ಮಲೇಶ್ಯಾದ ತಾಳೆ ಎಣ್ಣೆ ಆಮದು ಮಾಡದಂತೆ ಸರಕಾರದ ಎಚ್ಚರಿಕೆ

Update: 2020-01-14 17:08 GMT

ಮುಂಬೈ, ಜ.14: ಮಲೇಶ್ಯಾದೊಂದಿಗೆ ರಾಜತಾಂತ್ರಿಕ ವೈಮನಸ್ಸಿನ ಕಾರಣ ಆ ದೇಶದಿಂದ ತಾಳೆಎಣ್ಣೆ(ಪಾಮ್ ಆಯಿಲ್) ಆಮದು ಮಾಡಿಕೊಳ್ಳಬಾರದು ಎಂದು ಭಾರತದ ತಾಳೆಎಣ್ಣೆ ಆಮದುದಾರರಿಗೆ ಕೇಂದ್ರ ಸರಕಾರ ಅನಧಿಕೃತವಾಗಿ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ಕಾಶ್ಮೀರದ ವಿಷಯದಲ್ಲಿ ಭಾರತ ಸರಕಾರ ಕೈಗೊಂಡಿರುವ ನಿರ್ಧಾರ ಹಾಗೂ ಪೌರತ್ವ ಕಾಯ್ದೆಯನ್ನು ಮಲೇಶ್ಯಾದ ಪ್ರಧಾನಿ ಟೀಕಿಸಿದ ಹಿನ್ನೆಲೆಯಲ್ಲಿ ಭಾರತ ಸರಕಾರ ಮಲೇಶ್ಯಾದಿಂದ ಸಂಸ್ಕರಿಸಿದ ತಾಳೆಎಣ್ಣೆ ಮತ್ತು ಪಾಮೋಲಿನ್ ಆಮದಿಗೆ ನಿರ್ಬಂಧ ವಿಧಿಸಿತ್ತು. ಇದೀಗ ಕಚ್ಛಾ ಪಾಮ್‌ಆಯಿಲ್ ಆಮದು ಮಾಡಿಕೊಳ್ಳದಂತೆಯೂ ಅನಧಿಕೃತವಾಗಿ ಸೂಚಿಸುವ ಮೂಲಕ ಇನ್ನಷ್ಟು ಬಿಗಿ ನಿಲುವು ತಳೆದಿದೆ.

ಮಲೇಶ್ಯಾದಿಂದ ಕಚ್ಛಾ ತಾಳೆಎಣ್ಣೆ ಆಮದು ಮಾಡಿಕೊಳ್ಳಲು ಅಧಿಕೃತವಾಗಿ ನಿಷೇಧ ವಿಧಿಸಿಲ್ಲ. ಆದರೆ ಕೇಂದ್ರ ಸರಕಾರ ಸೂಚನೆ ನೀಡಿರುವ ಕಾರಣ ಭಾರತೀಯ ಆಮದುಗಾರರು ತಾಳೆಎಣ್ಣೆ ಆಮದು ಮಾಡಿಕೊಳ್ಳಲು ಹಿಂಜರಿಯುತ್ತಿದ್ದಾರೆ ಎಂದು ಉದ್ಯಮದ ಮೂಲಗಳು ತಿಳಿಸಿವೆ. ಅಧಿಕೃತವಾಗಿ ಕಚ್ಛಾ ತಾಳೆಎಣ್ಣೆ ಆಮದು ಮಾಡಿಕೊಳ್ಳಲು ಯಾವುದೇ ನಿಷೇಧವಿಲ್ಲ. ಆದರೆ ಸರಕಾರದ ಸೂಚನೆಯ ಬಳಿಕ ಯಾರೊಬ್ಬರೂ ಕಚ್ಛಾ ತಾಳೆಎಣ್ಣೆ ಆಮದು ಮಾಡಿಕೊಳ್ಳಲು ಮುಂದೆ ಬರುತ್ತಿಲ್ಲ . ಈಗ ಇಂಡೋನೇಶ್ಯಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಎಣ್ಣೆ ಸಂಸ್ಕರಿಸುವ ಕೈಗಾರಿಕೆಗಳ ಮಾಲಕರು ಹೇಳಿದ್ದಾರೆ.

ಭಾರತ ತಾಳೆ ಎಣ್ಣೆ ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಅಗ್ರಸ್ಥಾನದಲ್ಲಿದ್ದು ವಾರ್ಷಿಕವಾಗಿ 9 ಮಿಲಿಯನ್ ಟನ್‌ಗೂ ಹೆಚ್ಚು ತಾಳೆಎಣ್ಣೆಯನ್ನು ಪ್ರಮುಖವಾಗಿ ಮಲೇಶ್ಯಾ ಮತ್ತು ಇಂಡೋನೇಶ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News