಿಕೆ ಮೂಲಕ ಕಡಿಮೆ ಮಾಡಬಹುದು ಎಂದರು.

ಸಂಚಾರ ನಿಯಮ ಪಾಲನೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅಡ್ಡಾದಿಡ್ಡಿ ವಾಹನ ನಿಲ್ಲಿಸುವುದು, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಚಾಲನೆ ವೇಳೆ ಮೊಬೈಲ್ ಬಳಕೆ ಮುಂತಾದ ಪ್ರವೃತ್ತಿಗಳನ್ನು ಬಿಡಬೇಕು. ಇವುಗಳು ಅಪಘಾತಕ್ಕೆ ಕಾರಣವಾಗುತ್ತವೆ ಎಂದು ಯಡಿಯೂರಪ್ಪ ಹೇಳಿದರು.

ಜೀವನೋಪಾಯ ಹುಡುಕಿ ಬೆಂಗಳೂರಿಗೆ ವಿವಿಧ ಕಡೆಗಳಿಂದ ಜನರು ಬರುತ್ತಿರುವುದರಿಂದ ಇಲ್ಲಿನ ಜನಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ವಾಹನಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಹೆಚ್ಚಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸಬೇಕು ಎಂದು ಮನವಿ ಮಾಡಿದರು.

ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬ ಗಾದೆಯಂತೆ ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಚಾರ ನಿಯಮಗಳ ಬಗ್ಗೆ ಮಾಹಿತಿ ನೀಡಿದರೆ ಭವಿಷ್ಯದಲ್ಲಿ ಅವರು ಸಂಚಾರ ನಿಯಮ ಪಾಲಿಸುವವರಾಗುತ್ತಾರೆ. ಮಾತ್ರವಲ್ಲ ಅವರು ತಮ್ಮ ಪೋಷಕರಿಗೂ ತಿಳಿ ಹೇಳುತ್ತಾರೆ. ಆದ್ದರಿಂದ ಇಂದಿನ ಕಾರ್ಯಕ್ರಮದಲ್ಲಿ 30 ಸಾವಿರ ಮಕ್ಕಳನ್ನು ಇಲ್ಲಿಗೆ ಕರೆಸಲಾಗಿದೆ. ಇದೇ ರೀತಿಯ ಕಾರ್ಯಕ್ರಮ ರಾಜ್ಯದ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿಯೂ ನಡೆಯುತ್ತಿವೆ ಎಂದು ಹೇಳಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ವರ್ಷ ಪೂರ್ತಿ ನಡೆಸಲು ಉದ್ದೇಶಿಸಲಾಗಿದೆ. ತಿಂಗಳಲ್ಲಿ ಒಂದು ವಾರ ಕಾಲ, ಪ್ರತಿ ಶಾಲೆ, ಮೊಹಲ್ಲಾ, ಏರಿಯಾ ಸೇರಿ ಬೇರೆ ಬೇರೆ ಪ್ರದೇಶಗಳಲ್ಲಿ ನಿರಂತರವಾಗಿ ಈ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು.

ಅಪಘಾತ ಸಾವನ್ನು ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯ ಸರಕಾರ ಹಲವು ಉಪಕ್ರಮಗಳನ್ನು ಕೈಗೊಂಡಿದೆ. ಇತ್ತೀಚಿಗೆ ರಾಜ್ಯ ಸರಕಾರ 88 ಹೆಚ್ಚುವರಿ ಹೆದ್ದಾರಿ ಪೆಟ್ರೋಲಿಂಗ್ ವಾಹನವನ್ನು ಒದಗಿಸಿದೆ. ಇದಕ್ಕೂ ಮೊದಲು 180 ಇಂತಹ ವಾಹನಗಳು ಕಾರ್ಯ ನಿರ್ವಹಿಸುತ್ತಿದ್ದವು. ಇದರೊಂದಿಗೆ ಆಂಬುಲೆನ್ಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಅಪಘಾತ ಪ್ರಮಾಣದಲ್ಲಿ ಕಡಿಮೆಯಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಬೆಂಗಳೂರು ಸಂಚಾರ ಪೊಲೀಸರ ಸಾಧನೆಗಳ ಕೈಪಿಡಿ,ರಸ್ತೆ ಸುರಕ್ಷತೆ ತಿಳುವಳಿಕೆ ಕೈಪಿಡಿ, ಸಾರಿಗೆ ಇಲಾಖೆಯ ಕೈಪಿಡಿ, ರಸ್ತೆ ಸುರಕ್ಷತೆ ಜಾಗೃತಿ ಕೈಪಿಡಿ ಬಿಡುಗಡೆ ಮಾಡಲಾಯಿತು. ಶಾಸಕ ರಿಝ್ವೆನ್ ಅರ್ಶದ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್. ರಾಜು, ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News