ಎಚ್‌ಡಿಕೆ ಸಂಬಂಧಿ ವಿರುದ್ಧ ಭೂಕಬಳಿಕೆ ಆರೋಪ: ಲೋಕಾಯುಕ್ತ ಆದೇಶದಂತೆ ಕ್ರಮ- ಹೈಕೋರ್ಟ್‌ಗೆ ಹೇಳಿಕೆ

Update: 2020-01-14 16:57 GMT

ಬೆಂಗಳೂರು, ಜ.14: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಡಿ.ಸಿ.ತಮ್ಮಣ್ಣರವರ ಸಂಬಂಧಿ ಸಾವಿತ್ರಮ್ಮ ವಿರುದ್ಧ ಕೇತಗಾನಹಳ್ಳಿ ಭೂಕಬಳಿಕೆ ಆರೋಪ ಪ್ರಕರಣದ ಬಗ್ಗೆ 2014ರಲ್ಲಿ ಲೋಕಾಯುಕ್ತರು ಹೊರಡಿಸಿದ್ದ ಆದೇಶದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೈಕೋರ್ಟ್‌ಗೆ ರಾಜ್ಯ ಸರಕಾರ ತಿಳಿಸಿದೆ. 

ಈ ಕುರಿತು ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್.ಆರ್. ಹಿರೇಮಠ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕಾ ಹಾಗೂ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿದಾರರ ಪರ ವಾದಿಸಿದ ವಕೀಲರು, ಭೂ ಒತ್ತುವರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಲೋಕಾಯುಕ್ತ 2014ರ ಆ. 5ರಂದು ಆದೇಶಿಸಿದೆ. ಆದರೆ, ಕೇತಗಾನಹಳ್ಳಿಯಲ್ಲಿ ಒತ್ತುವರಿ ಮಾಡಿರುವ 54 ಎಕರೆ ತೆರವುಗೊಳಿಸಲು ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ಸರಕಾರದ ಪರ ವಾದಿಸಿದ ವಕೀಲರು, ಸಾವಿತ್ರಮ್ಮ ವಿರುದ್ಧ ಕೇತಗಾನಹಳ್ಳಿ ಭೂಕಬಳಿಕೆ ಆರೋಪ ಪ್ರಕರಣದ ಬಗ್ಗೆ ಲೋಕಾಯುಕ್ತರ ಆದೇಶದಂತೆ ಕ್ರಮ ಕೈಕೊಳ್ಳಲಾಗುವುದು ಎಂದು ಪೀಠಕ್ಕೆ ತಿಳಿಸಿದರು.

ಏನಿದು ಅರ್ಜಿ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಆ ಜಮೀನಿನ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ಸುಮಾರು 75 ಲಕ್ಷದಿಂದ 1 ಕೋಟಿವರೆಗೆ ಇದೆ. ಆ ಜಮೀನನ್ನು ಕುಮಾರಸ್ವಾಮಿ ಮತ್ತಿತರರು ಪ್ರತಿ ಎಕರೆಗೆ 5 ಸಾವಿರದಂತೆ ಖರೀದಿಸಿದ್ದಾರೆ. ಇದು ಕರ್ನಾಟಕ ಭೂ ಕಂದಾಯ ಕಾಯ್ದೆಗೆ ವಿರುದ್ಧವಾಗಿದೆ. ಇದರಿಂದ ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ನಷ್ಟವಾಗಿದೆ. ಹೀಗಾಗಿ, ಲೋಕಾಯುಕ್ತರ ಆದೇಶದಂತೆ ಕ್ರಮ ಕೈಗೊಳ್ಳಲು ನಿರ್ದೇಶಿಸಬೇಕು ಎಂಬುದು ಅರ್ಜಿದಾರರ ಕೋರಿಕೆ. ವಿಚಾರಣೆಯನ್ನು ಮುಂದೂಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News