ಜೆಎನ್‌ಯು ಹಿಂಸಾಚಾರ: ನಾನು ಭಾಗಿಯಾಗಿಲ್ಲ ಎಂದ ಶಂಕಿತ ವಿದ್ಯಾರ್ಥಿನಿ

Update: 2020-01-15 18:31 GMT

ಹೊಸದಿಲ್ಲಿ, ಜ. 15: ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ಶಂಕಿತರಲ್ಲಿ ಓರ್ವಳಾದ ಜೆಎನ್‌ಯು ವಿದ್ಯಾರ್ಥಿನಿ ಕೋಮಲ್ ಶರ್ಮಾ ರಾಷ್ಟ್ರೀಯ ಮಹಿಳಾ ಆಯೋಗವನ್ನು ಭೇಟಿಯಾಗಿ ತನ್ನ ಹೆಸರಿಗೆ ಕಳಂಕ ತರಲಾಗಿದೆ ಎಂದು ಆರೋಪಿಸಿದ್ದಾರೆ. ಆಕೆಯ ದೂರಿಗೆ ಅನುಗುಣವಾಗಿ ರಾಷ್ಟ್ರೀಯ ಮಹಿಳಾ ಆಯೋಗ ಈ ವಿಷಯದ ಕುರಿತು ಪರಿಶೀಲನೆ ನಡೆಸುವಂತೆ ದಿಲ್ಲಿ ಪೊಲೀಸ್ ಹಾಗೂ ಮಾಧ್ಯಮ ಸಂಸ್ಥೆಗಳಿಗೆ ಪತ್ರ ಬರೆದಿದೆ. ಜೆಎನ್‌ಯು ಹಿಂಸಾಚಾರಕ್ಕೆ ಸಂಬಂಧಿಸಿ ಆರೋಪಿಗಳಾದ ಕೋಮಲ್ ಶರ್ಮಾ, ರೋಹಿತ್ ಶಾ ಹಾಗೂ ಅಕ್ಷತ್ ಅವಸ್ಥಿ ಪರಾರಿಯಾಗಿದ್ದಾರೆ ಎಂದು ನಿನ್ನೆ ದಿಲ್ಲಿ ಪೊಲೀಸರು ಹೇಳಿದ್ದರು. ಸರ್ವರ್‌ನಿಂದ ಸಿಸಿಟಿವಿ ದೃಶ್ಯಾವಳಿ ಪಡೆದುಕೊಳ್ಳಲು ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ಕ್ಯಾಂಪಸ್‌ನಲ್ಲಿ ಮಂಗಳವಾರ ಇಡೀ ದಿನ ಕಳೆದಿತ್ತು. ಈ ತಿಂಗಳ ಆರಂಭದಲ್ಲಿ ಜೆಎನ್‌ಯು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರ ಮೇಲೆ ದಾಳಿ ಆಯೋಜಿಸಲು ಬಳಸಿದ್ದು ಎಂದು ಹೇಳಲಾದ ಎರಡು ವಾಟ್ಸ್ ಆ್ಯಪ್ ಗುಂಪುಗಳ ಸದಸ್ಯರ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳುವಂತೆ ದಿಲ್ಲಿ ನ್ಯಾಯಾಲಯ ಪೊಲೀಸರಿಗೆ ಸೂಚಿಸಿತ್ತು. ಪೊಲೀಸರು ಕೇಳಿದ ಸಿಸಿಟಿವಿ ದೃಶ್ಯಾವಳಿಯನ್ನು ಆದಷ್ಟು ಬೇಗ ನೀಡುವಂತೆ ನ್ಯಾಯಮೂರ್ತಿ ಬ್ರಿಜೇಶ್ ಸೇಥಿ ಜೆಎನ್‌ಯುಗೆ ನಿರ್ದೇಶಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News