ರಾಜಕೀಯ ಲಾಭಕ್ಕೆ ಕಾಂಗ್ರೆಸ್‌ನಂತೆ ಬಿಜೆಪಿಯಿಂದ ಅಧಿಕಾರ ದುರಪಯೋಗ: ಮಾಯಾವತಿ

Update: 2020-01-15 18:40 GMT

ಲಕ್ನೋ, ಜ. 15: ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್‌ನಂತೆ ಬಿಜೆಪಿ ಕೂಡ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಬಿಎಸ್ಪಿಯ ವರಿಷ್ಠೆ ಮಾಯಾವತಿ ಬುಧವಾರ ಹೇಳಿದ್ದಾರೆ. ಬಿಎಸ್ಪಿ ಕುರಿತು ಹಾಗೂ ಬಿಎಸ್ಪಿ ಪೌರತ್ವ ತಿದ್ದುಪಡಿ ವಿರುದ್ಧ ಪ್ರತಿಭಟನೆ ನಡೆಸುತ್ತಿಲ್ಲ ಎಂದು ಕಾಂಗ್ರೆಸ್ ಅಪಪ್ರಚಾರ ನಡೆಸುತ್ತಿದೆ ಎಂದು ಅವರು ಹೇಳಿದರು. ‘‘ಕಾಂಗ್ರೆಸ್‌ನಂತೆ ಬಿಜೆಪಿ ಕೂಡ ರಾಜಕೀಯ ಲಾಭಕ್ಕಾಗಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬುದನ್ನು ದೇಶ ಗಮನಿಸುತ್ತಿದೆ. ಇದರಿಂದಾಗಿ ಸಾಂವಿಧಾನಿಕ ನಿಯಮಗಳು ಹಾಗೂ ಪ್ರಜಾಪ್ರಭುತ್ವದ ಹಕ್ಕುಗಳು ಬೆದರಿಕೆಗೆ ಒಳಗಾಗಿವೆ’’ ಎಂದು ಅವರು ಹೇಳಿದರು.

ಸಾರ್ವಜನಿಕರ ಕಲ್ಯಾಣ ಹಾಗೂ ಆರ್ಥಿಕತೆ ಬಗ್ಗೆ ಬಿಜೆಪಿ ನಿರ್ಲಕ್ಷ ವಹಿಸಿದ ಕಾರಣಕ್ಕೆ ದೇಶಾದ್ಯಂತ ಬಡತನ, ಅನಕ್ಷರತೆ, ನಿರುದ್ಯೋಗ ಹೆಚ್ಚಾಗಲು, ಬೆಲೆ ಏರಿಕೆಯಾಗಲು, ದ್ವೇಷದ ವಾತಾವರಣ ಉಂಟಾಗಲು ಕಾರಣವಾಯಿತು ಎಂದು ಮಾಯಾವತಿ ಹೇಳಿದರು. ಬಿಜೆಪಿ ಕಾಂಗ್ರೆಸ್‌ನ ದಾರಿಯಲ್ಲೇ ಸಾಗುತ್ತಿರುವುದು ದೇಶದ ದುರಾದೃಷ್ಟ. ಸಂವಿಧಾನ ದುರ್ಬಲ ವರ್ಗದವರನ್ನು ರಕ್ಷಿಸುತ್ತದೆ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಈ ಜನರನ್ನು ಮರೆತಿದೆ. ಹೀಗಾದರೆ, ದೇಶ ಪ್ರಗತಿಯಾಗುವುದು ಹೇಗೆ ? ಋಣಾತ್ಮಕ ವಿಷಯಗಳ ಕಾರಣಕ್ಕೆ ದೇಶ ಪತ್ರಿಕೆಗಳ ಹೆಡ್‌ಲೈನ್ ಆಗುತ್ತಿರುವುದು ಖೇದಕರ ಎಂದು ಅವರು ಹೇಳಿದರು. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಧ್ವನಿ ಎತ್ತಿದ ಮೊದಲ ಪಕ್ಷ ಬಿಎಸ್ಪಿ. ಆದರೆ, ನಾವು ಶಾಂತಿಯುತ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಬಿಜೆಪಿ ಮಾತ್ರವಲ್ಲ ಕಾಂಗ್ರೆಸ್ ಕೂಡ ರಾಜಕೀಯ ಲಾಭಕ್ಕಾಗಿ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಮಾಯಾವತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News