ಬಳಕೆಯಾಗದ 60 ಎಕರೆ ಕ್ವಾರೆ ಗುರುತಿಸಿದ ಬಿಬಿಎಂಪಿ!

Update: 2020-01-15 18:32 GMT

ಬೆಂಗಳೂರು, ಜ.15: ನಗರದ ವಿವಿಧೆಡೆ ಬಳಕೆ ಮಾಡದೆ ಇರುವ ಮಾರೇನಹಳ್ಳಿ, ಬಾಗಲೂರು, ಹುಲ್ಲಹಳ್ಳಿ ಹಾಗೂ ಉತ್ತರಹಳ್ಳಿ ವ್ಯಾಪ್ತಿಯಲ್ಲಿ 60 ಎಕರೆ ವಿಸ್ತೀರ್ಣ ಇರುವ ಕ್ವಾರೆಯನ್ನು ಗುರುತಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಅನಿಲ್‌ಕುಮಾರ್ ತಿಳಿಸಿದರು.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕ್ವಾರೆಗಳಲ್ಲಿ ಕಸ ಸುರಿಯುವುದಕ್ಕೆ ವಿವಿಧ ಇಲಾಖೆಗಳಿಂದ ಅನುಮತಿ ಪಡೆದುಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮಿಟ್ಟಗಾನಹಗಳ್ಳಿಯ ತಾತ್ಕಾಲಿಕ ಕ್ವಾರೆಯಲ್ಲಿ ನಗರದ ಕಸ ಸುರಿಯುವುದಕ್ಕೆ ಸಿದ್ಧತೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಮಂಗಳವಾರ ಅಲ್ಪಾವಧಿ ಟೆಂಡರ್ ಕರೆಯಲಾಗಿದ್ದು, ಜ.22ರವರೆಗೆ ಟೆಂಡರ್‌ದಾರರು ಇದರಲ್ಲಿ ಭಾಗವಹಿಸುವುದಕ್ಕೆ ಅವಕಾಶವಿದೆ. ಮುಂದೆ ಭವಿಷ್ಯದಲ್ಲಿ ಕಸದ ಸಮಸ್ಯೆ ಉಂಟಾಗುವುದನ್ನು ತಡೆಯುವ ನಿಟ್ಟಿನಲ್ಲಿ ಬಳಕೆ ಮಾಡದೆ ಉಳಿದಿರುವ ಕ್ವಾರೆಗಳನ್ನು ಗುರುತಿಸಲಾಗಿದೆ ಎಂದರು.

ನಗರದ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲೂ ಇಂದೋರ್ ಮಾದರಿಯನ್ನು ನಗರದಲ್ಲಿ ಅಳವಡಿಸಿಕೊಳ್ಳಲಾಗುತ್ತಿದ್ದು, ಇನ್ನು ಆರು ತಿಂಗಳಲ್ಲಿ ಕಸದ ಸಮಸ್ಯೆ ಸುಧಾರಿಸುವ ಸಾಧ್ಯತೆ ಇದೆ. ಇನ್ನು ಮಿಟ್ಟಗಾನಹಳ್ಳಿಯಲ್ಲಿ ಕಸ ಸುರಿಯುವುದಕ್ಕೆ ತಾತ್ಕಾಲಿಕ ಕ್ವಾರೆಯನ್ನು ಗುರುತಿಸಲಾಗಿದ್ದು, ಇಲ್ಲಿ ಒಂದು ತಿಂಗಳ ಕಾಲ ಕಸ ಸುರಿಯಬಹುದಾಗಿದೆ. ಇದರ ಒಳಗಾಗಿ ಕಸ ಸುರಿಯುವುದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ. ಆ ಸಿದ್ಧತೆಗಳನ್ನು ಪಾಲಿಕೆ ಮಾಡಿಕೊಂಡಿದೆ ಎಂದರು.

ನಗರದಲ್ಲಿ ಉತ್ಪತ್ತಿಯಾಗುವ ಕಸವನ್ನು ಭೂಭರ್ತಿಗಳಲ್ಲಿ ಸುರಿಯದೆ ಸಂಸ್ಕರಣೆ ಮಾಡುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಪಾಲಿಕೆಗೆ ಎಚ್ಚರಿಸುತ್ತಿದ್ದರೂ ಸಹ ಪಾಲಿಕೆ ಹೊಸ ಕ್ವಾರೆಗಳ ಹುಡುಕಾಟ ನಡೆಸುತ್ತಿದೆ. ಮಿಟ್ಟಗಾನಹಳ್ಳಿಯ ಕ್ವಾರೆ ಭರ್ತಿಯಾಗುತ್ತಿದ್ದು, ಪ್ರತ್ಯೇಕ ಕ್ವಾರೆಗೆ ಅಲ್ವಾವಧಿ ಟೆಂಡರ್ ಕರೆದಿರುವ ಪಾಲಿಕೆ ಈ ಮಧ್ಯೆ ನಗರದ ವಿವಿಧೆಡೆ ಹೊಸ ಕ್ವಾರೆಗಳನ್ನು ಗುರುತಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News